

ಅಂಕೋಲಾ: ಸಾಹಿತ್ಯ ಮನಸ್ಸಿನ ಉಮ್ಮಳದಿಂದ ಹುಟ್ಟುವ ಕ್ರಿಯೆ. ಇನ್ನೊಬ್ಬರ ನೋವಿಗೆ ಸ್ಪಂದನ ಸಾಹಿತಿಗಳಲ್ಲಿರಬೇಕು. ಸಮಾಜಮುಖಿ ಸ್ಪಂದನೆ ಇಲ್ಲದೆ ಇದ್ದಲ್ಲಿ ಸಾಹಿತ್ಯಕ್ಕೆ ಅರ್ಥವಿಲ್ಲ. ಆಶಯ, ಭಾವ ತುಂಬಿದ ಜೀವಕಳೆ ಇರುವ ಸಾಹಿತ್ಯ ರಚಿಸಿ ಎಂದು ಹಿರಿಯ ಸಾಹಿತಿ ಶ್ಯಾಮಂ.ಕೃಷ್ಣರಾಯ ಹೇಳಿದರು.
ಪಟ್ಟಣದ ನಾಡವರ ಸಮುದಾಯ ಭವನದಲ್ಲಿ ಪ್ರೊ.ಜಿ.ಎಚ್.ನಾಯಕ ವೇದಿಕೆಯಲ್ಲಿ ಗುರುವಾರ ಉ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಂಕೋಲಾ ತಾಲೂಕು ಕಸಾಪ ಘಟಕದವರು ಆಯೋಜಿಸಿದ 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತ್ಯ ಘಟಕಗಳು ಹೊಸಬರಿಗೆ ಅವಕಾಶ ನೀಡುವ ಜತೆ ಹೊಸತನದ ಆವಿಷ್ಕಾರಗಳು ನಡೆಯಬೇಕು. ಹೊಸತನವನ್ನು ಸ್ವೀಕರಿಸಿದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ. ಸಾಹಿತ್ಯ ಪ್ರಶಸ್ತಿಗಳಿಗಾಗಿ ಅಲ್ಲ, ಬದು ಕುವ ಮೌಲ್ಯಯುತ ಸಾಹಿತ್ಯ ರಚಿಸಿ. ಅದಕ್ಕೆ ಜನ ಗುರುತಿಸಿ ಬೆಲೆ ನೀಡುತ್ತಾರೆ ಎಂದು ಯುವ ಸಾಹಿತಿ ಗಳಿಗೆ ಕಿವಿ ಮಾತು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ತಮ್ಮ ಆಶಯ ನುಡಿಗಳಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಅತಿ ಹೆಚ್ಚು ತಾಲೂಕು ಸಮ್ಮೇಳನ ನಡೆಸಿದ ಗೌರವಕ್ಕೆ ಅಂಕೋಲಾ ಭಾಜನವಾಗಿದೆ. ಕಳೆದ ಎರಡು ವರ್ಷ ಗಳಿಂದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಿಲ್ಲೆಯ ಮನೆ ಮನೆಗೆ ತಲುಪಿಸಿದ್ದೇವೆ. ಕೇವಲ ನಾಲ್ಕು ತಾಲೂಕು ಸಮ್ಮೇಳನದ ಅನುದಾನ ಬಿಡುಗಡೆಯಾಗಿದೆ. ಆದರೆ, ಎಲ್ಲ ಕಡೆ ಸಮ್ಮೇಳನ ನಡೆದಿದೆ ಎಂದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಮಾತನಾಡಿ, ಅಂಕೋಲಾ ಐತಿಹಾಸಿಕ ಪರಂಪರೆಯ ರೈತ ಚುಳುವಳಿಯ ನಾಡು. ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರದೇಶ. ತಾಲೂಕಿನ ಸಾಹಿತ್ಯ ಕೃಷಿಗೆ ಆಡಳಿತ ವ್ಯವಸ್ಥೆಯಿಂದ ಸೂಕ್ತ ಪ್ರಾಧ್ಯಾನ್ಯತೆ ದೊರೆತಿಲ್ಲ ಎಂದರು. ಕಸಾಪ ಉ.ಕ.ದ ಗೌರವ ಕಾರ್ಯದರ್ಶಿ ಜಾರ್ಜ್ ಫರ್ನಾಂಡೀಸ್, ಬಿಇಓ ಮಂಗಳಲಕ್ಷ್ಮೀ ಪಾಟೀಲ್ ಮಾತನಾಡಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಹೊನ್ನಮ್ಮ ನಾಯಕ ಸಮ್ಮೇಳನಾಧ್ಯಕ್ಷ ನಾಗೇಶ ದೇವ ಅಂಕೋಲೆಕರ ಅವರಿಗೆ ಧ್ವಜ ಹಸ್ತಾಂತರಿಸಿದರು.
ಹಿರಿಯ ಸಾಹಿತಿಗಳಾದ ಶಾಂತಾರಾಮ ನಾಯಕ, ಮೋಹನ ಹಬ್ಬು, ವಿಠ್ಠಲ ಗಾಂವಕರ, ಪಿ.ಆರ್.ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸ್ವಾಗತ ಸಮಿತಿಯ ಅಧ್ಯಕ್ಷ ಡಾ. ಮಹೇಶ ಜಿ.ಗೋಳಿಕಟ್ಟೆ ಸ್ವಾಗತಿಸಿದರು, ಶಿಕ್ಷಕ ಪ್ರಶಾಂತ ನಾಯ್ಕ, ಉಪ ನ್ಯಾಸಕಿ ಡಾ.ಪುಷ್ಪಾ ನಾಯ್ಕ ಪರಿಚಯಿಸಿದರು. ಶ್ಯಾಮಸುಂದರ ಗೌಡ ಅನಿಸಿಕೆ ವ್ಯಕ್ತಪಡಿಸಿದರು. ವಿ.ಕೆ. ಗರ್ಲ್ಸ್ ಹೈಸ್ಕೂಲ್ ವಿದ್ಯಾರ್ಥಿಗಳು ನಾಡಗೀತೆ ಪ್ರಸ್ತುತ ಪಡಿಸಿದರು. ಪತ್ರಕರ್ತ ಸುಭಾಸ ಕಾರೇಬೈಲ್, ಜಗದೀಶ ಜಿ. ನಾಯಕ ಕಾರ್ಯಕ್ರಮ ನಿರೂಪಿಸಿದರು.
ಇದನ್ನೂ ಓದಿ: ಉರಗ ರಕ್ಷಕ ಅಬುತಲಾ ಸಾವು
ಧ್ವಜಾರೋಹಣ : ತಹಸೀಲ್ದಾರ್ ಬಿ.ಅನಂತ ಶಂಕರ ರಾಷ್ಟ್ರ ಧ್ವಜಾರೋಹಣ, ಕಸಾಪ ಜಿಲ್ಲಾ ಅಧ್ಯಕ್ಷ ಬಿ. ಎನ್.ವಾಸರೆ ಪರಿಷತ್ತಿನ ಧ್ವಜಾರೋಹಣ ಮತ್ತು ಕಸಾಪ ತಾಲ್ಲೂಕ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ನಾಡ ಧ್ವಜಾರೋಹಣ ನೇರವೇರಿಸಿದರು. ಶಿಕ್ಷಕ ಜಿ.ಆರ್.ತಾಂಡೇಲ್ ನಿರ್ವಹಿಸಿದರು.
ಸಮ್ಮೇಳನಾಧ್ಯಕ್ಷರ ಮೇರವಣಿಗೆ : ದಿ ಅಂಕೋಲಾ ಅರ್ಬನ್ ಕೋ.ಆಪರೇಟಿವ್ ಬ್ಯಾಂಕ್ ಲಿ ಅಧ್ಯಕ್ಷ ಭಾಸ್ಕರ ಕೆ.ನಾರ್ವೇಕರ ಮೆರವಣಿಗೆಗೆ ಚಾಲನೆ ನಿಡಿದರು. ಸಿಡಿಪಿಒ ಸವಿತಾ ಶಾಸ್ತಿçಮಠ, ವಕೀಲ ಬಿ.ಡಿ. ನಾಯ್ಕ, ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ, ತಾಲ್ಲೂಕು ಯುವ ಒಕ್ಕೂಟದ ಅಧ್ಯಕ್ಷ ಗೋಪು ನಾಯಕ ಅಡ್ಲೂರು ಇತರರಿದ್ದರು.
ಸಮ್ಮೇಳನಾಧ್ಯಕ್ಷ ಭಾಷಣ :
ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಸಾಹಿತಿ ಪ್ರೊ. ನಾಗೇಶದೇವ ಅಂಕೋಲೇಕರ್, ಸಾಹಿತ್ಯ ನಿಂತ ನೀರಲ್ಲ, ಸದಾ ಹರಿಯುವ ಶಾಲ್ಮಲೆ, ನಮಗೆ ಅರಿವಿಲ್ಲದೇ ನಮ್ಮನ್ನು ಪ್ರಭಾವಿಸುವಂಥದ್ದು ಸಾಹಿತ್ಯ. ಕಾಲಕಾಲಕ್ಕೆ ತನ್ನೊಳಗಿನ ಸತ್ವದಿಂದ ಓದುಗನನ್ನು ಪ್ರಗತಿಯತ್ತ ಒಯ್ಯುತ್ತಲ್ಲೇ ಇರುವಂಥದ್ದು. ತನ್ನೊಳಗಿನ ಅಂತಃಸತ್ವದಿಂದ ಮುಂದಿನ ತಲೆಮಾರುಗಳನ್ನು ಪ್ರಭಾವಿಸುವ ಮತ್ತು ಆ ಮೂಲಕ ಸಮಾಜದ ಮುಖ್ಯಧಾರೆಯೊಂದಿಗೆ ಸಂಬಂಧ ಏರ್ಪಡಿಸುವ ಶಕ್ತಿ ಸಾಹಿತ್ಯಕ್ಕಿದೆ ಎಂದರು.