ಬೆಂಗಳೂರು: ನಗರದ ಸ್ವಚ್ಛತೆ ಕಾಪಾಡುವಲ್ಲಿ ಜಲಮಂಡಳಿಯ ನೈರ್ಮಲ್ಯೀಕರಣ ಕಾಮಗಾರಿ ನಡೆಸುವ ಕಾರ್ಮಿಕರ ಪಾತ್ರ ಹಿರಿದಾದುದು. ಇವರ ಸೇವೆ ಹಾಗೂ ತ್ಯಾಗವನ್ನು ಗೌರವಿಸುವ ನಿಟ್ಟಿನಲ್ಲಿ "ಅನ್ನಪೂರ್ಣ ಯೋಜನೆ' ಅನುಷ್ಠಾನಗೊಳಿಸಿದೆ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ಜಲಮಂಡಳಿಯ ರಜತ ಭವನದಲ್ಲಿ ಜಲಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ "ಅನ್ನಪೂರ್ಣ' ಯೋಜನೆಯಡಿ ಸ್ಮಾರ್ಟ್ ಕಾರ್ಡ್ಗಳನ್ನು ವಿತರಿಸಿ ಮಾತನಾಡಿದರು.
ಈ ಯೋಜನೆಯಡಿ 700ಕ್ಕೂ ಹೆಚ್ಚು ಕಾರ್ಮಿಕರಿಗೆ ಪ್ರತಿತಿಂಗಳು 1,500 ರೂ.ಗಳನ್ನು ಅವರ ಖಾತೆಗೆ ವರ್ಗಾವಣೆ ಆಗಲಿದೆ. ಗುಣಮಟ್ಟದ ಉಪಾಹಾರವನ್ನು ಖಚಿತಪಡಿಸುವ ಜತೆಗೆ ಆರ್ಥಿಕ ಭದ್ರತೆ ಮತ್ತು ಸಾಮಾಜಿಕ ಗೌರವವನ್ನೂ ನೀಡಲಿದೆ. ಜಲಮಂಡಳಿಗೆ ದೊಡ್ಡ ಇತಿಹಾಸವಿದೆ. ಜನಸಾಮಾನ್ಯರ ಸೇವೆಯಲ್ಲಿ ತೊಡಗಿರುವ ಈ ಸಂಸ್ಥೆ ಮಾನವ ಸೇವೆಯ ಪ್ರತಿಕವಾಗಿದೆ ಎಂದರು.
ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಅವರು ಈ ಯೋಜನೆಯ ತಾಂತ್ರಿಕ ಅಂಶಗಳನ್ನು ವಿವರಿಸಿದರು. ಮುಖ್ಯ ಆಡಳಿತಾಧಿಕಾರಿ ಹಾಗೂ ಕಾರ್ಯದರ್ಶಿ ಮದನ್ ಮೋಹನ್, ಪ್ರಧಾನ ಮುಖ್ಯ ಇಂಜಿನಿಯರ್ ಬಿ.ಎಸ್. ದಲಾಯತ್, ಮುಖ್ಯ ಇಂಜಿನಿಯರ್ಗಳಾದ ಎಸ್.ವಿ. ವೆಂಕಟೇಶ, ರಾಜೀವ್, ದೇವರಾಜ್, ಜಯಶಂಕರ್, ಪರಮೇಶ್, ಮುಖ್ಯ ಲೆಕ್ಕಾಧಿಕಾರಿ ಹಾಗೂ ಆರ್ಥಿಕ ಸಲಹೆಗಾರ ಸುಬ್ಬರಾಮಯ್ಯ, ಜಲಮಂಡಳಿ ನೌಕರ ಸಂಘದ ಅಧ್ಯಕ್ಷ ಗೋವಿಂದರಾಜು, ಸ್ಯಾನಿಟರಿ ವರ್ಕರ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿದ್ದಪ್ಪ ಉಪಸ್ಥಿತರಿದ್ದರು.