

ಬಂಕಾಪುರ: ಪಟ್ಟಣದ ಪುರಸಭೆ ವ್ಯಾಪ್ತಿಯ ಬಹುತೇಕ ಬೀದಿಗಳಲ್ಲಿ ಅಳವಡಿಸಿರುವ ದೀಪಗಳು ಬೆಳಗುತ್ತಿಲ್ಲ. ಇದರಿಂದ ರಾತ್ರಿ ಸಮಯದಲ್ಲಿ ಪಾದಚಾರಿಗಳು, ವಾಹನ ಸವಾರರಿಗೆ ತೊಂದರೆಯುಂಟಾಗುತ್ತಿದೆ.
ಪಟ್ಟಣದ ಮುಂಡಗೋಡ ಕ್ರಾಸ್ನಿಂದ ನೀಲಕಂಠೇಶ್ವರ ದೇವಸ್ಥಾನದವರೆಗೆ ದ್ವಿಪಥ ರಸ್ತೆಯ ಮಧ್ಯಭಾಗದಲ್ಲಿ ಅಳವಡಿಸಿರುವ ವಿದ್ಯುತ್ ದೀಪಗಳು, ರೇಣುಕಾ ಚಿತ್ರಮಂದಿರದ ಕ್ರಾಸ್ನಿಂದ ಹಾವೇರಿ ಮುಖ್ಯರಸ್ತೆ, ಬಸ್ ನಿಲ್ದಾಣದಿಂದ ಪುರಸಭೆ, ಆಸಾರ್ ಸರ್ಕಲ್ನಿಂದ ಕೊಟ್ಟಿಗೇರಿ, ಅಂಕದಖಣ, ರಜಪೂತ್ ಗಲ್ಲಿ, ಬ್ರಾಹ್ಮಣ ಗಲ್ಲಿ, ಸುಂಕದಕೇರಿ, ಮಂಡಲ್ ಮೊಹಲ್ಲಾಗಳಲ್ಲಿ ಅಳವಡಿಸಿರುವ ವಿದ್ಯುತ್ ದೀಪಗಳು ಕೆಟ್ಟು ಹೋಗಿ ನಾಲ್ಕೈದು ತಿಂಗಳು ಕಳೆದಿವೆ. ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯಂದ ಜನರು ಕತ್ತಲಲ್ಲಿ ಓಡಾಡುವ ಪರಿಸ್ಥಿತಿ ನಿರ್ವಣವಾಗಿದೆ.
ಕೆಲ ರಸ್ತೆ ಮಾರ್ಗಗಳು ಕಿರಿದಾಗಿದ್ದರಿಂದ ರಾತ್ರಿ ವೇಳೆ ಹಾಗೂ ಬೆಳಗ್ಗೆ ವಾಯುವಿಹಾರ ಮಾಡುವವರು ಹೆದರುತ್ತಲೇ ಸಂಚರಿಸುವಂತಾಗಿದೆ. ಬೀದಿ ನಾಯಿಗಳ ಹಾವಳಿಯಿಂದಾಗಿ ರಾತ್ರಿ ಹೊತ್ತು ಸಂಚರಿಸಲು ಭಯವಾಗುತ್ತಿದೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.
ಸಂಜೆ ಟ್ಯೂಷನ್ಗೆ ಹೋಗುವ ವಿದ್ಯಾರ್ಥಿನಿಗಳು ಭಯದಲ್ಲಿಯೇ ಸಂಚರಿಸುವಂತಾಗಿದೆ. ಪರ ಊರಿನಿಂದ ಪಟ್ಟಣಕ್ಕೆ ಬಂದವರು ಬೀದಿ ನಾಯಿಗಳ ಹಾವಳಿಗೆ ರಾತ್ರಿ ಹೊತ್ತು ಮುಂದಕ್ಕೆ ಹೋಗಲಾರದೇ ಪರದಾಡುವಂತಾಗಿದೆ. ಹಲವರು ನಾಯಿ ದಾಳಿಯಿಂದ ಗಾಯಗೊಂಡು ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದುಕೊಂಡ ಘಟನೆಗಳೂ ನಡೆದಿವೆ. ಆದ್ದರಿಂದ ಪುರಸಭೆ ಅಧಿಕಾರಿಗಳು ಕೂಡಲೇ ವಿದ್ಯುತ್ ದೀಪ ಸರಿಪಡಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪುರಸಭೆ ವ್ಯಾಪ್ತಿಯಲ್ಲಿ ಕಳೆದ ನಾಲ್ಕೈದು ತಿಂಗಳಿಂದ ಕೆಟ್ಟು ಹೋಗಿರುವ ಬೀದಿ ದೀಪಗಳನ್ನು ಸರಿಪಡಿಸಲು ಅನುದಾನ ಇದ್ದರೂ ಕ್ರಿಯಾಯೋಜನೆ ಮಾಡಲು ಆಗಿರಲಿಲ್ಲ. ನಮಗೆ ಕಾಯಂ ಇಂಜಿನಿಯರ್ ಇಲ್ಲದ್ದರಿಂದ ಸಮಸ್ಯೆಯಾಗಿದೆ. ಈಗ ನಮ್ಮ ಪುರಸಭೆಗೆ ಪ್ರಭಾರಿ ಇಂಜಿನಿಯರ್ರನ್ನು ವಾರಕ್ಕೆ ಮೂರು ದಿನಗಳ ಮಟ್ಟಿಗೆ ನೇಮಕ ಮಾಡಿದ್ದಾರೆ. ಬೀದಿ ದೀಪಗಳಿಗಾಗಿಯೇ ಸುಮಾರು ಒಂದು ಕೋಟಿ ರೂ. ವೆಚ್ಚದ ಕ್ರಿಯಾಯೋಜನೆ ಅನುಮೋದನೆಯಾಗಬೇಕಿತ್ತು. ಅದು ಈಗ ತಾಂತ್ರಿಕ ಅನುಮೋದನೆಯಾಗಿದೆ. ಸೋಮವಾರದಿಂದ ಬೀದಿ ದೀಪಗಳ ಪರಿಶೀಲನೆ ಮಾಡಿ ಒಂದು ವಾರದೊಳಗೆ ಪಟ್ಟಣದ ಪ್ರತಿ ಬೀದಿಗಳಲ್ಲಿ ದೀಪಗಳನ್ನು ಅಳವಡಿಸಲಾಗುವುದು. | ಎ. ಶಿವಪ್ಪ, ಪುರಸಭೆ ಮುಖ್ಯಾಧಿಕಾರಿ ಬಂಕಾಪುರ ಆಡಳಿತ ಮಂಡಳಿ ಇಲ್ಲದ ಪುರಸಭೆಗೆ ಹೇಳುವವರು, ಕೇಳುವವರು ಇಲ್ಲದಂತಾಗಿದೆ. ಪಟ್ಟಣದಲ್ಲಿ ವಿದ್ಯುತ್ ದೀಪಗಳು ಬೆಳಗದೇ ತಿಂಗಳುಗಳೇ ಗತಿಸಿವೆ. ವಾರ್ಡ್ಗಳಿಂದ ಆಯ್ಕೆಯಾಗಿ ಅಧಿಕಾರ ವಂಚಿತರಾಗಿರುವ ಪುರಸಭೆ ಸದಸ್ಯರ ಮಾತಿಗೆ ಅಧಿಕಾರಿಗಳು ಕಿಂಚತ್ತೂ ಬೆಲೆ ಕೊಡುತ್ತಿಲ್ಲ. ಈ ವಿಷಯವಾಗಿ ಪದೇಪದೆ ಮುಖ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರೂ ಬೀದಿ ದೀಪಗಳನ್ನು ಅಳವಡಿಸುವತ್ತ ಗಮನ ಹರಿಸುತ್ತಿಲ್ಲ. ಸಾಲುಸಾಲು ಹಬ್ಬಗಳ ಮಧ್ಯೆ ರಾತ್ರಿ ದೇವಸ್ಥಾನಗಳಿಗೆ ಭಯದಲ್ಲಿ ಸಂಚರಿಸುವಂತಾಗಿದೆ. ಕೂಡಲೇ ಪುರಸಭೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ದೀಪಗಳನ್ನು ಸರಿಪಡಿಸಬೇಕು. | ಹೊನ್ನಪ್ಪ ಹೂಗಾರ, ಪುರಸಭೆ ಮಾಜಿ ಸದಸ್ಯ ಬಂಕಾಪುರ