ಸಪ್ನಾ ಅನಿಗೋಳಗೆ ಮತ್ತೊಂದು ಗರಿ

Another feather in the cap for Sapna Anigola
ಶಿಕ್ಷಕಿ ಸಪ್ನಾ ಅನಿಗೋಳ ಭಾವಚಿತ್ರ.
Published on

ಮಹಾಲಿಂಗಪುರ :ಪಟ್ಟಣದ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪ್ರೌಢಶಾಲೆ ವಿಜ್ಞಾನ ಶಿಕ್ಷಕಿ ಸಪ್ನಾ ಅನಿಗೋಳ ಕೇಂದ್ರ ಸರ್ಕಾರದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದು, ಪ್ರಸಕ್ತ ವರ್ಷದಲ್ಲಿ ಆಯ್ಕೆಯಾದ ಕರ್ನಾಟಕ ರಾಜ್ಯದ ಇಬ್ಬರು ಶಿಕ್ಷಕರಲ್ಲಿ ಸಪ್ನಾ ಒಬ್ಬರು ಎನ್ನುವುದು ಹೆಮ್ಮೆಯ ವಿಶೇಷ.

ಎಂಎಸ್ಸಿ, ಬಿಇಡಿ ಪದವೀಧರರಾದ ಅನಿಗೋಳ ಎರಡು ವರ್ಷಗಳ ಹಿಂದೆ (2021) ರಾಜ್ಯ ಸರ್ಕಾರದಿಂದ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದುಕೊಂಡಿದ್ದರು.

ಸದಾ ಸಾಮಾಜಿಕ ಕಾಳಜಿ, ಪರಿಸರ ಕಾಳಜಿ, ವಿಜ್ಞಾನ ಬೋಧನೆಯಲ್ಲಿ ತೊಡಗಿ ಅನೇಕ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿರುವ ಸಪ್ನಾ, 2020 ರಲ್ಲಿ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕಿ ಪ್ರಶಸ್ತಿ ಕೂಡ ಪಡೆದಿದ್ದಾರೆ.

ಇಳಕಲ್ಲನಲ್ಲಿ 2014-15 ರಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಪ್ರೌಢಶಾಲೆ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಉತ್ತಮ ನಿರ್ದೇಶನಕ್ಕಾಗಿ ಪ್ರಶಸ್ತಿ ಪತ್ರ ಪಡೆದಿದ್ದಾರೆ. ಪ್ರತಿ ತಿಂಗಳು ಮಹಾಲಿಂಗಪುರ ಪಟ್ಟಣದಲ್ಲಿ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಪ್ರೊಜೆಕ್ಟರ್ ಮೂಲಕ ಶಿವಶರಣರ ವಚನದಲ್ಲಿ ಆರೋಗ್ಯದ ಮಾಹಿತಿ ನೀಡುತ್ತ ದುಶ್ಚಟ ತೊರೆಯುವ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಪ್ಲಾಸ್ಟಿಕ್ ತ್ಯಜಿಸಿ ಅಭಿಯಾನದಡಿ ಸ್ವತಃ ಕಾಟನ್ ಚೀಲಗಳನ್ನು ಹೊಲಿಸಿ ಅನೇಕ ಕಡೆ ಉಚಿತವಾಗಿ ಹಂಚಿಕೆ ಮಾಡಿದ್ದಾರೆ. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಚಾಲಕರಾಗಿರುವ ಸಪ್ನಾ ನೀಡಿದ ಅತ್ಯುತ್ತಮ ತರಬೇತಿಯಿಂದ 8 ವಿದ್ಯಾರ್ಥಿಗಳು 2019-20ರ ರಾಜ್ಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ರದರ್ಶನ ಚಂದನ ವಾಹಿನಿಯಲ್ಲಿ ಪ್ರೌಢಶಾಲೆ ಹಂತದ ತರಗತಿಗಳಿಗೆ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ವಿಡಿಯೋ ಪಾಠಗಳನ್ನು ಸಿದ್ಧಪಡಿಸಲು ಸಂಪನ್ಮೂಲ ವ್ಯಕ್ತಿಯಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ.

ಇವರಿಂದ ಮಾರ್ಗದರ್ಶನ ಪಡೆದುಕೊಂಡ ಎಸ್‌ಎಸ್‌ಎಲ್‌ಸಿ ಹಳೇ ವಿದ್ಯಾರ್ಥಿ ವಿಜಯ ಪಟ್ಟಣಶೆಟ್ಟಿ 2019ರ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ 7 ನೇ ನ್ಯಾಷನಲ್ ಎಕ್ಸಿಬಿಷನ್ ಪ್ರೊಜೆಕ್ಟ್ ಕಾಂಪಿಟೇಷನ್‌ನಲ್ಲಿ ಭಾಗವಹಿಸಿ ಇನ್‌ಸ್ಪೈರ್ ಅವಾರ್ಡ್ ಪಡೆದಿರುವುದು ಸಪ್ನಾ ಅವರ ಬೋಧನಾ ಮಟ್ಟ ಅತ್ಯುನ್ನತ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಭಾರತ ಸರ್ಕಾರದ ಸಹಯೋಗದೊಂದಿಗೆ 2018ರಲ್ಲಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ನ್ಯಾಷನಲ್ ಟೀಚರ್ಸ್‌ ಸೈನ್ಸ್ ಕಾಂಗ್ರೆಸ್(ಎನ್‌ಟಿಎಸ್‌ಸಿ) ಆಯೋಜಿಸಿದ್ದ ರಾಷ್ಟ್ರಮಟ್ಟದ ಕಾರ್ಯಕ್ರಮದಲ್ಲಿ ಸಪ್ನಾ ಪ್ರಬಂಧ ಮಂಡಿಸಿ ಗಮನ ಸೆಳೆದಿದ್ದರು.

2018 ರಲ್ಲಿ ತೆಲಂಗಾಣ ಸರ್ಕಾರದ ಅಡಿಯಲ್ಲಿ ಸಿಕಂದರಾಬಾದ್‌ನಲ್ಲಿ ನಡೆದ ದಕ್ಷಿಣ ಭಾರತ ಮಟ್ಟದ ಶಿಕ್ಷಕರ ವಿಭಾಗದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಹಿಂದುಸ್ತಾನ ಏರೋನಾಟಿಕ್ಸ್‌ನಿಂದ ವಿಶೇಷ ಪ್ರಶಸ್ತಿ ಪಡೆದಿದ್ದಾರೆ.

ಹೀಗೆ ಸದಾ ಪಾದರಸದಂತೆ ಕಾರ್ಯನಿರ್ವಹಿಸುವ ಕಾಯಕ ಜೀವಿಗೆ ಪ್ರಶಸ್ತಿಗಳು ಹರಿದು ಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net