

ಗಂಗಾವತಿ: ಕಿಷ್ಕಿಂದಾ ಕ್ಷೇತ್ರ ಪೌರಾಣಿಕ ಹಿನ್ನೆಲೆ ಒಳಗೊಂಡಿದ್ದು, ಅಂಜನಾದ್ರಿ ಬೆಟ್ಟ ಜಗತ್ಪ್ರಸ್ಸಿದ್ಧಿ ಆಗುತ್ತಿದೆ. ಬೆಟ್ಟದ ಸುತ್ತಲೂ ಪಾರಾಯಣ, ಭಜನೆ ಮೂಲಕ ಪರಿಕ್ರಮ ನಡೆಯುತ್ತಿರುವುದು ವಿಶೇಷ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ತಾಲೂಕಿನ ಹನುಮನಹಳ್ಳಿ ಬಳಿ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದಲ್ಲಿ ಶ್ರಾವಣ ಮಾಸದ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಅಂಜನಾದ್ರಿ ಪರಿಕ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಂಜನೇಯ ಮೂರ್ತಿಗೆ ವಿಶೇಷ ಪೂಜೆ, ಅಲಂಕಾರ, ಸಾಮೂಹಿಕ ಹನುಮಾನ ಚಾಲೀಸಾ ಪಾರಾಯಣ ನೆರವೇರಿಸಲಾಯಿತು. ನಂತರ ಪಾದಗಟ್ಟೆಯಿಂದ ಬೆಟ್ಟದ ಸುತ್ತಲೂ ಪಲ್ಲಕ್ಕಿಯಲ್ಲಿ ಪರಿಕ್ರಮ ಜರುಗಿತು. ಪರಿಕ್ರಮದ ಕುರಿತು ಅಂಜನಾದ್ರಿ ಬೆಟ್ಟದ ಪ್ರಧಾನ ಅರ್ಚಕ ವಿದ್ಯಾದಾಸ್ ಬಾಬಾ ಮಾಹಿತಿ ನೀಡಿದರು.
ಅಂಜನಾದ್ರಿ ಭಕ್ತಿ ಮಂಡಳಿ ಸದಸ್ಯ ಜಿ.ಹಂಪೇಶ ಹರಿಗೋಲು, ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಪಿ.ಲಕ್ಷ್ಮಣನಾಯ್ಕ, ಪ್ರಮುಖರಾದ ನಾರಾಯಣಗೌಡ, ವೆಂಕಟರೆಡ್ಡಿ, ಪಿ.ವೆಂಕಟೇಶರಾವ್ ಹೊಸಳ್ಳಿ, ಶರಣೇಗೌಡ ಕೇಸರಹಟ್ಟಿ, ಬಾಲು ಹನುಮನಹಳ್ಳಿ, ಕಾವ್ಯಾ, ರಾಜೇಶ್ವರಿ, ಭುವನೇಶ್ವರಿ, ಶ್ರೀದೇವಿ, ಹೊಸಪೇಟೆಯ ನರಸಿಂಹಮೂರ್ತಿ ಇತರರಿದ್ದರು.