

ಗಂಡಸಿ: ನೂತನವಾಗಿ ಜೀರ್ಣೋದ್ಧಾರಗೊಂಡ ಗಂಡಸಿ ದೊಡ್ಡ ಕೆರೆಯ ದಡದಲ್ಲಿ ನೆಲೆಸಿರುವ ಪುರಾತನ ಕಾಲದ ಗಂಡಸಿ ಶ್ರೀ ಆಂಜನೇಯ ಸ್ವಾಮಿ ದೇವಾಲಯ ಪ್ರವೇಶ, ಶಿಖರದ ಕಳಸ ಸ್ಥಾಪನೆ, ಕುಂಭಾಭಿಷೇಕ ಕಾರ್ಯಕ್ರಮಗಳು ನ.14ರಿಂದ 17ರವರೆಗೆ ನಡೆಯಲಿದೆ ಎಂದು ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಪ್ರಧಾನ ನಿರ್ವಾಹಕ ಜಿ.ಎಂ.ಬಸವರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ.14ರ ಬೆಳಗ್ಗೆ 8ಗಂಟೆಗೆ ಮಹಾಗಣಪತಿ ಪೂಜೆ, ಸಂಕಲ್ಪ, ಗೋಮಾತೆ ಪೂಜೆ, ಯಾಗ ಶಾಲೆ ಪ್ರವೇಶ, ಧ್ವಜಾರೋಹಣ, ಅಂಕುರಾರ್ಪಣೆ ಸಂಜೆ 6ಗಂಟೆಗೆ ಗಂಗಾಪೂಜೆ, ವಾಸ್ತು ಹೋಮ, ಬಲಿಪ್ರದಾನ, ಮಹಾಮಂಗಳಾರತಿ, ಗಣಪತಿ ಪೂಜೆ, ಸ್ವಾಸ್ತಿಪುಣ್ಯಾಹವಾಚನ, ರಕ್ಷಾ ಬಂಧನ, ದೇವತಾ ಕಳಸ ಸ್ಥಾಪನೆ, ಬಲಿಪ್ರದಾನ, ಪೂರ್ಣಾಹುತಿ , ಮಹಾಮಂಗಳಾರತಿ ನ.16 ಶನಿವಾರ ಯೋಗಶಾಲೆ ಪ್ರವೇಶ, ಉತ್ಸವಮೂರ್ತಿಗೆ ಅಭಿಷೇಕ, ರಾಮಾತಾರಕ ಹೋಮ, ಪವನಾಮಹೋಮ, ಆರತಿ ಮಹಾ ಮಂಗಳಾರತಿ ನಡೆಯಲಿದೆ. ನ.17ರ ಭಾನುವಾರ ಮೂಲ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ, ಧನುರ್ ಲಗ್ನದಲ್ಲಿ ಗೋಪುರಕ್ಕೆ ಕಳಸ ಸ್ಥಾಪನೆ, ಪಂಚಾಮೃತ ಅಭಿಷೇಕ, ಕುಂಭಾಭಿಷೇಕ, ಪೂರ್ಣಾಹುತಿ ಮಹಾ ಮಂಗಳಾರತಿ ನೆರವೇರಲಿದೆ.
ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ನುಗ್ಗೆಹಳ್ಳಿ ಪುರವರ್ಗ ಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಬೆಲಗೂರು ವೀರಾಂಜನೇಯ ಸ್ವಾಮಿ ಕ್ಷೇತ್ರದ ವಿಜಯಮಾರುತಿ ಶರ್ಮ ಸ್ವಾಮಿ, ಹಾಸನ ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಕೆರೆಗೋಡಿ ರಂಗಾಪುರ ಮಠದ ಗುರುಪರದೇಶಿಕೇಂದ್ರ ಸ್ವಾಮೀಜಿ, ಗಂಡಸಿ ಶಂಭುಲಿಂಗೇಶ್ವರ ಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಕೆ.ಆರ್.ನಗರ ಕನಕ ಗುರು ಪೀಠ ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ, ಅರಸೀಕೆರೆ ಮಾರುತಿ ಸಚ್ಚಿದಾನಂದ ಆಶ್ರಮದ ಸತೀಶ ಶರ್ಮಾಜಿ ಮಹಾರಾಜರು ಕಾರ್ಯಕ್ರಮಕ್ಕೆ ಆಗಮಿಸಿ ಆಶೀರ್ವಚನ ನೀಡಲಿದ್ದಾರೆ.
ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರಿಗೆ 4 ದಿನ ಮಧ್ಯಾಹ್ನ ಅನ್ನದಾಸೋಹ ಏರ್ಪಡಿಸಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಗಮಿಸುವಂತೆ ದೇವಾಲಯ ಆಡಳಿತ ಮಂಡಳಿ ಮನವಿ ಮಾಡಿದ್ದಾರೆ.