

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಮೊಗ್ರಾಲ್ ಪೇಟೆಯಲ್ಲಿನ ಎಟಿಎಂ ಯಂತ್ರದಿಂದ ಹಣ ದೋಚಲು ಯತ್ನಿಸಲಾಗಿದ್ದು, ಈ ಸಂದರ್ಭ ಅಲರಾಂ ಮೊಳಗಿದ ಹಿನ್ನೆಲೆಯಲ್ಲಿ ಕಳ್ಳರು ಕಾರ್ಯಾಚರಣೆ ಉಪೇಕ್ಷಿಸಿ ಪರಾರಿಯಾಗಿದ್ದಾರೆ.
ಮೊಗ್ರಾಲ್‌ನ ಸೌತ್ ಇಂಡಿಯನ್ ಬ್ಯಾಂಕಿಗೆ ಸೇರಿದ ಎಟಿಎಂನಲ್ಲಿ ಗುರುವಾರ ನಸುಕಿನ 3.30ಕ್ಕೆ ಕಳವಿಗೆ ಯತ್ನ ನಡೆದಿದ್ದು, ಯಂತ್ರವನ್ನು ಒಡೆಯಲು ಯತ್ನಿಸುತ್ತಿದ್ದಂತೆ ಅಲರಾಂ ಮೊಳಗಿದೆ. ಎಟಿಎಂ ಕೊಠಡಿಯಿಂದ ಧಾವಿಸಿದ ಕಳ್ಳರು ತಮ್ಮ ವಾಹನದಲ್ಲಿ ಪರಾರಿಯಾಗಿದ್ದಾರೆ. ಮೊಗ್ರಾಲ್ ಜಂಕ್ಷನ್‌ನಿಂದ ಅಲ್ಪ ದೂರ ಪೆಟ್ರೋಲಿಂಗ್ ನಡೆಸುತ್ತಿದ್ದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದು, ಅಷ್ಟರಲ್ಲಿ ಕಳ್ಳರು ಪರಾರಿಯಾಗಿದ್ದಾರೆ. ಕುಂಬಳೆ ಠಾಣೆ ಇನ್ಸ್‌ಪೆಕ್ಟರ್ ಕೆ.ಪಿ.ವಿನೋದ್, ಎಸ್.ಐ ಕೆ.ಶ್ರೀಜಿತ್ ನೇತೃತ್ವದ ಪೊಲಿಸರ ತಂಡ ಸ್ಥಳಕ್ಕಾಗಮಿಸಿ ತಪಾಸಣೆ ನಡೆಸಿದ್ದಾರೆ.