

ಯಳಂದೂರು: ತಾಲೂಕಿನ ಧಾರ್ಮಿಕ ಕ್ಷೇತ್ರವಾಗಿರುವ ಗಣಿಗನೂರು ನೀಲಕಂಠೇಶ್ವರ ಬೂದಿತಿಟ್ಟು ಮಹದೇಶ್ವರ, ಕಂದಹಳ್ಳಿ ಗ್ರಾಮದ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನವೂ ಸೇರಿದಂತೆ ವಿವಿಧೆಡೆ ಗುರುವಾರ ಭೀಮನ ಅಮಾವಾಸ್ಯೆ ನಿಮಿತ್ತ ವಿಶೇಷ ಪೂಜೆ, ರಥೋತ್ಸವ, ಅನ್ನಸಂತರ್ಪಣೆ ಕಾರ್ಯ ಜರುಗಿತು.
ಗಣಿಗನೂರು ಗ್ರಾಮದ ನೀಲಕಂಠೇಶ್ವರ ದೇಗುಲದಲ್ಲಿ 16ನೇ ವರ್ಷದ ಅನ್ನಸಂತರ್ಪಣೆ ನಡೆಯಿತು. ಕಂದಹಳ್ಳಿ ಗ್ರಾಮದ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ 26ನೇ ವರ್ಷದ ಪೂಜಾ ಕಾರ್ಯಗಳು ವಿಜೃಂಭಣೆಯಿಂದ ಜರುಗಿದವು.
ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ನಡೆಯಿತು. ಬೆಳಗ್ಗೆಯಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಹೊರ ರಾಜ್ಯ, ಜಿಲ್ಲೆಗಳಿಂದ ಬಂದಿದ್ದ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಹರಕೆ ಹೊತ್ತ ಭಕ್ತರು ಹುಲಿವಾಹನ ಸೇವೆ ಮಾಡಿದರು. ನಂತರ ದೇವರ ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸಿ ದೇವಸ್ಥಾನದ ಸುತ್ತ ಮೆರವಣಿಗೆ ಮಾಡಲಾಯಿತು. ದಂಡುಗೋಲು ಸೇವೆ ಸೇರಿದಂತೆ ಇತರ ಸೇವೆಗಳು ಸಾಂಗವಾಗಿ ನೆರವೇರಿದವು.
ಭಕ್ತರಿಗೆ ಅನ್ನಸಂತರ್ಪಣೆ:
ದೇವಸ್ಥಾನದ ಆವರಣದಲ್ಲಿ ಅನ್ನಸಂತರ್ಪಣೆ ನಡೆಯಿತು. ಬೆಳಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಜನರು ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆದರಲ್ಲದೆ, ನಂತರ ಆಯೋಜಿಸಿದ್ದ ಅನ್ನಸಂತರ್ಪಣೆಗೆ ಸರತಿ ಸಾಲಿನಲ್ಲಿ ನಿಂತು ಪ್ರಸಾದ ಸ್ವೀಕರಿಸಿದರು. ಬೆಳಗ್ಗೆ ಆರಂಭಗೊಂಡ ಅನ್ನಸಂತರ್ಪಣೆ ಸಂಜೆ ತನಕವೂ ನಿರಾತಂಕವಾಗಿ ಸಾಗಿತು. ಅನ್ನಸಂತರ್ಪಣೆ ಹಿನ್ನೆಲೆಯಲ್ಲಿ ಬುಧವಾರ ರಾತ್ರಿಯಿಂದಲೇ ಅಡುಗೆ ತಯಾರಿ ಕಾರ್ಯಗಳು ದೇವಸ್ಥಾನದ ಆವರಣದಲ್ಲಿ ನಡೆದಿತ್ತು.
ಬೆಳಗ್ಗೆಯಿಂದಲೇ ಯಳಂದೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ವಿವಿಧ ಜಿಲ್ಲೆಯ ಗ್ರಾಮಗಳಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ದ್ವಿಚಕ್ರವಾಹನಗಳು, ಆಟೋಗಳ ಮೂಲಕ ಬರಲಾರಂಭಿಸಿದರು. ಪಟ್ಟಣದಿಂದ ಕಾಲ್ನಡಿಗೆಯಲ್ಲೂ ಬರುತ್ತಿದ್ದರು. ಇದರಿಂದ ಪಟ್ಟಣದಿಂದ ಕಂದಹಳ್ಳಿ ಗ್ರಾಮದ ತನಕ ರಾಷ್ಟ್ರೀಯ ಹೆದ್ದಾರಿ 948 ರಸ್ತೆ ಜನರಿಂದ ತುಂಬಿ ತುಳುಕುತ್ತಿದ್ದ ದೃಶ್ಯ ಕಂಡುಬಂತು. ಮಕ್ಕಳ ಆಟಿಕೆ ಸಾಮಾನುಗಳು, ಸಿಹಿ ತಿನಿಸುಗಳು ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರವಾಯಿತು.
ವಿವಿಧೆಡೆ ಆಚರಣೆ:
ಭೀಮನ ಅಮಾವಾಸ್ಯೆ ಪ್ರಯುಕ್ತ ತಾಲೂಕಿನ ಅಗರ, ಮಾಂಬಳ್ಳಿ, ಕೆಸ್ತೂರು, ಗುಂಬಳ್ಳಿ, ಬೂದಿತಿಟ್ಟು, ಆಮೆಕೆರೆ ರಸ್ತೆ ಬಳಿಯ ಮಹದೇಶ್ವರ, ಶಿವ ದೇಗುಲಗಳಲ್ಲಿ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಇದಕ್ಕಾಗಿಯೇ ವಿಶೇಷ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.