

ಬೆಂಗಳೂರು: ರಾಜ್ಯದಲ್ಲಿ ಅನ್ನಭಾಗ್ಯ ಹಾಗೂ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯ ಅಕ್ಕಿ ವಿತರಣೆಯಲ್ಲಿ ವ್ಯತ್ಯಯವಾದ ಪರಿಣಾಮ ಯುಗಾದಿ ಆಚರಣೆಗೆ ಕಾರ್ಡ್ದಾರರಿಗೆ ತುಸು ತೊಡಕಾಗಿದೆ.
ರಾಜ್ಯದಲ್ಲಿ 1.28 ಕೋಟಿ ಬಿಪಿಎಲ್ ಚೀಟಿಗಳು,10.80 ಲಕ್ಷ ಅಂತ್ಯೋದಯ ಕಾರ್ಡ್ಗಳಿಂದ ಒಟ್ಟು 4.11 ಕೋಟಿ ಫಲಾನುಭವಿಗಳಿದ್ದಾರೆ. ಆಹಾರ ಇಲಾಖೆಯು ನ್ಯಾಯಬೆಲೆ ಅಂಗಡಿಗಳ ಮೂಲಕ ಉಚಿತವಾಗಿ ಫಲಾನುಭವಿಗಳಿಗೆ ಅಕ್ಕಿ ವಿತರಿಸುವ ಜವಾಬ್ದಾರಿ ಹೊತ್ತಿದೆ. ಹಣದ ಬದಲು ಫೆಬ್ರವರಿಯಿಂದ ಹೆಚ್ಚುವರಿ ಅಕ್ಕಿಯನ್ನು ವಿತರಿಸಲು ಸರ್ಕಾರ ಕ್ರಮ ಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ ಫೆಬ್ರವರಿ, ಮಾರ್ಚ್ ತಿಂಗಳ ಅಕ್ಕಿಯನ್ನು ಒಂದೇ ಬಾರಿ ವಿತರಿಸಬೇಕಿತ್ತು. ಜತೆಗೆ, ಕೇಂದ್ರದ ಪಾಲಿನ 5 ಕೆ.ಜಿ. ಅಕ್ಕಿ ಸೇರಿ ಒಟ್ಟು 15 ಕೆ.ಜಿ. ಅಕ್ಕಿಯನ್ನು ಬಿಪಿಎಲ್ನ ಪ್ರತಿ ಸದಸ್ಯನಿಗೆ ನೀಡಬೇಕಿತ್ತು. ಆದರೆ, ಭಾರತೀಯ ಆಹಾರ ನಿಗಮದಿಂದ (ಎಫ್ಸಿಐ) ಗೋದಾಮುಗಳಿಗೆ ಮತ್ತು ಗೋದಾಮುಗಳಿಂದ ಸಗಟು ಮಳಿಗೆಗಳಿಗೆ ತಡವಾಗಿ ಅಕ್ಕಿ ಸರಬರಾಜು ಆಗಿತ್ತು. ಇಲಾಖೆ ನ್ಯಾಯಬೆಲೆ ಅಂಗಡಿಗಳಿಗೆ ತಡವಾಗಿ ರೇಷನ್ ಎತ್ತುವಳಿ ಅವಕಾಶ ಮಾಡಿಕೊಟ್ಟಿತ್ತು. ಈ ಎಲ್ಲ ಕಾರಣಗಳಿಂದ ಅಕ್ಕಿ ವಿತರಣೆಯಲ್ಲಿ ವ್ಯತ್ಯಯವಾಗಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು ಕಾರ್ಡ್ದಾರರ ಪೈಕಿ ಶೇ.65 ಕಾರ್ಡ್ದಾರರಿಗೆ ಮಾತ್ರ ಆಹಾರ ಪದಾರ್ಥ ವಿತರಿಸಲಾಗಿದೆ.
ಕೆಲವಡೆ 10 ಅಕ್ಕಿ ವಿತರಣೆ: ರಾಜ್ಯದ ಕೆಲ ನ್ಯಾಯಬೆಲೆ ಅಂಗಡಿಗಳ ಮಾಲೀಕರು, ಕಾರ್ಡ್ದಾರರ ಪಾಲಿನ ನೀಡಬೇಕಿದ್ದ ಅಕ್ಕಿ ನೀಡದೆ ಸತಾಯಿಸುತ್ತಿದ್ದಾರೆ. ಬೆಂಗಳೂರು ಸೇರಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಪ್ರತಿ ಸದಸ್ಯನಿಗೆ 15 ಕೆ.ಜಿ. ಬದಲು 10 ಕೆ.ಜಿ. ಅಕ್ಕಿ ಮಾತ್ರ ನೀಡುತ್ತಿದ್ದಾರೆ ಎಂದು ಕಾರ್ಡ್ದಾರರು ದೂರಿದ್ದಾರೆ. ಈ ಬಗ್ಗೆ ಮಾಲೀಕರನ್ನು ಪ್ರಶ್ನಿಸಿದರೆ ಕಾರ್ಡ್ ರದ್ದು ಮಾಡುವುದಾಗಿ ಬೆದರಿಕೆ ಹಾಕುತ್ತಾರೆ. ಹಾಗಾಗಿ, ಅನಿವಾರ್ಯವಾಗಿ ಅವರು ಎಷ್ಟು ಅಕ್ಕಿ ಕೊಡುತ್ತಾರೋ ಅಷ್ಟನ್ನು ಮಾತ್ರ ಮನೆಗೆ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಅಧಿಕಾರಿಗಳಿಂದ ಹಣ ವಸೂಲಿ: ಈ ನಡುವೆ ಅಕ್ಕಿ ವಿತರಣೆ ಆರಂಭವಾದ ಬೆನ್ನಲ್ಲೇ ಇಲಾಖೆಯ ಫುಡ್ ಇನ್ಸ್ಪೆಕ್ಟರ್, ಆಹಾರ ಶಿರಸ್ತೇದಾರರು ಸೇರಿ ಇತರೆ ಅಧಿಕಾರಿಗಳು ಪ್ರತಿ ಕಾರ್ಡ್ಗೆ 5 ರೂ.ನಂತೆ ನ್ಯಾಯಬೆಲೆ ಅಂಗಡಿಗಳ ಮಾಲೀಕರಿಂದ ಹಣ ವಸೂಲಿಗೆ ಇಳಿದಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.