ಡಾಂಬರೀಕರಣ ಯೋಗ ಕಂಡ ಆನೆಗುಂದಿ ರಸ್ತೆ

ಗಂಗಾವತಿ ತಾಲೂಕಿನ ಆನೆಗೊಂದಿ ಮಾರ್ಗದ ಸಂಗಾಪುರ, ಬಸವನದುರ್ಗ ಮುಖ್ಯರಸ್ತೆಗೆ ಡಾಂಬರೀಕರಣ ಮಾಡಿರುವುದು.
ಗಂಗಾವತಿ ತಾಲೂಕಿನ ಆನೆಗೊಂದಿ ಮಾರ್ಗದ ಸಂಗಾಪುರ, ಬಸವನದುರ್ಗ ಮುಖ್ಯರಸ್ತೆಗೆ ಡಾಂಬರೀಕರಣ ಮಾಡಿರುವುದು.
Published on

ಗಂಗಾವತಿ: ತಾಲೂಕಿನ ಆನೆಗೊಂದಿ ಮುಖ್ಯರಸ್ತೆ 8 ತಿಂಗಳ ಬಳಿಕ ಡಾಂಬರೀಕರಣ ಯೋಗ ಕಂಡಿದೆ. ನಗರದ ಸಾಯಿನಗರದಿಂದ ಬಸವನದುರ್ಗ ವರೆಗಿನ ಮುಖ್ಯರಸ್ತೆ ಶಾಶ್ವತ ದುರಸ್ತಿಗಾಗಿ ವರ್ಷದ ಹಿಂದೆ ಟೆಂಡರ್ ಕರೆಯಲಾಗಿದ್ದು, 20 ಕೋಟಿ ರೂ.ವೆಚ್ಚದ ಯೋಜನೆ ರೂಪಿಸಲಾಗಿತ್ತು. 2024ರಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದರೂ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿಳಂಬ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ನನೆಗುದಿಗೆ ಬಿದ್ದಿತ್ತು. ರಸ್ತೆ ವಿಸ್ತರಣೆ ಮತ್ತು ದುರಸ್ತಿ ನೆಪದಲ್ಲಿ ಅಗೆದು ಕೈಬಿಡಲಾಗಿತ್ತು. ಕೆಲದಿನ ವೆಟ್‌ಮಿಕ್ಸ್ ಹಾಕಿ ಕೈತೊಳೆದುಕೊಳ್ಳಲಾಗಿತ್ತು.

ಇದರಿಂದ 7 ಕಿಮೀ ರಸ್ತೆ ಸಂಚಾರ ದುಸ್ತರವಾಗಿದ್ದು, ಪ್ರಯಾಸದಿಂದಲೇ ಪ್ರಾಯಾಣ ಮಾಡುವ ಸ್ಥಿತಿ ಎದುರಾಗಿತ್ತು. ಐತಿಹಾಸಿಕ ಅಂಜನಾದ್ರಿ ಬೆಟ್ಟ ಮತ್ತು ಹುಲಿಗೆ ದೇವಾಲಯಕ್ಕೆ ಕಲ್ಯಾಣ ಕರ್ನಾಟಕದಿಂದ ಬರುವ ಪ್ರವಾಸಿಗರು ಇದೇ ರಸ್ತೆಯನ್ನು ಅವಲಂಬಿಸಿದ್ದರಿಂದ ವಾಹನ ಸವಾರರರಿಗೆ ತೊಂದರೆಯಾಗಿತ್ತು. ರಸ್ತೆ ದುಸ್ಥಿತಿ ಬಗ್ಗೆ ಹಲವು ಬಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ. ಧೂಳು ಹಾಗೂ ಅಪಘಾತಗಳ ದಾರಿಯಾಗಿತ್ತು. ಜನರ ಆಕ್ರೋಶ ಹೆಚ್ಚಾಗಿದ್ದರಿಂದ ಡಾಂಬರೀಕರಣಕ್ಕೆ ಚಾಲನೆ ನೀಡಲಾಗಿದೆ.

ಲೋಕೋಪಯೋಗಿ ಇಲಾಖೆ ಎಇಇ ವಿಶ್ವನಾಥ ಪ್ರತಿಕ್ರಿಯಿಸಿ, ರಸ್ತೆ ಎರಡು ಬದಿಯಲ್ಲಿ ಮರಗಳಿದ್ದು, ಅರಣ್ಯ ಇಲಾಖೆಗೆ ಹಣ ನೀಡಬೇಕಿತ್ತು. ಆದ್ದರಿಂದ ವಿಳಂಬವಾಯಿತು. ಬಿಟಿ ಪ್ಲಾಂಟ್ ಒಂದೇ ಇರುವುದರಿಂದ ಸಾಕಷ್ಟು ಪ್ರಮಾಣದಲ್ಲಿ ಸಿಕ್ಕಿರಲಿಲ್ಲ. ಟೆಂಡರ್ ಷರತ್ತಿನಂತೆ ಇನ್ನೂ ಸಮಯವಿದ್ದು, ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net