

ಬೆಂಗಳೂರು: ಉತ್ತಮ ಸಮಾಜ ನಿರ್ಮಾಣವಾಗಲು ವಿದ್ಯಾವಂತರ ಕೊಡಗೆ ಅಪಾರ. ಆದರೆ ಹೆಚ್ಚು ವಿದ್ಯೆ ಕಲಿತವರೇ ಇಂದು ಸಮಾಜದ ಸ್ವಾಥ್ಯ ಕೆಡಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ತಿನ ಸದಸ್ಯ ಯು.ಬಿ.ವೆಂಕಟೇಶ್ ಕಳವಳ ವ್ಯಕ್ತಪಡಿಸಿದರು.
ಎನ್.ಆರ್.ಕಾಲೊನಿಯ ಎ.ಪಿ.ಎಸ್. ವಾಣಿಜ್ಯ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಶ್ರೀ ತ್ಯಾಗರಾಜ ಕೋ&ಆಪರೇಟಿವ್ ಬ್ಯಾಂಕ್ ಲಿ.ನ 59ನೇ ವಾರ್ಷಿಕ ಸರ್ವಸದಸ್ಯರ ಸಭೆ, ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಬ್ಯಾಂಕಿನ ಸದಸ್ಯರಿಗೆ ಗೌರವಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಣ ಮಾಡಬೇಕು, ಉದ್ಯೋಗಕ್ಕೆ ವಿದೇಶಕ್ಕೆ ಹೋಗಬೇಕು ಇತ್ಯಾದಿ ಕಾರಣಗಳಿಗೆ ಮಾತ್ರ ವಿದ್ಯೆ ಮುಖ್ಯವಾಗಬಾರದು. ವಿದ್ಯೆ ಒಂದೇ ಬದುಕಿನ ಭಾಗವಲ್ಲ. ಕಲಿಕೆ ಎಂಬುದು ನಿರಂತರ. ಹೆತ್ತವರು, ಗುರುಗಳ ಪ್ರೇರಣೆಯಿಂದ ಮಕ್ಕಳು ಸಂಸ್ಕಾರವಂತರಾಗಬೇಕು. ಆ ಮೂಲಕ ಸಾಧ್ಯವಾದಷ್ಟು ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕು ಎಂದರು.
ಹಿರಿಯರ ಆಶೀರ್ವಾದ ಹಾಗೂ ಮಾರ್ಗದರ್ಶನ ಇದ್ದಾಗ ಮಾತ್ರ ಕಿರಿಯರು ಧೈರ್ಯದಿಂದ ಮುಂದುವರಿಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ತ್ಯಾಗರಾಜ ಬ್ಯಾಂಕ್ ಹಿರಿಯ ಸದಸ್ಯರನ್ನು ಗೌರವಿಸುತ್ತಿರುವುದು ಉತ್ತಮ ಕಾರ್ಯ. ಜತೆಗೆ ವಿದ್ಯಾರ್ಥಿ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದೆ.
ಆದಾಯ ತೆರಿಗೆ ಇಲಾಖೆ ಆಯುಕ್ತ ಡಾ.ಆರ್.ಎಲ್.ದೀಪಕ್ ಮಾತನಾಡಿ, ಕಳೆದ ಐದು ದಶಕಗಳಿಂದ ಯಶಸ್ವಿಯಾಗಿ ಮುನ್ನಡೆಯುತ್ತಿರುವ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ. ಈ ಮೂಲಕ ಸಹಕಾರಿ ಬ್ಯಾಂಕ್ ಕ್ಷೇತ್ರಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.
ಬ್ಯಾಂಕ್ನ ಉಪಾಧ್ಯಕ್ಷ ಕೆ.ಜಿ.ರಾಮೇಗೌಡ, ಮುಖ್ಯ ಕಾರ್ವನಿರ್ವಹಣಾಧಿಕಾರಿ ಎನ್.ಶ್ರೀರಾಮ್, ಆಡಳಿತ ಮಂಡಳಿ ನಿರ್ದೇಶಕರಾದ ಎಂ.ಎನ್.ಕಂಬೇಗೌಡ, ಟಿ.ಕೆ.ಅಶ್ವತ್ಥನಾರಾಯಣ, ಎಂ.ಎಸ್.ನಾಗರತ್ನ, ಆರ್.ವೀರಣ್ಣ, ಸಿ.ಜಾನಕಿರಾಮ್, ಎನ್.ನರಸಿಂಹಮೂರ್ತಿ, ಎನ್.ಬಸವರಾಜು ಇತರರಿದ್ದರು.
ಸಹಕಾರಿ ಬ್ಯಾಂಕ್ ನಡೆಸುವುದು ಅತ್ಯಂತ ಕಷ್ಟದ ಕೆಲಸ. ಯಾರೋ ಮಾಡಿದ ತಪ್ಪಿಗೆ, ಇನ್ಯಾರೋ ಬೆಲೆ ತೆರಬೇಕಾದ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು.
- ಯು.ಬಿ.ವೆಂಕಟೇಶ್, ವಿಧಾನ ಪರಿಷತ್ತಿನ ಸದಸ್ಯ
ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್ 2023&24ನೇ ಸಾಲಿನಲ್ಲಿ 6,000 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸಿದ್ದು, ಉತ್ತಮ ಲಾಭ ಗಳಿಸಿದೆ. ಸದಸ್ಯರಿಗೆ ಶೇ.12 ಲಾಭಾಂಶ ನೀಡಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಇದೇ ಮೊದಲ ಬಾರಿಗೆ ಏಕಕಾಲಕ್ಕೆ ಹೊಸದಾಗಿ ಐದು ಶಾಖೆಗಳನ್ನು ತೆರೆಯಲು ಅವಕಾಶ ನೀಡಿತ್ತು. ಅದರಂತೆ ಈಗಾಗಲೇ 2 ಶಾಖೆಗಳನ್ನು ಆರಂಭಿಸಲಾಗಿದೆ. ಉಳಿದ 3 ಶಾಖೆಗಳನ್ನು ಹಂತಹಂತವಾಗಿ ತೆರೆಯಲಾಗುತ್ತದೆ. ಪ್ರತಿ ವರ್ಷದಂತೆ ಈ ಬಾರಿಯೂ ಸದಸ್ಯರ ಮಕ್ಕಳಿಗೆ ಪ್ರತಿಭಾರ ಪುರಸ್ಕಾರ ಹಾಗೂ ಬ್ಯಾಂಕಿನ ಹಿರಿಯ ಸದಸ್ಯರಿಗೆ ಗೌರವ ಸಮರ್ಪಣೆ ಮಾಡಲಾಗಿದೆ.
-ಡಾ.ಎಂ.ಆರ್.ವೆಂಕಟೇಶ್, ಬ್ಯಾಂಕ್ನ ಅಧ್ಯಕ್ಷ