

ರೈಲ್ವೆ ಕಂಬಿ, ಟಿಸಿಗಳಲ್ಲಿನ ಅಲ್ಯೂಮಿನಿಯಂ ರಾತ್ರೋರಾತ್ರಿ ಮಾಯ
ರಾಮನಗರ ಆನೆ ಹಾವಳಿ ತಡೆಗೆ ಅಳವಡಿಸಲು ತಂದಿದ್ದ ರೈಲ್ವೆ ಕಂಬಿಗಳೇ ಮಾಯ, ಮತ್ತೊಂದೆಡೆ ಜಮೀನಿನಲ್ಲಿ ಇದ್ದ ಟಿಸಿಗಳಲ್ಲಿನ ಅಲ್ಯೂಮಿನಿಯಂ ರಾತ್ರೋರಾತ್ರಿ ಕಳವು. ಎಟಿಎಂನಲ್ಲಿ ಹಣ ಕದಿಯಲು ಯಂತ್ರವನ್ನೇ ಹಾಳು ಮಾಡಿದ ಕಳ್ಳರು! ಇಂತಹ ಹಲವು ವಿಚಿತ್ರ ಕಳವು ಪ್ರಕರಣಗಳು ರಾಮನಗರ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾಗುತ್ತಿವೆ.
ಜಿಲ್ಲೆಯಲ್ಲಿ ಆನೆ ಹಾವಳಿ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಬನ್ನೇರುಟ್ಟ ಮತ್ತು ಕಾವೇರಿ ವನ್ಯ ಜೀವಿಧಾಮದ ಅರಣ್ಯ ಪ್ರದೇಶದಿಂದ ಆನೆ ಜನ ವಸತಿ ಪ್ರದೇಶಕ್ಕೆ ನುಗ್ಗದಂತೆ ತಡೆಯುವ ನಿಟ್ಟಿನಲ್ಲಿ ರೈಲ್ವೆ ಬ್ಯಾರಿಕೇಡ್ಗಳನ್ನು ಅಳವಡಿಸಲಾಗುತ್ತಿದೆ. ಇದರ ಭಾಗವಾಗಿ ಹಾರೋಹಳ್ಳಿ ತಾಲೂಕು ಕೋಣಾಳುದೊಡ್ಡಿ ಸಮೀಪ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲು ಬಂದ ಕಾರ್ಮಿಕರೇ ಸುಮಾರು 20 ಟನ್ ತೂಕದ ರೈಲ್ವೆ ಕಂಬಿಗಳನ್ನು ಕಳವು ಮಾಡಿದ್ದಾರೆ ಎಂದು ಗುತ್ತಿಗೆದಾರ ಶಿವರಾಜು ಎನ್ನುವರು ದೂರು ನೀಡಿದ್ದಾರೆ.
ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡುವ ಸಂಬಂಧ ಅರಣ್ಯ ಇಲಾಖೆಯಿಂದ ಗುತ್ತಿಗೆ ಪಡೆದುಕೊಂಡಿರುವ ಶಿವರಾಜು ಎನ್ನುವವರು, ಹುಬ್ಬಳ್ಳಿಯ ಮೂಲದ ಸ್ಟೀಲ್ ಕಂಪನಿಯಿಂದ ಸುಮಾರು 106 ಟನ್ ರೈಲ್ವೆ ಕಂಬಿಯನ್ನು ಆ.5ರಿಂದ 14ರವರೆಗೆ ಹಂತ ಹಂತವಾಗಿ ಸರಬರಾಜು ಮಾಡಿಸಿಕೊಂಡಿದ್ದಾರೆ.
ಈ ಕಾಮಗಾರಿಯ ಜವಾಬ್ದಾರಿಯನ್ನು ಮುದಸೀರ್ ಎನ್ನುವರಿಗೆ ನೀಡಿದ್ದರು. ಆದರೆ ಸಾಮಗ್ರಿಗಳು ಕಳ್ಳತನವಾಗಿವೆ ಎಂದು ರಫೀಕ್ ಎನ್ನುವರಿಗೆ ಒಪ್ಪಿಸಿದ್ದಾರೆ. ನಂತರ ಗೌರಿ ಗಣೇಶ ಹಬ್ಬ ಇದ್ದ ಕಾರಣ, ನೌಕರರು ಸಿಗುತ್ತಿಲ್ಲ ನೀವು ಕಾಮಗಾರಿ ನಡೆಯುವ ಸ್ಥಳಕ್ಕೆ ಬರುವುದು ಬೇಡ ಎಂದು ರಫೀಕ್ ತಿಳಿಸಿದ್ದ. ನಂತರ ಪರಿಶೀಲನೆಗಾಗಿ ಸ್ಥಳಕ್ಕೆ ತೆರಳಿದಾಗ 10 ಲಕ್ಷ ರೂ. ಮೌಲ್ಯದ 20 ಟನ್ ಕಂಬಿಗಳು ಕಳವಾಗಿರುವುದು ಬೆಳಕಿದೆ. ಈ ಕೃತ್ಯದಲ್ಲಿ ರಫೀಕ್ ಹಾಗೂ ಆತನ ಸಹಚರರಾದ ಆಮನ್, ಅಕ್ಬರ್ ಇತರರು ಸೇರಿದ್ದಾರೆ ಎಂದು ಶಿವರಾಜು ಹಾರೋಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.
ಚನ್ನಪಟ್ಟಣದ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆ ವ್ಯಾಪ್ತಿಯ ಜಮೀನಿನಲ್ಲಿದ್ದ ಟಿಸಿಗಳಲ್ಲಿನ ಅಲ್ಯೂಮಿನಿಯಂ ಅನ್ನೇ ರಾತ್ರೋರಾತ್ರಿ ಕಳವು ಮಾಡಲಾಗಿದೆ. ಠಾಣಾ ವ್ಯಾಪ್ತಿಯ ಕನ್ನಮಂಗಲ ಗ್ರಾಮದ ಚಲುವೇಗೌಡ, ಮರಿಸ್ವಾಮಿ, ಜಯಮ್ಮ ಮತ್ತು ಚಂದ್ರೇಗೌಡ ಎನ್ನುವರ ಜಮೀನಿನಲ್ಲಿದ್ದ ಒಟ್ಟು 4 ವಿದ್ಯುತ್ ಪರಿವರ್ತಕಗಳನ್ನು ಒಡೆದು ಅದರಲ್ಲಿನ ಅಲ್ಯೂಮಿನಿಯಂ ಕೋರ್ ಮತ್ತು ಆಯಿಲ್ ಕಳವು ಮಾಡಲಾಗಿದೆ. ಈ ಸಂಬಂಧ ರೈತರು ನೀಡಿದ ಮಾಹಿತಿ ಮೇಲೆ ಸ್ಥಳಕ್ಕೆ ತೆರಳಿದ ಬೆಸ್ಕಾಂನ ದಶವಾರ ಶಾಖೆಯ ಕಿರಿಯ ಇಂಜಿನಿಯರ್ ಟಿ.ಎನ್.ಸಿದ್ದರಾಜು, ನಂತರ ಎಂ.ಕೆ.ದೊಡ್ಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಕೆಂಗೇರಿ ಹೋಬಳಿಯ ಕೆ.ಕೃಷ್ಣ ಸಾಗರ ಗ್ರಾಮದಲ್ಲಿ ಇಂಡಿಯಾ&1 ಎಟಿಎಂಅನ್ನು ಕಳ್ಳರು ಧ್ವಂಸಗೊಳಿಸಿದ್ದಾರೆ. ಸೆ.23ರ ರಾತ್ರಿ ಗ್ರಾಮದಲ್ಲಿರುವ ಎಟಿಎಂಗೆ ನುಗ್ಗಿರುವ ದುಷ್ಕರ್ಮಿಗಳು ಎಟಿಎಂನಲ್ಲಿರುವ ಹಣ ಕದಿಯಲು ಯತ್ನಿಸಿದ್ದಾರೆ. ಆದರೆ, ಈ ಕೆಲಸ ಅಷ್ಟು ಸುಲಭವಾಗದ ಕಾರಣ ಎಟಿಎಂ ಯಂತ್ರವನ್ನೇ ಧ್ವಂಸ ಮಾಡಿದ್ದಾರೆ. ಆದರೆ ಇವರಿಗೆ ಹಣ ಮಾತ್ರ ಸಿಗಲಿಲ್ಲ. ನಂತರ ಸ್ಥಳಕ್ಕೆ ಎಟಿಎಂ ನಿರ್ವಹಣೆ ಉಸ್ತುವಾರಿ ಅಧಿಕಾರಿ ಕೋದಂಡಪಾಣಿ ಭೇಟಿ ನೀಡಿ, ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಮಾಡಿ, ಕುಂಬಳಗೂಡು ಪೊಲೀಸರಿಗೆ ದೂರು ನೀಡಿದ್ದಾರೆ.
ಹುಲ್ಲು ತರುವ ಸಲುವಾಗಿ ರೈತ ಮಹಿಳೆಯೊಬ್ಬರು ಜಮೀನಿಗೆ ತೆಗೆದುಕೊಂಡು ಹೋಗಿದ್ದ ಸ್ಕೂಟರನ್ನೇ ಕಳ್ಳರು ಹಾರೋಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕೋನಸಂದ್ರ ಗ್ರಾಮದ ಬಳಿ ಕದ್ದಿದ್ದಾರೆ. ಚಿಕ್ಕನದೊಡ್ಡಿ ಗ್ರಾಮದ ಪವಿತ್ರಾ ಸ್ಕೂಟರ್ ಕಳೆದುಕೊಂಡವರು. ಜಮೀನಿನಲ್ಲಿ ಹುಲ್ಲು ತರುವ ಸಲುವಾಗಿ ಸ್ಕೂಟರ್ ತೆಗೆದುಕೊಂಡು ಹೋಗಿದ್ದು, ಹುಲ್ಲು ತರುವಷ್ಟರಲ್ಲಿ ಸ್ಕೂಟರ್ ಕಳವು ಮಾಡಲಾಗಿದೆ. ನಂತರ ಎಲ್ಲೆಡೆ ಹುಡುಕಾಡಿದರೂ ಸ್ಕೂಟರ್ ಪತ್ತೆಯಾಗದ ಕಾರಣ ದೂರು ನೀಡಿದ್ದಾರೆ.