

ಕಾರವಾರ: ಕಾಲ್ನಡಿಗೆಯಲ್ಲೇ ದೇಶ ಸುತ್ತುತ್ತಿರುವ ಉತ್ತರ ಪ್ರದೇಶದ ಇಂಜಿನಿಯರ್ ಸೋಮವಾರ ಕಾರವಾರ ತಲುಪಿದರು.
ಪ್ರತಿ ಊರಿನ ಆಚಾರ, ವಿಚಾರ, ಭಾಷೆ, ಸಂಸ್ಕೃತಿ, ಅಲ್ಲಿನ ಕೃಷಿ ಪದ್ಧತಿಯನ್ನು ಅರಿತು ಪುಸ್ತಕ ಬರೆಯುವ ಉದ್ದೇಶದಿಂದ ಅವರು 2022 ರ ಅಕ್ಟೋಬರ್ 21 ರಂದು ಉತ್ತರ ಪ್ರದೇಶದಿಂದ ಸಂಚಾರ ಆರಂಭಿಸಿದ್ದರು.
ಉತ್ತರ ಪ್ರದೇಶದ ಗೋರಖ್‌ಪುರದ ಕುಶಿನಗರ ಧರ್ಮಪುರ ಮೂಲದ ರಾಬಿನ್ ಸನೋಜ ನಡೆದುಕೊಂಡು ಸಂಚಾರ ಮಾಡುತ್ತಿದ್ದು, 360 ದಿನಗಳಲ್ಲಿ ಸುಮಾರು 6 ಸಾವಿರ ಕಿಮೀ ನಡೆದಿದ್ದಾರೆ.
ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಅಸ್ಸಾಂ, ಪಶ್ಚಿಮ ಬಂಗಾಳ, ಒಡಿಶಾ, ಛತ್ತೀಗಢ, ತೆಲಂಗಾಣ, ಆಂಧ್ರ ಪ್ರದೇಶ, ಕೇರಳ, ಮುಗಿಸಿ ಕರ್ನಾಟಕಕ್ಕೆ ಅವರು ಬಂದಿದ್ದಾರೆ.
ಮಂಗಳೂರು ಉಡುಪಿ ಜಿಲ್ಲೆಯಿಂದ ನಡೆದು ಸೋಮವಾರ ಕಾರವಾರದಲ್ಲಿ ವಾಸ್ತವ್ಯ ಹೂಡಿದರು. ಮಂಗಳವಾರ ಗೋವಾದತ್ತ ಪ್ರಯಾಣ ಬೆಳೆಸಿದರು.
ಇದನ್ನೂ ಓದಿ:ನಾಡದೋಣಿ ಮೀನುಗಾರರಿಗೆ 300 ಲೀ. ಸೀಮೆಎಣ್ಣೆ
ಅವರು ತಮ್ಮ ಬೆನ್ನಮೇಲೆ ಭಾರತ ರಾಷ್ಟ್ರ ಧ್ವಜವನ್ನು ಹೊತ್ತು ಪ್ರತಿ ದಿನ 30 ರಿಂದ 35 ಕಿಮೀ ನಡಯುತ್ತಿದ್ದಾರೆ. ದಾರಿಯಲ್ಲಿ ಸಿಗುವ ದೇವಾಲಯ ಅಥವಾ ಸಾರ್ವಜನಿಕ ಸ್ಥಳದಲ್ಲಿ ವಿಶ್ರಾಂತಿ ಪಡೆದು, ಸ್ಥಳೀಯರು ನೀಡುವ ಆಹಾರ ಸ್ವೀಕರಿಸುತ್ತಾರೆ.
ತನ್ನೊಟ್ಟಿಗೆ ಮೊಬೈಲ್ ಹಾಗೂ ಒಂದಿಷ್ಟು ಅಗತ್ಯ ಸಾಮಗ್ರಿಗಳನ್ನು ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದಾರೆ. ಮುಂದೆ ಗೋವಾ, ಮಹಾರಾಷ್ಟ್ರ ಗುಜರಾತ್ ಮೂಲಕ ದೆಹಲಿ, ಜಮ್ಮು ಮತ್ತು ಕಾಶ್ಮೀರ ತಲುಪುವ ಯೋಜನೆ ಹೊಂದಿದ್ದಾರೆ.