ಅಂಜಲಿ ಶಾಲೆಯಲ್ಲಿ ಅಕ್ಷರಭ್ಯಾಸ , ವಿದ್ಯಾರ್ಥಿಗಳಿಗೆ ಉಚಿತ ಸ್ಕೂಲ್ ಬ್ಯಾಗ್ ವಿತರಣೆ

anjal
Published on

ಬೆಂಗಳೂರು : ನಗರದ ಸುಂಕದಕಟ್ಟೆಯ ಶ್ರೀನಿವಾಸ ನಗರದಲ್ಲಿರುವ ಅಂಜಲಿ ಕಾನ್ವೆಂಟ್ ಮತ್ತು ನೈಟಿಂಗೇಲ್ ಪ್ರೌಢಶಾಲೆಯಲ್ಲಿ ಬೆಳ್ಳಿ ಹಬ್ಬದ ಪ್ರಯುಕ್ತ 2025-26 ನೇ ಸಾಲಿನ ಎಲ್ಲಾ ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಗ್ ವಿತರಣೆ ಮಾಡಲಾಯಿತು. ಇದೇ ವೇಳೆ ನೂತನವಾಗಿ ಪ್ರವೇಶಾತಿ ಪಡೆದಿರುವ ಚಿಕ್ಕ ಮಕ್ಕಳಿಗಾಗಿ ಆಯೋಜಿಸದ್ದ ಅಕ್ಷರಭ್ಯಾಸ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಂಶುಪಾಲರಾದ ಡಾ.ಬಿ.ಕೃಷ್ಣೇಗೌಡ, ಸಾಮಾನ್ಯವಾಗಿ ಪೋಷಕರು ತಮ್ಮ ಮಕ್ಕಳಿಗೆ ಪುಣ್ಯಕ್ಷೇತ್ರಗಳಿಗೆ ಕರೆದುಕೊಂಡು ಹೋಗಿ ಅಕ್ಷರಾಭ್ಯಾಸ ಮಾಡಿಸುತ್ತಾರೆ. ಆದರೆ ಎಲ್ಲಾ ಪೋಷಕರು ಪುಣ್ಯಕ್ಷೇತ್ರಗಳಿಗೆ ಹೋಗಿ ಅಕ್ಷರಾಭ್ಯಾಸ ಮಾಡಿಸುವುದು ಕಷ್ಟ ಎಂಬುದನ್ನು ಅರಿತು ನಮ್ಮ ಶಾಲೆಯಲ್ಲಿಯೇ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಕಾರ್ಯಕ್ರಮ ಆಯೋಜಿಸಿದ್ದಾಗಿ ತಿಳಿಸಿದರು. ಇದೇ ವೇಳೆ ವಿದ್ಯಾದೇವತೆಯಾದ ಶ್ರೀಶಾರದಾಂಬೆಯ ಪೂಜೆಯನ್ನು ಮಾಡಲಾಯಿತು.

ಸಂಸ್ಥೆಯ ಕಾರ್ಯದರ್ಶಿ ಸರಳ ಕೆ.ಗೌಡ ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರುವು ಎಂಬ ಮಾತಿನಂತೆ ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಮಹತ್ವವಾದದ್ದು ಎಂದರು.

ಶಾಲೆಯಲ್ಲಿ ಹಮ್ಮಿಕೊಂಡ ವಿಶಿಷ್ಟ ಕಾರ್ಯಕ್ರಮದ ಬಗ್ಗೆ ಪೋಷಕರು ಮೆಚ್ಚುಗೆಯ ಮಾತುಗಳನ್ನಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದ ಎಲ್ಲಾ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರಸಾದವನ್ನು ವಿತರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಎಸ್.ಜಿ.ಗೌಡ, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net