

ಕೆ.ಆರ್.ನಗರ: ಹಾಸನದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರ ತಂದೆ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣಗೆ ಇದೀಗ ಬಂಧನದ ಭೀತಿ ಎದುರಾಗಿದ್ದು, ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಜ್ವಲ್ಗೆ ಸಂಬಂಧಿಸಿದ ಲೈಂಗಿಕ ದೌರ್ಜನ್ಯ ಆರೋಪವಿರುವ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ. ಹರಿಬಿಡಲಾದ ವಿಡಿಯೋಗಳಲ್ಲಿ ವ್ಯಕ್ತಿಯೊಬ್ಬರ ತಾಯಿ ಇರುವುದು ಪತ್ತೆಯಾಗಿದ್ದು, ಇದೀಗ ತನ್ನ ತಾಯಿ ಮನೆಯಿಂದ ಕಾಣೆಯಾಗಿದ್ದಾರೆ ಎಂದು ಮೈಸೂರಿನ ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಪುತ್ರ ದೂರು ದಾಖಲಿಸಿದ್ದಾರೆ.
ಸದ್ಯ ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ ಇದೀಗ ರಾಷ್ಟ್ರಮಟ್ಟಕ್ಕೆ ತಲುಪಿದ್ದು, ದೇಶವ್ಯಾಪಿ ಭಾರೀ ವಿರೋಧಗಳು ಕೇಳಿಬರುತ್ತಿವೆ. ಇನ್ನು ಇತ್ತೀಚೆಗಷ್ಟೇ ಪ್ರಜ್ವಲ್ ಹಾಗೂ ಆತನ ತಂದೆ ಎಚ್.ಡಿ ರೇವಣ್ಣ ವಿರುದ್ಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ಇದೀಗ ಈ ಪ್ರಕರಣ ಮುನ್ನೆಲೆಗೆ ಬಂದಿದ್ದು, ರೇವಣ್ಣಗೆ ಬಂಧನದ ಭೀತಿ ಎದುರಾಗಿದೆ.
ಕೆ.ಆರ್. ನಗರದಲ್ಲಿ ಮಹಿಳೆಯೊಬ್ಬರು ಕಾಣೆಯಾಗಿರುವ ಬಗ್ಗೆ ಎಚ್ಡಿ ರೇವಣ್ಣ ವಿರುದ್ಧ ದೂರು ದಾಖಲಾಗಿದ್ದು, ಈ ಕುರಿತು ಕಾಣೆಯಾದ ಮಹಿಳೆಯ ಪುತ್ರ ಪೊಲೀಸರಿಗೆ ದೂರು ನೀಡಿದ್ದಾರೆ. ಅಶ್ಲೀಲ ವಿಡಿಯೋ ವಿವಾದದಲ್ಲಿ ನನ್ನ ತಾಯಿಯ ಚಿತ್ರವೂ ಇದೆ. ವಿಡಿಯೋಗಳು ಬಹಿರಂಗವಾದ ತಕ್ಷಣವೇ ನನ್ನ ತಾಯಿ ದಿಢೀರ್ ನಾಪತ್ತೆಯಾಗಿದ್ದಾರೆ ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸದ್ಯ ಈ ಪ್ರಕರಣ ಕುರಿತು ಕೆ.ಆರ್. ನಗರದ ಪೊಲೀಸರು ಎಚ್.ಡಿ. ರೇವಣ್ಣ ವಿರುದ್ಧ ಸೆಕ್ಷನ್ 364/A 365 ಹಾಗೂ 34ರ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದ್ದಾರೆ. ರೇವಣ್ಣರನ್ನು ಆರೋಪಿ ನಂಬರ್ 1 ಹಾಗೂ ಸತೀಶ್ ಬಾಬು ಎಂಬವರನ್ನು ಆರೋಪಿ ಸಂಖ್ಯೆ 2 ಎಂದು ನಮೂದಿಸಲಾಗಿದೆ,(ಏಜೆನ್ಸೀಸ್).