ಸುಗ್ಗನಹಳ್ಳಿಯಲ್ಲಿ ಸಿಕ್ಕಿತು ಪುರಾತನ ಗಾಣದಕಲ್ಲು

Ganadakallu1
Published on

* ಗ್ರಾಪಂ ಸಿಬ್ಬಂದಿ ಶ್ರಮದಾನ ಮಾಡುವಾಗ ಪತ್ತೆ

* ಪಂಚಾಯಿತಿಯಿಂದ ಸಂರಕ್ಷಣೆ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಜಗತ್ತು ಆಧುನಿಕತೆ ಕಡೆಗೆ ವಾಲಿದಂತೆ ಪುರಾತನ ಬಳಕೆ ವಸ್ತುಗಳು ತೆರೆಮರೆಗೆ ಸರಿದಿವೆ. ಅಂತಹ ವಸ್ತುವನ್ನು ಸುಗ್ಗನಹಳ್ಳಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಸಂರಕ್ಷಿಸುವ ಮೂಲಕ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಹೌದು.. ಅದು ನೂರಾರು ವರ್ಷದ ಗಾಣದಕಲ್ಲು. ಹಲವು ಕುಟುಂಬಗಳ ಜೀವನಾಧಾರ. ಈಗಿನಂತೆ ಹಿಂದೆ ಯಾವುದೇ ಯಂತ್ರಗಳು ಸದ್ದು ಮಾಡುತ್ತಿರಲಿಲ್ಲ. ಅಡುಗೆ, ದೀಪ ಮತ್ತು ತಲೆಗೆ ಬಳಸುವ ಎಣ್ಣೆಯನ್ನು ಗಾಣದಲ್ಲೇ ತೆಗೆಯಲಾಗುತ್ತಿತ್ತು. ಈ ಗಾಣಗಳು ಮರದ ಇಲ್ಲವೇ ಕಲ್ಲಿನಿಂದ ಮಾಡಲ್ಪಡುತ್ತಿದ್ದವು. ದೊಡ್ಡ ಕಲ್ಲಿನ ಮಧ್ಯೆ ಕುಳಿ ಮಾಡಿ ಅದಕ್ಕೆ ಎಣ್ಣೆಕಾಳು ಹಾಕಿ ಒಂಟಿ ಎತ್ತು ಕಟ್ಟಿ ಸುತ್ತಲೂ ತಿರುಗಿಸುತ್ತಾ ಕಾಳಿನಲ್ಲಿ ಎಣ್ಣೆ ತೆಗೆಯಲಾಗುತ್ತಿತ್ತು. ಗಾಣಿಗ ಸಮುದಾಯದವರು ಮಾತ್ರ ಗಾಣದಲ್ಲಿ ಎಣ್ಣೆ ತೆಗೆಯುವ ಕಾಯಕದಲ್ಲಿ ತೊಡಗಿದ್ದರು.

ಸುಗ್ಗನಹಳ್ಳಿಯಲ್ಲೂ ಬಹಳ ಕಾಲದಿಂದ ಗಾಣಿಗರ ಕುಟುಂಬಗಳಿದ್ದು, ಐದಾರು ಕುಟುಂಬಗಳು ತಲೆ ತಲಾಂತರದಿಂದಲೂ ಕಲ್ಲಿನ ಒಂಟಿ ಎತ್ತಿನ ಗಾಣದಲ್ಲಿ ಎಣ್ಣೆ ತೆಗೆಯುವ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಆಧನಿಕತೆಯ ಪ್ರಭಾವದಿಂದಾಗಿ ಇಂದು ಗಾಣಗಳು ತೆರೆಮೆರೆಗೆ ಸರಿದ ಪರಿಣಾಮ ಇದನ್ನು ನಂಬಿದ್ದ ಕುಟುಂಬಗಳು 50 ವರ್ಷಗಳ ಹಿಂದೆಯೇ ಸುಗ್ಗನಹಳ್ಳಿಯಿಂದ ಕೋಲಾರದ ಕಡೆ ವಲಸೆ ಹೋದವು. ಆದರೆ, ಅವರ ಬಳಸುತ್ತಿದ್ದ ಗಾಣದ ಕಲ್ಲು ಮಣ್ಣಿನಡಿ ಮರೆಯಾಗಿತ್ತು.

ಗಾಣಗರ ಹಳ್ಳ

ಈಗ ಗ್ರಾಮ ಪಂಚಾಯಿತಿ ಕೇಂದ್ರ ಇರುವ ಸ್ಥಳದಲ್ಲಿ ಗ್ರಾಪಂ ಸಿಬ್ಬಂದಿ ಶ್ರಮದಾನ ಕೈಗೊಂಡಿದ್ದ ಸಂದ‘ರ್ದಲ್ಲಿ ಮಣ್ಣು ಅಗೆಯುವಾಗ ಮಣ್ಣಿನಡಿಯಲ್ಲಿ ಮರೆಯಾಗಿದ್ದ ಗಾಣದ ಕಲ್ಲು ಪತ್ತೆಯಾಗಿದೆ. ಇದನ್ನು ಹೊರತೆಗೆದು ಸಂರಕ್ಷಿಸಲಾಗಿದೆ. ಗಾಣದಕಲ್ಲು ಸುಮಾರು 8 ಅಡಿ ಉದ್ದವಿದ್ದು, ಬಹು ದೊಡ್ಡದಾಗಿದೆ. ಗ್ರಾಪಂ ಸಿಬ್ಬಂದಿ ಗಂಗಾ‘ರ್, ರಾಮಚಂದ್ರು, ಪಾಪಣ್ಣ, ಪ್ರಕಾಶ್, ಕೃಷ್ಣಪ್ಪ, ಅಭಿಷೇಕ್, ಕೃಷ್ಣಪ್ಪ, ಉಮೇಶ್, ನವೀನ್ ಮುಂತಾದವರು ಸಂಕ್ಷಣೆ ಕಾರ್ಯದಲ್ಲಿ ತೊಡಗಿದ್ದರು. ಕಳೆದ 50 ವರ್ಷಗಳವರೆಗೂ ಸುಗ್ಗನಹಳ್ಳಿಯಲ್ಲಿ ಗಾಣ ನಡೆಯುತ್ತಿತ್ತು ಎಂದು ಗ್ರಾಮದ ಹಿರಿಯರು ಹೇಳುತ್ತಾರೆ. ಈಗಲೂ ಗಾಣಿಗರು ಎಣ್ಣೆ ತೆಗೆಯುತ್ತಿದ್ದ ಜಾಗ ಮತ್ತು ವಾಸ ಮಾಡುತ್ತಿದ್ದ ಜಾಗಕ್ಕೆ ಗಾಣಗರ ಹಳ್ಳ ಎಂದೇ ಕರೆಯುತ್ತಾರೆ.

ಸುಗ್ಗನಹಳ್ಳಿ ಗಾಣದ ಎಣ್ಣೆಗೆ ಬೇಡಿಕೆ

ಹಿಂದೆ ಒಂಟೆತ್ತಿನ ಗಾಣಗಳು ವಿರಳವಾಗಿದ್ದವು. ಅದರಲ್ಲಿ ಸುಗ್ಗನಹಳ್ಳಿಯಲ್ಲಿದ್ದ ಗಾಣದ ಎಣ್ಣೆಗೆ ಬಹು ಬೇಡಿಕೆ ಇತ್ತು. ಇಲ್ಲಿ ತಯಾರಾಗುತ್ತಿದ್ದ ಗಾಣದ ಎಣ್ಣೆ ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ, ಬೆಂಗಳೂರು ನಗರ, ಮಂಡ್ಯದವರೆಗೂ ಮಾರಾಟ ಮಾಡಲಾಗುತ್ತಿತ್ತು ಎನ್ನುತ್ತಾರೆ ಗ್ರಾಮಸ್ಥರು.

ಹಲವು ವಿಧದ ಎಣ್ಣೆ

ಪ್ರಮುಖವಾಗಿ ಹುಚ್ಚೆಳ್ಳು, ಹರಳೆಣ್ಣೆ, ಕಡಲೆಕಾಯಿ ಎಣ್ಣೆಯನ್ನು ತಯಾರು ಮಾಡಲಾಗುತ್ತಿತ್ತು. ಎಣ್ಣೆಯನ್ನು ಎತ್ತಿನ ಬಂಡಿಯಲ್ಲಿ ಮಹಿಳೆಯರು ಸೇರಿ ಮನೆಯ ಇತರರು ಒಂದು ನಿರ್ದಿಷ್ಟ ಸ್ಥಳಕ್ಕೆ ಹೋಗಿ ಮಾರಾಟ ಮಾಡುತ್ತಿದ್ದರಂತೆ. ಸುತ್ತಮುತ್ತಲ ಪ್ರದೇಶಕ್ಕೆ ಕಾಲ್ನಡಿಗೆಯಲ್ಲಿಯೇ ಎಣ್ಣೆಯನ್ನು ಹೊತ್ತು ಮಾರಾಟ ಮಾಡುತ್ತಿದ್ದದೂ ಉಂಟು.

ವೀರಗಲ್ಲು ಸಂರಕ್ಷಣೆ

ಗಾಣದ ಕಲ್ಲಿನ ಜತೆಗೆ ಮಣ್ಣಿನಡಿ ಸಿಲುಕಿದ್ದ ಚಿತ್ರವಿರುವ ಶಾಸನ ರೂಪದ ಮತ್ತೊಂದು ಕಲ್ಲುಕೂಡ ಸಿಕ್ಕಿದೆ ಆದರೆ, ಇದು, ಶಿಲಾಶಾಸನವೋ, ವೀರಗಲ್ಲೋ ಎಂಬುದು ತಿಳಿದು ಬಂದಿಲ್ಲ.

ಅರ್ಪಿತಾ ಹರೀಶ್‌ಕುಮಾರ್, ಗ್ರಾಪಂ ಅಧ್ಯಕ್ಷೆ ಸುಗ್ಗನಹಳ್ಳಿ

ಪುರಾತನ ವಸ್ತುಗಳ ಸಂರಕ್ಷಣೆ ಗ್ರಾಪಂನ ಆದ್ಯ ಕರ್ತವ್ಯಗಳಲ್ಲಿ ಒಂದು. ಹಿಂದಿನ ಕಾಲದ ವಸ್ತುಗಳು ಅಮೂಲ್ಯ. ಅಂತಹ ವಸ್ತುಗಳು ಮುಂದಿನ ಪೀಳಿಗೆ ಬರೀ ಚಿತ್ರದಲ್ಲಿ ನೋಡಬಹುದಷ್ಟೆ. ಗ್ರಾಪಂ ಸಿಬ್ಬಂದಿ ಅಮೂಲ್ಯ ವಸ್ತುವನ್ನು ಸಂರಕ್ಷಿಸಿರುವುದು ಮುಂದಿನ ತಲೆಮಾರಿಗೆ ಇತಿಹಾಸದ ಬಳುವಳಿ ನೀಡಿದಂತಾಗಿದೆ. ಅದರ ಕ್ರೆಡಿಟ್ ಅವರಿಗೇ ಸಲ್ಲುತ್ತದೆ.

ಚಿಕ್ಕಸ್ವಾಮಿ, ಗ್ರಾಪಂ ಉಪಾಧ್ಯಕ್ಷ ಸುಗ್ಗನಹಳ್ಳಿ ಗ್ರಾಪಂ.

ಕಬ್ಬಿನ ಗಾಣಕ್ಕೂ ಸುಗ್ಗನಹಳ್ಳಿ ಹಿಂದೆ ಪ್ರಸಿದ್ಧಿಯಾಗಿತ್ತು. ಹತ್ತಾರು ಆಲೆಮನೆಗಳು ಗ್ರಾಮದಲ್ಲಿದ್ದವು. ಗಾಣದ ಎಣ್ಣೆ ತೆಗೆಯುವ ಕುಟುಂಬಗಳು ಗ್ರಾಮದಲ್ಲಿದ್ದವು. ಕ್ರಮೇಣ ಆ ಕುಟುಂಬಗಳು ವಲಸೆ ಹೋಗಿದ್ದರಿಂದ ಗಾಣದಕಲ್ಲು ಮರೆಯಾಗಿತ್ತು. ಇಂತಹ ಗಾಣದ ಕಲ್ಲು ನೋಡಲು ಸಿಗುವುದು ಅಪರೂಪ. ಸಿಕ್ಕಿರುವ ಗಾಣದಕಲ್ಲನ್ನು ರಕ್ಷಿಸಲು ಗ್ರಾಪಂ ನಿಗಾ ವಹಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net