

ತಿಪ್ಪಣ್ಣ ಅವಧೂತ ಹುಬ್ಬಳ್ಳಿ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ ಸೆಪ್ಟೆಂಬರ್ ತಿಂಗಳು 5 ಕೆಜಿ ಅಕ್ಕಿ ಪಡೆದುಕೊಂಡ ಫಲಾನುಭವಿಗಳಿಗೆ ಇನ್ನುಳಿದ 5 ಕೆಜಿ ಅಕ್ಕಿಯ ಬದಲಿಗೆ ಸಿಗಬೇಕಾದ ಹಣ ತಿಂಗಳು ಮುಗಿಯುತ್ತಾ ಬಂದರೂ ಖಾತೆಗೆ ಜಮೆ ಆಗಿಲ್ಲ.
ರಾಜ್ಯ ಸರ್ಕಾರ 5 ಕೆಜಿ ಅಕ್ಕಿ ನೀಡಿದರೆ ಉಳಿದ 5 ಕೆಜಿ ಅಕ್ಕಿ ಬದಲಿಗೆ ಹಣ ನೀಡುವುದಾಗಿ ತಿಳಿಸಿತ್ತು. ಅದರಂತೆ ಜುಲೈ ಹಾಗೂ ಆಗಸ್ಟ್ ತಿಂಗಳ ಅಕ್ಕಿ ಬದಲಿಗೆ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಿತ್ತು. ಆದರೆ, ಸೆಪ್ಟೆಂಬರ್ ತಿಂಗಳು ಮುಗಿಯುತ್ತ ಬಂದರೂ ಈ ತಿಂಗಳ ಅಕ್ಕಿ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಿಲ್ಲ.
ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ 20ರೊಳಗಾಗಿ ಹಣ ಜಮೆ ಆಗಿತ್ತು. ಆದರೆ, ಈ ತಿಂಗಳು ರೇಷನ್ ತೆಗೆದುಕೊಂಡು ಬಂದು 15 ದಿನ ಕಳೆದರೂ ಅಕ್ಕಿ ರೊಕ್ಕ ಜಮೆ ಆಗಿಲ್ಲ. ಈ ತಿಂಗಳ ಅಕ್ಕಿ ರೊಕ್ಕ ಕೊಡುತ್ತಾರೋ ಇಲ್ಲವೋ ಎಂಬ ಸಂಶಯ ಕಾಡುತ್ತಿದೆ ಎನ್ನುತ್ತಾರೆ ಫಲಾನುಭವಿಗಳು.
ಫಲಾನುಭವಿಗಳ ಖಾತೆಗೆ ಹಣ ಬಿಡುಗಡೆ ಮಾಡುವಂತೆ ಜಿಲ್ಲಾ ಖಜಾನೆ ಅಧಿಕಾರಿಗಳಿಗೆ ಲಿಸ್ಟ್ ನೀಡಲಾಗಿದೆ. ಸೆಪ್ಟೆಂಬರ್ ತಿಂಗಳ ಅಕ್ಕಿ ಹಣ ಬಿಡುಗಡೆ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಮೂರ್ನಾಲ್ಕು ದಿನದಲ್ಲಿ ಖಾತೆಗೆ ಜಮೆ ಆಗಬಹುದು ಎನ್ನುತ್ತಾರೆ ಹೆಸರು ಹೇಳಲಿಚ್ಛಸದ ತಾಲೂಕು ಆಹಾರ ಇಲಾಖೆ ಅಧಿಕಾರಿ. ಆದರೆ, ಈ ಬಗ್ಗೆ ಖಾತರಿ ಇಲ್ಲ.
ಮೊತ್ತ ಎಷ್ಟು?: ಪಡಿತರ ಚೀಟಿಯಲ್ಲಿ ನಮೂದಾಗಿರುವ ಕುಟುಂಬ ಸದಸ್ಯರಸಂಖ್ಯೆಗೆ ಅನುಗುಣವಾಗಿ ಪ್ರತಿ ಕೆಜಿ ಅಕ್ಕಿ ಬದಲು ಸರ್ಕಾರ 34 ರೂಪಾಯಿ ಪಾವತಿಸುತ್ತದೆ. ಅದರಂತೆ ಒಬ್ಬ ಫಲಾನುಭವಿಯ 5 ಕೆಜಿ ಅಕ್ಕಿಗೆ 170 ರೂ. ಪಾವತಿಸುತ್ತದೆ.
ಸೌಲಭ್ಯ ವಂಚಿತರು ಯಾರು?
ಆಧಾರ್ ಸಂಖ್ಯೆಗೆ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಗೆ ಲಿಂಕ್ ಮಾಡದಿರುವುದು. ಪಡಿತರ ಚೀಟಿಯಲ್ಲಿ ಒಂದಕ್ಕಿಂತ ಹೆಚ್ಚು ಮುಖಸ್ಥರಿದ್ದಾಗ ಅಥವಾ ಮುಖ್ಯಸ್ಥರೇ ಇಲ್ಲದಿದ್ದ ಸಂದರ್ಭದಲ್ಲಿ. ಆಧಾರ್ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದಾಗ, ಬ್ಯಾಂಕ್ನಲ್ಲಿ ಇ-ಕೆವೈಸಿ ಕಾರ್ಯ ಪೂರ್ಣಗೊಳಿಸದಿರುವಾಗ ಹಾಗೂ ಕಳೆದ ಮೂರು ತಿಂಗಳಲ್ಲಿ ಒಮ್ಮೆಯೂ ಪಡಿತರ ಪಡೆಯದೆ ಇರುವ ಚೀಟಿದಾರರು ನೇರ ನಗದು ಸೌಲಭ್ಯ ಪಡೆಯಲು ಅರ್ಹರಾಗಿರುವುದಿಲ್ಲ.
ಈ ತಿಂಗಳ ಅನುದಾನ 26ರಂದು ಜಿಲ್ಲಾ ಖಜಾನೆಗೆ ಜಮೆ ಆಗಿದೆ. ಎರಡ್ಮೂರು ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುವುದು. | ಗಂಗಪ್ಪ ಉಪನಿರ್ದೇಶಕ ಆಹಾರ ಇಲಾಖೆ ಗದಗ