

ಪುತ್ತೂರು ಗ್ರಾಮಾಂತರ: ವಿದ್ಯಾರ್ಥಿಗಳು ಪರಿಪೂರ್ಣವಾಗಿ ಬೆಳೆಯಲು, ವ್ಯಕ್ತಿತ್ವ ವೃದ್ಧಿಸಿಕೊಳ್ಳಲು, ಓದುವ ಜತೆಗೆ ಸಮಾಜದ ಪರಿಸ್ಥಿತಿಯನ್ನು ತಿಳಿದುಕೊಂಡು ಜವಾಬ್ದಾರಿ ಅರಿತುಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರ ಪೂರಕ. ಭವಿಷ್ಯದ ಜೀವನವನ್ನು ಸುಭದ್ರವಾಗಿ ರೂಪಿಸಿಕೊಳ್ಳಲು ರಹಾದಾರಿ ಎಂದು ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮಾಧಿಕಾರಿ ಲಕ್ಷ್ಮೀಕಾಂತ ರೈ ಅನಿಕೂಟೇಲ್ ಹೇಳಿದರು. ಒಡ್ಯದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜುಲೈ 30ರಿಂದ ಆ.5ರ ತನಕ ನಡೆಯಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಎಸ್ಡಿಎಂಸಿ ಅಧ್ಯಕ್ಷೆ ಪ್ರೇಮ ಪಡ್ಯಂಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕ ಜನಾರ್ದನ ಅಲ್ಜಾರು ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸ್ಥಳೀಯ ಪ್ರಮುಖರಾದ ಶ್ರೀಕೃಷ್ಣ ಭಟ್ ಬಟ್ಯಮೂಲೆ, ಶಂಕರ್ ರೈ ಬಾಳೆಮೂಲೆ, ರಮಾನಾಥ ರೈ ಪಡ್ಯಂಬೆಟ್ಟು ಸೇರಿದಂತೆ ಹಲವು ಮಂದಿ ಸಲಹೆ ಸೂಚನೆ ನೀಡಿದರು. ಎಸ್ಡಿಎಂಸಿ ಸದಸ್ಯರು, ಪಾಲಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ಶಿಬಿರದ ಉದ್ಘಾಟನೆ 30ರಂದು ಸಂಜೆ 3.30ಕ್ಕೆ ನಡೆಯಲಿದೆ. ಪುತ್ತೂರು ತಾಲೂಕು ಅರೋಗ್ಯಾಧಿಕಾರಿ ಡಾ.ದೀಪಕ್ ರೈ ಉದ್ಘಾಟಿಸುವರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಸುರೇಂದ್ರ ಕಿಣಿ ಅಧ್ಯಕ್ಷತೆ ವಹಿಸುವರು. ಸಮಾರೋಪ ಸಮಾರಂಭ ಆಗಸ್ಟ್ 5ರಂದು ನಡೆಯಲಿದೆ. ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ಸಮಾರೋಪ ಭಾಷಣ ಮಾಡುವರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಂಚಾಲಕ ವಿಜಯನಾರಾಯಣ ಕೆ.ಎಂ. ಅಧ್ಯಕ್ಷತೆ ವಹಿಸುವರು.