

ಹಾಸನ: ಇಂಜಿನಿಯರ್ ಎಂದರೆ ಕೇವಲ ಕಟ್ಟಡ, ಸೇತುವೆ ಅಥವಾ ಯಂತ್ರಗಳನ್ನು ನಿರ್ಮಿಸುವವರು ಮಾತ್ರವಲ್ಲ. ಇಂಜಿನಿಯರ್ ಎಂದರೆ ಸಮಸ್ಯೆಯನ್ನು ಪರಿಹರಿಸುವವರು, ಹೊಸದನ್ನು ಸೃಷ್ಟಿಸುವವರು, ಸಮಾಜದ ಬದುಕನ್ನು ಸುಲಭಗೊಳಿಸುವವರು ಎಂದು ಅರಕಲಗೂಡಿನ ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಆರ್.ಎಸ್.ಅಶ್ವತ್ ನಾರಾಯಣ್ ಹೇಳಿದರು.
ಹಾಸನದ ರಾಜೀವ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಇಂಜಿನಿಯರ್ಸ್ ಡೇ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುಉದ್ದೇಶಿಸಿ ಮಾತನಾಡಿದರು. ಸರ್ ಎಂ.ವಿಶ್ವೇಶ್ವರಯ್ಯನವರ ಸಾಧನೆಗಳನ್ನು ಪ್ರತಿನಿತ್ಯ ಓದುತ್ತಾ ಬಂದರೆ ಅವರು ಎಂತಹ ಸಾಧಕರು, ಧೀಮಂತ ವ್ಯಕ್ತಿಗಳು, ಎಂತಹ ಇಂಜಿನಿಯರ್ ಆಗಿದ್ದರು ಎಂದು ತಿಳಿಯಲಿದೆ.
ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಬೆಳೆಸಿಕೊಳ್ಳಬೇಕು. ವಿದ್ಯೆಯು ಮಾನವರಿಗೆ ಜ್ಞಾನವನ್ನು ವಿಶೇಷ ಸೌಂದರ್ಯವನ್ನು, ಸಂಪತ್ತನ್ನು ತರುತ್ತದೆ. ವಿದ್ಯೆ ಹಣಕ್ಕೆ ಸಿಗುವುದಿಲ್ಲ, ಹಣವಿದ್ದು ವಿದ್ಯೆಯಿಲ್ಲದವನು ಪಶುವಿಗೆ ಸಮಾನ. ಪ್ರತಿಯೊಬ್ಬರೂ ವಿದ್ಯೆಗೆ ಪ್ರಾಮುಖ್ಯ ನೀಡಬೇಕೆಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಆರ್.ಶಂಕರೇಗೌಡ ಮಾತನಾಡಿ, ಸರ್ ಎಂ.ವಿಶ್ವೇಶ್ವರಯ್ಯ ಅವರು ತಮ್ಮ ಅಸಾಧಾರಣ ಪ್ರತಿಭೆಯಿಂದ, ಶಿಸ್ತಿನಿಂದ ಹಾಗೂ ಪರಿಶ್ರಮದಿಂದ ಭಾರತದ ಅಭಿವೃದ್ಧಿಗೆ ಅಳಿಸಲಾಗದ ಕೊಡುಗೆ ನೀಡಿದ್ದಾರೆ. ಕೃಷಿ ನೀರಾವರಿ ಯೋಜನೆಗಳಿಂದ ಹಿಡಿದು ಅಣೆಕಟ್ಟುಗಳ ನಿರ್ಮಾಣ, ಕೈಗಾರಿಕಾ ಅಭಿವೃಧ್ಧಿಯಿಂದ ಹಿಡಿದು ತಾಂತ್ರಿಕ ಶಿಕ್ಷಣದ ವಿಸ್ತರಣೆವರೆಗೆ ಅನೇಕ ಕ್ಷೇತ್ರಗಳಲ್ಲಿ ಅವರು ಪಥ ಪ್ರದರ್ಶಕರಾಗಿದ್ದರು ಎಂದರು.
ಇಂಜಿನಿಯರ್‌ಗಳು ಕನಸುಗಳನ್ನು ವಾಸ್ತವಕ್ಕೆ ತಂದುಕೊಡುವ ಶಿಲ್ಪಿಗಳು. ಇಂದಿನ ಜಗತ್ತು ತಂತ್ರಜ್ಞಾನದಿಂದ ವೇಗವಾಗಿ ಬದಲಾಗುತ್ತಿದೆ. ಕೃತಕ ಬುದ್ಧಿಮತ್ತೆ, ರೋಬಾಟಿಕ್ಸ್, ಹಸಿರು ಶಕ್ತಿ, ಬಾಹ್ಯಾಕಾಶ ಸಂಶೋಧನೆ-ಇವುಗಳಲ್ಲಿ ಇಂಜಿನಿಯರ್‌ಗಳ ಕೊಡುಗೆ ಮುಖ್ಯ. ಇಂಜಿನಿಯರ್ ಆಗುವುದು ಕೇವಲ ವೃತ್ತಿಯಲ್ಲ. ಅದು ಜವಾಬ್ದಾರಿ ಕೂಡ. ನಿಮ್ಮ ಜ್ಞಾನ, ಕೌಶಲ, ಪರಿಶ್ರಮ ಸಮಾಜದ ಹಿತಕ್ಕಾಗಿ ಬಳಸಿದಾಗ ಮಾತ್ರ ಅದು ನಿಜವಾದ ಅರ್ಥ ಪಡೆದುಕೊಳ್ಳುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆರ್.ಎಸ್.ಅಶ್ವತ್ ನಾರಾಯಣ್ ರಚಿತ ಹ್ಯಾಂಡ್ ಬುಕ್ ಫಾರ್ ಮಲ್ಟಿ ವಿಲೇಜ್ ಡ್ರಿಂಕಿಂಗ್ ವಾಟರ್ ಸಪ್ಲೈ ಸ್ಕೀಮ್ಸ್ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ನಿವೃತ್ತ ಅರಣ್ಯ ಸಿಬ್ಬಂದಿ ವೆಂಕಟೇಶ್, ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃಧ್ಧಿ ಅಧಿಕಾರಿ ಗಂಗರಾಜು, ಕಾಲೇಜಿನ ಎಲ್ಲ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿ ಇದ್ದರು.