

ರಾಣೆಬೆನ್ನೂರ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಗೆ ಅಳವಡಿಸಿದ್ದ ತಂತಿ ಬೇಲಿಯ ಕಬ್ಬಿಣದ ಪೈಪ್ ಲಾರಿ ಚಾಲಕನ ಎದೆಗೆ ಚುಚ್ಚಿ ಚಾಲಕ ಪರದಾಡಿದ ಘಟನೆ ತಾಲೂಕಿನ ಹುಲಿಹಳ್ಳಿ ಬಳಿ ಬುಧವಾರ ನಡೆದಿದೆ.
ಶಿರಸಿ ತಾಲೂಕಿನ ಗಡಿಹಳ್ಳಿ ನಿವಾಸಿ ದಯಾನಂದ ಶಂಕರ ಬಡಗಿ (24) ಕಬ್ಬಿಣದ ಪೈಪ ಎದೆಗೆ ಸಿಲುಕಿ ಪರದಾಡಿದವನು.
ಈತ ಹುಬ್ಬಳ್ಳಿಯಿಂದ ದಾವಣಗೆರೆ ಕಡೆಗೆ ಹೊರಟಿದ್ದ ಸಮಯದಲ್ಲಿ ಹೂಲಿಹಳ್ಳಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ ಹೊಡೆದಿದೆ. ಇದರಿಂದ ಆತ ಲಾರಿ ಸಮೇತ ಬಿದ್ದಾಗ ಸರ್ವೀಸ್ ರಸ್ತೆಯ ತಂತಿ ಬೇಲಿಗೆ ಹಾಕಿದ್ದ ಕಬ್ಬಿಣದ ಪೈಪ್ ಚಾಲಕನ ಎದೆಗೆ ಹೊಕ್ಕಿದೆ.
ವಿಷಯ ತಿಳಿದ ಹೈವೇ ಆಂಬುಲೆನ್ಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಪೈಪ್ ಹೊರತೆಗೆಯುವ ಕಾರ್ಯಾಚರಣೆ ನಡೆಸಿದ್ದಾರೆ. ಚಾಲಕ ಎದೆಗೆ ಹೊಕ್ಕ ಕಬ್ಬಿಣದ ಪೈಪ್ನಿಂದ ರಕ್ತ ಸುರಿಯುತ್ತಿದ್ದರೂ ದಿಕ್ಕು ತೋಚದಂತೆ ಕುಳಿತಿದ್ದಾನೆ.
ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಚಾಲಕನ ಎದೆಗೆ ಹೊಕ್ಕಿದ್ದ ಕಬ್ಬಿಣದ ಪೈಪನ್ನು ಸ್ವಲ್ಪ ಪ್ರಮಾಣದಲ್ಲಿ ಕತ್ತರಿಸಿ, ಎದೆಯಲ್ಲಿ ಸಿಕ್ಕಿಕೊಂಡ ಪೈಪ್ನೊಂದಿಗೆ ಚಿಕಿತ್ಸೆಗೆ ರವಾನಿಸಿದ್ದಾರೆ. ಸದ್ಯ ಆತನನ್ನು ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.