

ನಂಜನಗೂಡು: ಓದಿದ್ದು ಕಡಿಮೆಯಾದರೂ ಅನುಭವ ಹಾಗೂ ಆಸಕ್ತಿಯಿಂದ ಕೃಷಿಯಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಂಡು, ಸಮಗ್ರ ಬೇಸಾಯ ಪದ್ಧತಿಯ ಮೂಲಕ ಹಲವು ಬೆಳೆಗಳನ್ನು ಬೆಳೆದು ವರ್ಷವಿಡಿ ಆದಾಯ ಕಾಣುವ ಮೂಲಕ ತಾಲೂಕಿನ ಮುದ್ದಹಳ್ಳಿ ಗ್ರಾಮದ ಚಿಕ್ಕಸ್ವಾಮಿ ಮಾದರಿಯಾಗಿದ್ದಾರೆ.
ಏಳು ಎಕರೆ ಜಮೀನಿನಲ್ಲಿ 3.5 ಎಕರೆ ಜಾಗದಲ್ಲಿ ಸಾವಯವ ಮಾದರಿಯಲ್ಲಿ ತೆಂಗು, ಬಾಳೆ, ಸೀಬೆ, ಹಲಸು, ಕಿತ್ತಳೆ, ಸಪೋಟ, ದ್ರಾಕ್ಷಿ, ಸೇಬು, ಖರ್ಜೂರ ಸೇರಿದಂತೆ ವಿವಿಧ ಬಗೆಯ ಹಣ್ಣಿನ ಗಿಡಗಳು ಜತೆಗೆ ಶುಂಠಿ, ಏಲಕ್ಕಿ, ಮೆಣಸು, ದಾಲ್ಚಿನ್ನಿ ಇತರ ಸಾಂಬಾರು ಪದಾರ್ಥಗಳು, ಹೂವಿನ ಗಿಡಗಳನ್ನು ಬೆಳೆದು ಆದಾಯ ಮೂಲ ಕಂಡುಕೊಂಡಿದ್ದಾರೆ.
ಉಳಿದ 3.5 ಎಕರೆ ಜಾಗದಲ್ಲಿ ಬೆಳೆದಿರುವ ಏಲಕ್ಕಿ ಬಾಳೆ, ಪಚ್ಚಬಾಳೆ, ನಂಜನಗೂಡು ರಸಬಾಳೆ ಹಾಗೂ ಮದರಂಗಿ ಬಾಳೆಯ ಸಮೃದ್ಧ ಫಸಲು ಗಮನ ಸೆಳೆಯುತ್ತದೆ. ಮಲೆನಾಡಿನ ಕಾಫಿ ಬೆಳೆಯ ಪ್ರಯೋಗವನ್ನು ಕೂಡ ಚಿಕ್ಕಸ್ವಾಮಿ ಮಾಡಿದ್ದು, ವಾರ್ಷಿಕ 3 ಕ್ವಿಂಟಾಲ್‌ಗೂ ಹೆಚ್ಚು ಕಾಫಿ ಫಸಲು ಪಡೆಯುತ್ತಿದ್ದಾರೆ. ಕಳೆದ 20 ವರ್ಷಗಳಿಂದ ಕೃಷಿಯಲ್ಲಿ ಹೊಸ ಹೊಸ ಪ್ರಯೋಗದಲ್ಲಿ ತೊಡಗಿಸಿಕೊಳ್ಳುವ ಮೂಲಕ ಯಶಸ್ವಿ ರೈತರಾಗಿ ಗುರುತಿಸಿಕೊಳ್ಳುವ ಜತೆಗೆ ಆರ್ಥಿಕವಾಗಿಯೂ ಸಾಕಷ್ಟು ಲಾಭವನ್ನು ಕಂಡುಕೊಂಡಿದ್ದಾರೆ. ಜತೆಗೆ ರಾಸಾಯನಿಕ ಮುಕ್ತ ತೋಟ ಮಾಡುವ ಛಲದೊಂದಿಗೆ ಕೃಷಿ ಕೈಗೆತ್ತಿಕೊಂಡ ಚಿಕ್ಕಸ್ವಾಮಿ ಯಶಸ್ವಿಯಾಗಿದ್ದಾರೆ.
ಹೈನುಗಾರಿಕೆ, ಮೀನು ಸಾಕಣೆ: ಆರ್ಥಿಕ ಲಾಭಕ್ಕಾಗಿ ಹೈನುಗಾರಿಕೆಯನ್ನು ಅವಲಂಬಿಸಿರುವ ಚಿಕ್ಕಸ್ವಾಮಿ 5 ಹಸುಗಳನ್ನು ಸಾಕಿದ್ದು, ಬೆಳಗ್ಗೆ 10 ಹಾಗೂ ಸಂಜೆ 8 ಲೀಟರ್ ಹಾಲನ್ನು ಡೈರಿಗೆ ಹಾಕುತ್ತಿದ್ದಾರೆ. ಇದರೊಂದಿಗೆ ಬಂಡೂರು ತಳಿಯ 18 ಕುರಿಗಳನ್ನೂ ಸಾಕಿದ್ದಾರೆ. ತೋಟದ 50*50 ಅಡಿ ವಿಸ್ತೀರ್ಣದ ಹೊಂಡದಲ್ಲಿ 1500 ಮೀನು ಮರಿಗಳನ್ನು ಸಾಕಣೆ ಮಾಡಿದ್ದಾರೆ. 8 ತಿಂಗಳಿಗೊಮ್ಮೆ ಮೀನು ಹಿಡಿಯುವ ಮೂಲಕ ಲಾಭಕಂಡುಕೊಂಡಿದ್ದಾರೆ.
ತಮ್ಮದೇ ತೋಟದಲ್ಲಿರುವ ಜೇನು ಪೆಟ್ಟಿಗೆಗಳಿಂದ ಲಭ್ಯವಾಗುವ ಉತ್ಕೃಷ್ಟ ಗುಣಮಟ್ಟದ ಜೇನು ಹಾಗೂ ತಮ್ಮ ತೋಟದಲ್ಲಿ ಲಭ್ಯವಾಗುವ ಕಾಫಿ ಬೀಜವನ್ನು ಪುಡಿ ಮಾಡಿಸಿ ಪುಷ್ಕರ ಎಂಬ ತಮ್ಮದೇ ಬ್ರಾೃಂಡ್ ಮೂಲಕ ಮಾರುಕಟ್ಟೆಯಲ್ಲಿ ಕಾಫಿ ಮಾರಾಟ ಮಾಡುತ್ತಿದ್ದು ಸ್ಥಳೀಯವಾಗಿ ಈ ಉತ್ಪನ್ನಗಳು ಜನ ಮೆಚ್ಚುಗೆಗೆ ಪಾತ್ರವಾಗಿವೆ.
ಜಮೀನಿನ ಸುತ್ತ ಮಹಾಘನಿ, ಅಕೇಶಿಯಾ ಹಾಗೂ ತೇಗದ ಮರದ ಸಾಲುಗಳ ಮೂಲಕ ಹಸಿರಿನ ಬೇಲಿ ನಿರ್ಮಿಸಿದ್ದಾರೆ. ಚಿಕ್ಕಸ್ವಾಮಿ ಅವರ ಜಮೀನಿನಲ್ಲಿ 4 ಎರೆಹುಳು ಗೊಬ್ಬರದ ಗುಂಡಿಗಳು ಹಾಗೂ ಕೃಷಿ ತ್ಯಾಜ್ಯ ವಸ್ತುಗಳನ್ನು ಬಳಸಿ ಗೊಬ್ಬರ ತಯಾರಿಸಲು ಬೃಹತ್ ಹೊಂಡ ನಿರ್ಮಿಸಿಕೊಂಡಿದ್ದಾರೆ. ಹಸುವಿನ ಗಂಜಲ ಬಳಸಿ ಜಮೀನಿನಲ್ಲಿ ನಿರ್ಮಿಸಿರುವ ಹೊಂಡದಲ್ಲಿ ಕೃತಕ ಯೂರಿಯಾ ತಯಾರಿಸಿ ಬೆಳೆಗಳಿಗೆ ನೀಡುತ್ತಿದ್ದಾರೆ.
ಯುವ ರೈತರಿಗೆ ಮಾರ್ಗದರ್ಶನ: ಚಿಕ್ಕಸ್ವಾಮಿ ತೋಟಕ್ಕೆ ಕೃಷಿ ವಿಜ್ಞಾನಿಗಳು, ಕೃಷಿ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಕೃಷಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೆಲ ಯುವ ರೈತರು ಭೇಟಿ ನೀಡಿ ಉಪಯುಕ್ತ ಮಾರ್ಗದರ್ಶನವನ್ನೂ ಪಡೆದಿದ್ದಾರೆ. ಇದರೊಂದಿಗೆ ಚಿಕ್ಕಸ್ವಾಮಿ ಅವರಿಗೆ ಸಾವಯವ ರೈತ ಎಂಬ ಪ್ರಶಂಸೆ ಕೂಡ ಕೃಷಿ ವಿವಿ ನೀಡಿದೆ. ಹಲವು ಸಂಘ, ಸಂಸ್ಥೆಗಳು ಪ್ರಗತಿಪರ ರೈತ ಎಂಬ ಬಿರುದನ್ನು ನೀಡಿ ಸನ್ಮಾನಿಸಿದೆ.
ತೋಟದಲ್ಲೇ ವಾಸ: ತೋಟದ ಮನೆಯಲ್ಲಿಯೇ ವಾಸ್ತವ್ಯ ಹೂಡಿರುವ ರೈತ ಚಿಕ್ಕಸ್ವಾಮಿಗೆ 80 ವರ್ಷದ ತಾಯಿ ಪಾರ್ವತಮ್ಮ ಅವರೇ ಸ್ಫೂರ್ತಿಯಾಗಿದ್ದು, ಇಳಿವಯಸ್ಸಿನಲ್ಲೂ ಮಗನ ಕೃಷಿ ಚಟುವಟಿಕೆಗೆ ಸಾಥ್ ನೀಡುತ್ತಿದ್ದಾರೆ. ಇವರೊಂದಿಗೆ ಚಿಕ್ಕಸ್ವಾಮಿ ಅವರ ಪತ್ನಿ ಮಮತಾ ಕೂಡ ಕೃಷಿ ಚಟುವಟಿಕೆಗಳಿಗೆ ನೆರವಾಗಿದ್ದಾರೆ. ಹಿರಿಯ ಮಗ ವಿದ್ಯಾಸಾಗರ್ ಪದವಿ ವ್ಯಾಸಂಗ ಪೂರ್ಣಗೊಳಿಸಿ ಲೋಕಸೇವಾ ಆಯೋಗದ ಪರೀಕ್ಷೆ ಎದುರಿಸಲು ಬೆಂಗಳೂರಿನಲ್ಲಿ ತರಬೇತಿಯಲ್ಲಿದ್ದಾರೆ. ಕಿರಿಯ ಮಗ ಸಿಎ ಪರೀಕ್ಷೆ ಎದುರಿಸಲು ಮಂಗಳೂರಿನಲ್ಲಿ ಪರೀಕ್ಷಾ ಸಿದ್ಧತೆಯಲ್ಲಿದ್ದಾರೆ.