

ಬೆಂಗಳೂರು: ಧನಭಾಗ್ಯ ಯೋಜನೆಯಡಿ ಬಿಪಿಎಲ್, ಅಂತ್ಯೋದಯ ಕಾರ್ಡ್‌ದಾರರ ಖಾತೆಗೆ ಆಗಸ್ಟ್ ತಿಂಗಳಿನ 2ನೇ ಕಂತು ಹಣ ಜಮೆಯಾಗುತ್ತಿದ್ದು, ರಾಜ್ಯಾದ್ಯಂತ 1.03 ಕೋಟಿ ಕಾರ್ಡ್‌ಗಳಿಂದ 3.69 ಕೋಟಿ ಫಲಾನುಭವಿಗಳಿಗೆ ಒಟ್ಟು 606 ಕೋಟಿ ರೂ.ಜಮೆ ಮಾಡಲಾಗುತ್ತಿದೆ.
ಜುಲೈನಲ್ಲಿ 97,27,160 ಕಾರ್ಡ್‌ಗಳಿಂದ 3.45 ಕೋಟಿ ಲಾನುಭವಿಗಳಿಗೆ ಒಟ್ಟು 566 ಕೋಟಿ ರೂ.ಹಣ ಹಾಕಲಾಗಿತ್ತು. ಜುಲೈಗೆ ಹೋಲಿಸಿದರೆ ಆಗಸ್ಟ್‌ನಲ್ಲಿ ಅಂದಾಜು 25 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಹಣ ಜಮೆ ಮಾಡಲಾಗಿದೆ. ಅಲ್ಲದೆ, ಒಟ್ಟು ಫಲಾನುಭವಿಗಳಿಗೆ ಪೈಕಿ ಶೇ.87 ಲಾನುಭವಿಗಳಿಗೆ ಯೋಜನೆಯಡಿ ಹಣ ಸೌಲಭ್ಯ ಸಿಗುತ್ತಿದೆ.
ಕುಟುಂಬದ ಮುಖ್ಯಸ್ಥರನ್ನು ಆಯ್ಕೆ ಮಾಡದಿರುವುದು, ಬ್ಯಾಂಕ್ ಖಾತೆ ಇಲ್ಲದಿರುವುದು, ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡದಿರುವುದು ಹಾಗೂ ರೇಷನ್ ಕಾರ್ಡ್‌ಗೆ ಇಕೆವೈಸಿ ಮಾಡಿಸದಿರುವುದು ಸೇರಿ ಇತರ ಕಾರಣಗಳಿಂದ ಅಂದಾಜು 22 ಲಕ್ಷದ ಬಿಪಿಎಲ್ ಕಾರ್ಡ್‌ಗಳು ಈ ಯೋಜನೆಯಿಂದ ಹೊರಗುಳಿದಿದ್ದವು. ಆಹಾರ ಇಲಾಖೆಯ ಮುತುವರ್ಜಿಯಿಂದ 22 ಲಕ್ಷ ರೇಷನ್ ಕಾರ್ಡ್‌ಗಳ ಪೈಕಿ 7 ಲಕ್ಷ ಕಾರ್ಡ್‌ಗಳು ತಮ್ಮ ಕುಟುಂಬದ ಮುಖ್ಯಸ್ಥರನ್ನು ಆಯ್ಕೆ ಮಾಡಿಕೊಂಡಿರುವುದು, ಆಧಾರ್ ಜೋಡಣೆ ಮಾಡಿಸಿರುವುದು ಸೇರಿ ಇತರೆ ತಾಂತ್ರಿಕ ಸಮಸ್ಯೆಗಳು ಬಗೆಹರಿದಿವೆ. ಹೀಗಾಗಿ, ಆಗಸ್ಟ್‌ನಲ್ಲಿ ಹೊಸದಾಗಿ 7 ಲಕ್ಷ ಕಾರ್ಡ್‌ಗಳಿಂದ ಒಟ್ಟು 25 ಲಕ್ಷಕ್ಕೂ ಅಧಿಕ ಲಾನುಭವಿಗಳಿಗೆ ಧನಭಾಗ್ಯ ಸೌಲಭ್ಯ ಸಿಕ್ಕಿದೆ. ಉಳಿದ 15 ಲಕ್ಷ ಕಾರ್ಡ್‌ಗಳ ಸಮಸ್ಯೆಯನ್ನು ಸೆಪ್ಟೆಂಬರ್ ವೇಳೆಗೆ ಬಗೆಹರಿಸಿ ಹಣ ಹಾಕುವ ಗುರಿಯನ್ನು ಇಲಾಖೆ ಹೊಂದಿದೆ.
ಕಾರ್ಡ್‌ದಾರರಿಗೆ ಅಕ್ಕಿ ಬದಲು ಹಣ ವರ್ಗಾವಣೆ ವ್ಯವಸ್ಥೆಯು ಜು.10ರಿಂದ ರಾಜ್ಯದಲ್ಲಿ ಜಾರಿಗೆ ಬಂದಿದೆ. ರಾಷ್ಟ್ರೀಯ ಮಾಹಿತಿ ಕೇಂದ್ರದಿಂದ (ಎನ್‌ಐಸಿ) ಫಲಾನುಭವಿಗಳ ಮಾಹಿತಿಯನ್ನು ಇ-ಆಡಳಿತ ಇಲಾಖೆ ಅಭಿವೃದ್ಧಿಪಡಿಸಿರುವ ಡಿಬಿಟಿ ಪೋರ್ಟಲ್ ಹಾಗೂ ಖಜಾನೆ ಇಲಾಖೆಯ ಕೆ2 ಪೋರ್ಟಲ್ ಮೂಲಕ ಬಿಪಿಎಲ್ ಕಾರ್ಡ್‌ನಲ್ಲಿರುವ ಪ್ರತಿ ಸದಸ್ಯನಿಗೆ ಕೆಜಿಗೆ 34 ರೂ.ನಂತೆ 5 ಕೆಜಿ ಅಕ್ಕಿಗೆ 170 ರೂ.ನಗದು ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ಹಾಕಲಾಗತ್ತಿದೆ. ಅದೇರೀತಿ, ಅಂತ್ಯೋದಯ ಕಾರ್ಡ್‌ನಲ್ಲಿರುವ ನಾಲ್ಕು ಸದಸ್ಯರಿದ್ದರೆ ಕುಟುಂಬಕ್ಕೆ 170 ರೂ, ಐದು ಸದಸ್ಯರಿದ್ದರೆ 510 ರೂ, ಆರು ಸದಸ್ಯರಿದ್ದರೆ 850 ರೂ. ಹಣ ಹಾಕಲಾಗುತ್ತಿದೆ.
ಇದನ್ನೂ ಓದಿ:ಮದುವೆ ಊಟ ಸವಿದ ಜನರಿಗೆ ವಾಂತಿ-ಭೇದಿ
8.72 ಲಕ್ಷ ಕಾರ್ಡ್‌ಗಿಲ್ಲ ಹಣ:
ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ನಗದು ವರ್ಗಾವಣೆ ಸೌಲಭ್ಯ ಪಡೆದುಕೊಳ್ಳುವುದಕ್ಕಾಗಿ ರಾಜ್ಯ ಸರ್ಕಾರ ಹೊರಡಿಸಿದ್ದ ಕೆಲ ನಿಬಂಧನೆಗಳಿಂದ ಒಟ್ಟು 8.72 ಲಕ್ಷ ಕಾರ್ಡ್‌ಗಳಿಗೆ ಹಣ ಸಿಗದಂತಾಗಿದೆ.ಮೂರು ತಿಂಗಳಿಂದ ರೇಷನ್ ತೆಗೆದುಕೊಳ್ಳದ ಕಾರ್ಡ್‌ದಾರರು ನಗದು ವರ್ಗಾವಣೆ ಸೌಲಭ್ಯದಿಂದ ಅನರ್ಹರು ಎಂದು ಈಗಾಗಲೇ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ 5.32 ಲಕ್ಷ ಬಿಪಿಎಲ್ ಕಾರ್ಡ್‌ಗಳು ಯೋಜನೆಯಿಂದ ಹೊರಗುಳಿದಿವೆ. ಅದೇರೀತಿ, ಮೂರು ಅಥವಾ ಮೂರಕ್ಕಿಂತ ಕಡಿಮೆ ಸದಸ್ಯರು ಹೊಂದಿರುವ 3.40 ಲಕ್ಷ ಅಂತ್ಯೋದಯ ಕಾರ್ಡ್‌ಗಳಿಗೂ ಹಣ ಸೌಲಭ್ಯದಿಂದ ವಂಚಿತವಾಗಿವೆ. ಹೀಗಾಗಿ, ರಾಜ್ಯಾದ್ಯಂತ ಒಟ್ಟು 8.72 ಲಕ್ಷ ಕಾರ್ಡ್‌ಗಳಿಗೆ ಶಾಶ್ವತವಾಗಿ ಧನಭಾಗ್ಯ ಸಿಗದಂತಾಗಿದೆ.
1.19 ಕೋಟಿ ಕಾರ್ಡ್‌ಗೆ ನಿಗದಿ:
ರಾಜ್ಯದಲ್ಲಿರುವ ಒಟ್ಟು 1.28 ಕೋಟಿ ಬಿಪಿಎಲ್ ಕಾರ್ಡ್‌ಗಳ ಪೈಕಿ 1.19 ಕೋಟಿ ಕಾರ್ಡ್‌ಗಳಿಗೆ ಧನಭಾಗ್ಯ ಯೋಜನೆಯಡಿ ಬರಲಿದೆ. ಇದುವರೆಗೆ 1.03 ಕೋಟಿ ಕಾರ್ಡ್‌ಗಳಿಗೆ ಹಣ ಹಾಕಲಾಗುತ್ತಿದೆ. ಉಳಿದ ಕಾರ್ಡ್‌ಗಳಿಗೆ ಅಡ್ಡಿಯಾಗಿರುವ ತಾಂತ್ರಿಕ ಸಮಸ್ಯೆಯನ್ನು ಹಂತ ಹಂತವಾಗಿ ಬಗೆಹರಿಸಿ ಮುಂದಿನ ದಿನಗಳಿಂದ ಸೌಲಭ್ಯದ ವ್ಯಾಪ್ತಿಗೆ ತರಲು ಇಲಾಖೆ ಮುಂದಾಗಿದೆ.
ಕೋಟ್:
ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ), ಇ-ಆಡಳಿತ ಹಾಗೂ ಖಜಾನೆ ಇಲಾಖೆ ಸಹಯೋಗದಲ್ಲಿ ಆಹಾರ ಇಲಾಖೆ ವತಿಯಿಂದ ಡಿಬಿಟಿ ಮುಖೇನ ಕಾರ್ಡ್‌ದಾರರಿಗೆ ಯಶಸ್ವಿಯಾಗಿ 2ನೇ ಕಂತು ಹಣ ಹಾಕಲಾಗುತ್ತಿದೆ. ವಿವಿಧ ತಾಂತ್ರಿಕ ಸಮಸ್ಯೆ ಬಗೆಹರಿದ ಪರಿಣಾಮ ಆಗಸ್ಟ್‌ನಲ್ಲಿ ಹೊಸದಾಗಿ 25 ಲಕ್ಷ ಫಲಾನುಭವಿಗಳನ್ನು ಯೋಜನೆಗೆ ಸೇರಿಸಲಾಗಿದೆ. ಸೆಪ್ಟೆಂಬರ್ ವೇಳೆಗೆ ಉಳಿದ ಕಾರ್ಡ್‌ಗಳ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ.
ಕನಗವಲ್ಲಿ, ಆಹಾರ ಇಲಾಖೆ ಆಯುಕ್ತೆ