ಮಳೆಗಾಲ ಮುಗಿದ ನಂತರ ಮರು ಡಾಂಬರೀಕರಣ ಮಾಡಿ

oplus_2
ಸೋಮವಾರಪೇಟೆ ತಾಲೂಕಿನ ಹರದೂರು, ಗರಗಂದೂರು ಮಾರ್ಗ ರಸ್ತೆ ಕಾಮಗಾರಿ ಕಳಪೆ ದೂರಿನ ಅನ್ವಯ ಶಾಸಕ ಡಾ.ಮಂತರ್‌ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪ್ರಭು, ಸಲೀಂ, ಸತೀಶ್, ಲಕ್ಷ್ಮಣ್, ರೋಹಿತ್ ಇದ್ದರು.
Published on

ಸೋಮವಾರಪೇಟೆ: ತಾಲೂಕಿನ ಹೊಸತೋಟ ಹಾಗೂ ಗರಗಂದೂರು ಮಾರ್ಗದಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಿರ್ಮಾಣವಾಗಿರುವ ರಸ್ತೆ ಕಾಮಗಾರಿ ಕಳಪೆ ಆರೋಪದ ದೂರಿನ ಹಿನ್ನೆಲೆಯಲ್ಲಿ ಗುರುವಾರ ಶಾಸಕ ಡಾ.ಮಂತರ್‌ಗೌಡ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.

ಪಿಎಂಜಿಎಸ್‌ವೈ ಮೂಲಕ ಕಳೆದ 2017ರಲ್ಲಿ ಆರಂಭವಾಗಿ 2020ಕ್ಕೆ ಪೂರ್ಣಗೊಂಡಿರುವ ರಸ್ತೆಯ ಮರು ಡಾಂಬರೀಕರಣ ಕಾಮಗಾರಿ ಕಳಪೆಯಾಗಿರುವ ಬಗ್ಗೆ ಮಾಹಿತಿ ಪಡೆದ ಶಾಸಕರು ಹಳೆಯ ರಸ್ತೆಯ ಮೇಲೆ ತೇಪೆ ಹಚ್ಚುವ ಕೆಲಸ ಮಾಡಲಾಗಿದೆ. ಸರಿಯಾದ ಪ್ರಮಾಣದಲ್ಲಿ ಡಾಂಬರು ಹಾಗೂ ಗಮ್ ಬಳಸದೇ ಇರುವುದು ಕಂಡುಬಂದಿದೆ. ಇದೀಗ ಹಾಕಿರುವ ಡಾಂಬರನ್ನು ಸಂಪೂರ್ಣವಾಗಿ ಕಿತ್ತು ತೆಗೆದು, ಮಳೆಗಾಲ ಮುಗಿದ ನಂತರ ಮರು ಡಾಂಬರೀಕರಣ ಮಾಡಬೇಕು ಎಂದು ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ಯೋಜನಾ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಭು ಅವರಿಗೆ ಸೂಚಿಸಿದರು.

ಸುಮಾರು 600 ಮೀಟರ್ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಎರಡು ವರ್ಷದಲ್ಲಿ 50 ಕೋಟಿಗೂ ಅಧಿಕ ಅನುದಾನದಡಿ ಕ್ಷೇತ್ರದ ವಿವಿಧ ಭಾಗಗಳಲ್ಲಿ ರಸ್ತೆ ಕಾಮಗಾರಿ ನಡೆಸಲಾಗಿದೆ. ಯಾವುದೇ ಕಾಮಗಾರಿ ಕಳಪೆಯಾಗಿಲ್ಲ. ಇದೇ ಮೊದಲ ಬಾರಿಗೆ ಕಳಪೆ ಕಾಮಗಾರಿ ನಡೆಸಲಾಗಿದೆ. ಸಂಬಂಧಿಸಿದ ಗುತ್ತಿಗೆದಾರರಿಗೆ ನೋಟಿಸ್ ನೀಡಿ, ಕ್ರಮ ಕೈಗೊಳ್ಳಬೇಕು. ಕಪ್ಪುಪಟ್ಟಿಗೆ ಸೇರಿಸುವ ಬಗ್ಗೆಯೂ ಗಮನ ಹರಿಸಬೇಕೆಂದು ಎಇಇ ಪ್ರಭು ಅವರಿಗೆ ಸೂಚಿಸಿದರು.

ಇದೇ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ರಸ್ತೆ ಕಾಮಗಾರಿ ಪೂರ್ಣಗೊಂಡು 5 ವರ್ಷಗಳ ನಂತರ ಮರು ಡಾಂಬರೀಕರಣ ಮಾಡಬೇಕಿದೆ. ಗುತ್ತಿಗೆದಾರ ತರಾತುರಿಯಲ್ಲಿ, ಮಳೆಯ ಸಮಯದಲ್ಲಿ ಡಾಂಬರು ಹಾಕಿರುವುದರಿಂದ ರಸ್ತೆ ಕಿತ್ತು ಬರುತ್ತಿದೆ. ಈ ಬಗ್ಗೆ ಮರು ಡಾಂಬರೀಕರಣಕ್ಕೆ ನಿರ್ದೇಶನ ನೀಡಲಾಗಿದೆ. ಕಳಪೆ ಕಾಮಗಾರಿಗೆ ಯಾವುದೇ ಆಸ್ಪದ ನೀಡುವುದಿಲ್ಲ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ ಮಾತನಾಡಿ, ಈ ರಸ್ತೆ ಇನ್ನೂ ಜಿಲ್ಲಾ ಪಂಚಾಯಿತಿ ಅಧೀನಕ್ಕೆ ಬಂದಿಲ್ಲ. ಈ ಯೋಜನೆಯಡಿ ಗುತ್ತಿಗೆದಾರರು 5 ವರ್ಷಗಳ ಕಾಲ ರಸ್ತೆ ನಿರ್ವಹಣೆ ಮಾಡಿ, ನಂತರ ಮರು ಡಾಂಬರೀಕರಣ ಕೈಗೊಂಡು ಜಿಲ್ಲಾ ಪಂಚಾಯಿತಿಗೆ ಹಸ್ತಾಂತರಿಸಬೇಕಿದೆ ಎಂದರು.

ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಪ್ರತ್ಯೇಕ ವಿಭಾಗವಾಗಿದ್ದು, ಜಿಲ್ಲಾ ಪಂಚಾಯಿತಿಗೂ ಆ ಸಂಸ್ಥೆಗೂ ನೇರ ಸಂಬಂಧವಿಲ್ಲ. ಇದೀಗ ರಸ್ತೆ ಕಾಮಗಾರಿ ಕಳಪೆಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಗುತ್ತಿಗೆದಾರರಿಗೆ ನೋಟೀಸ್ ನೀಡಿ, ಮರು ಡಾಂಬರೀಕರಣ ಮಾಡುವಂತೆ ಸಂಬಂಧಿಸಿದ ಇಂಜಿನಿಯರ್‌ಗೆ ಜಿ.ಪಂ.ನಿಂದಲೂ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಹರದೂರು ಗಾಮ ಪಂಚಾಯಿತಿ ಉಪಾಧ್ಯಕ್ಷ ಸಲೀಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಸ್ಥಳೀಯರಾದ ಲಕ್ಷ್ಮಣ್, ಸಿ.ಕೆ.ರೋಹಿತ್, ಲಿಖಿತ್ ದಾಮೋಧರ್, ಚನ್ನಕೇಶವ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net