ಅಂಜನಾದ್ರಿ ಆಂಜನೇಯನ ಜನ್ಮಸ್ಥಳವಲ್ಲ ಎಂದು ಹೇಳುವ ಟಿಟಿಡಿ ವಾದ ಸರಿಯಲ್ಲ

Anjanadri
Published on

ಬೆಂಗಳೂರು: ಆಂಜನೇಯನ ಜನ್ಮಸ್ಥಳ ಕುರಿತಂತೆ ವಿವಾದ ಶುರುವಾಗಿದ್ದು, ಕರ್ನಾಟಕದ ಅಂಜನಾದ್ರಿಯನ್ನು ದಿಕ್ಕರಿಸಿ ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಹೊಸ ಜನ್ಮಸ್ಥಳ ಹುಟ್ಟಿಹಾಕಿದ್ದು ಭಕ್ತರಲ್ಲಿ ಜಿಜ್ಞಾಸೆ ಮೂಡಿಸಿದೆ.

ಪುರಾಣ ಕಾಲದಿಂದ ಹಿಡಿದು ನವಯುಗದ ಆಲೂರು ವೆಂಕಟರಾಯರು ಸಹ ತಮ್ಮ ಸಾಹಿತ್ಯದಲ್ಲಿ ಕರುನಾಡನ್ನು ಹನುಮನುದಿಸಿದ ನಾಡು ಎಂದು ಕರೆಯುವ ಮೂಲಕ ಸಾಕಷ್ಟು ಸಾಹಿತ್ಯಿಕ ದಾಖಲೆಗಳನ್ನು ನೀಡಿದ್ದಾರೆ. ಅದರೆ, ಟಿಟಿಡಿ ವಿನಾಕಾರಣ ಈ ರೀತಿಯಾಗಿ ನಡೆದುಕೊಳ್ಳುವ ಮೂಲಕ ಭಕ್ತರ ಭಾವನೆಗಳ ಚಲ್ಲಾಟವಾಡುತ್ತಿರುವುದು ಖಂಡನೀಯ.

ಹನುಮನ ಹುಟ್ಟಿನ ಕುರಿತು ನೋಡುವುದಾದರೆ, ಹನುಮನ ಜನ್ಮ ಎಲ್ಲಿ ಆಯಿತು ಎಂಬುದನ್ನು ನಿರ್ದಿಷ್ಟವಾಗಿ ಸಾಕ್ಷ್ಯ ಒದಗಿಸುವ ಮೊತ್ತೊಂದು ವೃತ್ತಾಂತಕ್ಕೆ ಬರಬೇಕಾಗಿದೆ. ಚಿರಂಜೀವಿ ವರ ಪಡೆದಿದ್ದ ಮಾರುತಿ (ಮೂಲ ಹೆಸರು) ಶ್ರೀರಾಮನ ಎಲ್ಲ ಕಾರ್ಯಗಳು ಮುಗಿದ ಮೇಲೆ ಶ್ರೀರಾಮನ ಬಳಿಸಾಗಿ ರಾಮ, ‘ ನೀನೆ ನನ್ನ ಹೃದಯದಲ್ಲಿ ಇದ್ದರೂ ಸಹ ಏಕೋ ಮನಸ್ಸಿಗೆ ಸಮಾಧಾನವಿಲ್ಲ ಎಂದು ಅರಹುತ್ತಾನೆ. ಆಗ ರಾಮ, ಅವನಿಗೆ ವಿವಿಧ ಆಭರಣಗಳನ್ನು ನೀಡಿದರೂ ಸಹ ಅವನ ತಳಮಳ ಕೊನೆಯಾಗುವುದಿಲ್ಲ ಆಗ ರಾಮ, ನೋಡು ಮಾರುತಿ ನಾನು ಸಹ ರಾಮೇಶ್ವರದಲ್ಲಿ ತೊಳಲಾಟದಲ್ಲಿದ್ದಾಗ ನೆರವಿಗೆ ಬಂದದ್ದು ಶಿವ.

ಅವನ ಅಂಶವಾಗಿರುವ ನೀನು ಸಹ ರುದ್ರನಲ್ಲಿಗೆ ಹೋಗಿ ನಿನ್ನ ಸಮಸ್ಯೆ ಹೇಳಿಕೋ ಎನ್ನುತ್ತಾನೆ. ಆ ಕೈಲಾಸಕ್ಕೆ ಬರುವ ಮಾರುತಿಯನ್ನು ಬಾಗಿಲಲ್ಲೇ ತಡೆದ ನಂದಿಯನ್ನು ಕುರಿತು, ಓ ನಂದಿಯೇ ನಾನು ಮಾಡಿದ ಪಾಪವೇನು? ನನ್ನನ್ನೇಕೆ ಶಿವಸಂದರ್ಶನಕ್ಕೆ ಬಿಡುತ್ತಿಲ್ಲ. ಕೇಳಿ ತಿಳಿಯುವ ಕುತೂಹಲ ಉಂಟಾಗಿದೆ ಹೇಳು ಎಂದು ವಿನಂತಿಸುತ್ತಾನೆ. ಆಗ ನಂದಿಯು ‘ಮಾರುತಿಯೇ ನಿನ್ನಿಂದ ಸಾಕಷ್ಟು ಅಪರಾಧಗಳಾಗಿವೆ. ಶಾಸ್ತ್ರ ಸಮ್ಮತಿಸದ ಕೆಲಸಗಳನ್ನು ನೀನು ಮಾಡಿರುವೆ ಅದರಲ್ಲಿ ಮುಖ್ಯವಾಗಿ ಸುಗ್ರೀವನೊಡನೆ ಸೇರಿ ವಾಲಿಯನ್ನು ಮೋಸದಿಂದ ಕೊಂದಿದ್ದು, ಶಿವಭಕ್ತನಾದ ಪೌಲ್ಯಸ್ತನಲ್ಲಿಗೆ ಹೋಗಿ ಅಶೋಕವನ ಹಾಗೂ ಅಮರಾವತಿಯಂತೆ ಇದ್ದ ನಗರವನ್ನು ಸುಟ್ಟು ಹಾಕಿರುವೆ, ಸತ್ಪಥಗಾಮಿಗಳಾದ ವೀರಭದ್ರದೇವನ ಯಜ್ಞ ನಿರೋಧ ಕ್ರಾಂತಿಗೆ ಸೇರಿದ ಅನೇಕ ಶಿವಭಕ್ತರನ್ನು ಸಂಹಾರ ಮಾಡಿರುವೆ ಇದರಿಂದಾಗಿ ನಿಮ್ಮ ಕುಲಕ್ಕೆ ಕೆಟ್ಟ ಹೆಸರು ಬರುವಂತಾಗಿದೆ ಇದರಿಂದ ಹೊರಬರುವ ತನಕ ನಿನಗೆ ಶಿವನ ದರ್ಶನವಿಲ್ಲ ಎನ್ನುತ್ತಾನೆ.

ಮಾರುತಿ ನಿನ್ನ ಜನ್ಮಸ್ಥಾನವಾದ ಕಿಷ್ಕಿಂದೆಗೆ ತೆರಳು ಅಲ್ಲಿ ನದಿಯಲ್ಲಿ ಸ್ನಾನ ಮಾಡಿ ವೀರಭದ್ರನ ಕುರಿತು ತಪಸ್ಸು ಮಾಡು ಅವನಿಂದ ಲಿಂಗಧಾರಣೆಯಾಗುತ್ತದೆ ಆಗ ನೀನು ಮೊದಲಿನಂತೆ ಶಿವದರ್ಶನ ಮಾಡಬಹುದು ಹಾಗೂ ನೆಮ್ಮದಿ ಸಿಗುತ್ತದೆ ಎಂದು ಹೇಳುತ್ತಾನೆ. ಹೀಗೆ ಕಿಷ್ಕಿಂದೆ (ಹಂಪಿ) ಕ್ಷೇತ್ರಕ್ಕೆ ಬರುವ ಮಾರುತಿ ಅಲ್ಲಿ ವೀರಭದ್ರನ ಕುರಿತು ತಪಸ್ಸು ಮಾಡುತ್ತಾನೆ. ಆಗ ವೀರಭದ್ರನು ದರ್ಶನ ಕೊಡುತ್ತಾನೆ. ಈ ರೀತಿಯಾಗಿ ವೀರಭದ್ರನ ದರ್ಶನದಿಂದ ಪಾಪ ಕಳೆದುಕೊಂಡ ಮಾರುತಿಗೆ ಅವನಿಚ್ಛೆಯಂತೆ ವೀರಭದ್ರಸ್ವಾಮಿಯು ಲಿಂಗ-ರುದ್ರಾಕ್ಷಿ ಧಾರಣೆ ಮಾಡುತ್ತಾನೆ.

ಆಗ ಸರ್ವಪಾಪ ಹಾಗೂ ಆರೋಪಗಳಿಂದ ಮುಕ್ತಿಹೊಂದಿದ ಮಾರುತಿಯೂ ವೀರಭದ್ರನನ್ನು ಕುರಿತು ತಾವು ಪಂಪಾಕ್ಷೇತ್ರದಲ್ಲಿ ನೆಲೆನಿಂತು ಭಕ್ತರನ್ನು ಉದ್ಧರಿಸಬೇಕು ಎಂದು ಮನವಿ ಮಾಡುತ್ತಾನೆ. ಆಗ ವೀರಭದ್ರನು ಉದ್ಧಾನ ವೀರಭದ್ರನಾಗಿ ಅಲ್ಲಿ ನೆಲೆ ನಿಂತಿದ್ದು ಇಂದಿಗೂ ಸಹ ಹಂಪಿಯಲ್ಲಿ ಉದ್ಧಾನ ವೀರಭದ್ರಸ್ವಾಮಿ ದೇವಾಲಯ ಇರುವುದನ್ನು ನಾವೆಲ್ಲರೂ ನೋಡಿದ್ದೇವೆ. ಈ ಕಥೆಯಲ್ಲಿ ಗಮನಿಸಬೇಕಾದ ಅಂಶವೆಂದರೆ ಜನ್ಮಸ್ಥಳಕ್ಕೆ ಬಂದು ಪಾಪ ಕಳೆದುಕೊಳ್ಳುವುದು ಅದು ಕಿಷ್ಕಿಂದೆ ಅಂದರೆ ಇಂದಿನ ಹಂಪಿ ಹಾಗೂ ಸುತ್ತಮುತ್ತಲಿನ ಪ್ರದೇಶವಾಗಿದೆ.

ಇಷ್ಟೇ ಅಲ್ಲದೇ ಹನುಮ ಹಂಪಿಯಲ್ಲಿ ತಪಸ್ಸಿಗೆ ಕುಳಿತಿದ್ದ ಎನ್ನುವುದನ್ನು ನೆನಪಿಸಲು ಯಂತ್ರೋದ್ಧಾರಕ ಹನುಮನ ದೇವಸ್ಥಾನ ಅಲ್ಲಿದೆ. ಎಲ್ಲಿಯೂ ಸಹ ಇಲ್ಲದ ವಿಶೇಷತೆ ಈ ವಿಗ್ರಹದಲ್ಲಿದ್ದು ಅಲ್ಲಿ ಆಂಜನೇಯ ತಪಸ್ಸಿಗೆ ಕುಳಿತಂತೆ ಕೆತ್ತಲಾಗಿದೆ.

ವಿನಾಶ ಕಾಲೇ ವಿಪರೀತ ಬುದ್ಧಿ ಎನ್ನುವಂತೆ ಹಿಂದೆ ಆ ರಾಜ್ಯದ ಸಿಎಂ ಆಗಿದ್ದ ದಿ. ವೈ ಎಸ್. ರಾಜಶೇಖರ್‍ರೆಡ್ಡಿ ಸಹ ಆಗ ತಿರುಮಲದಲ್ಲಿ ಕ್ರಿಶ್ಚಿಯನ್ ಧರ್ಮ ಪ್ರಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಆಗ ದಿ. ಪೇಜಾವರ ಶ್ರೀಗಳು ಇದರ ವಿರುದ್ಧ ಹೋರಾಟ ಮಾಡಿ ಅದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದರು. ಅದೇ ರೀತಿ ಈಗಲೂ ಸಹ ಟಿಟಿಡಿ ನಡೆಸಿರುವ ಹುನ್ನಾರ ಹುಸಿಗೊಳಿಸಲು ನಾವೆಲ್ಲ ಕಂಕಣಬದ್ಧರಾಗಬೇಕು.

ಲೇಖನ- ಪ್ರಶಾಂತ ರಾಜಗುರು, ಸಂಸ್ಕೃತಿ ಚಿಂತಕರು, ಧಾರವಾಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net