ನೆರೆದಿದ್ದವರ ರಂಜಿಸಿದ ಪುಟಾಣಿಗಳು

ನೆರೆದಿದ್ದವರ ರಂಜಿಸಿದ ಪುಟಾಣಿಗಳು
Published on

ಮೈಸೂರು: ನಾಡಹಬ್ಬ ದಸರಾ ಅಂಗವಾಗಿ ನಗರದ ಜೆಕೆ ಮೈದಾನದಲ್ಲಿ ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಯಿಂದ ಹಮ್ಮಿಕೊಂಡಿರುವ ಮಂಗಳವಾರದ ಕಾರ್ಯಕ್ರಮ ಹಲವು ವಿಶೇಷತೆಗಳಿಗೆ ಸಾಕ್ಷಿಯಾದವು.

ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಮಹಿಳೆಯರು ವೇದಿಕೆಯಲ್ಲಿ ಹೆಜ್ಜೆ ಹಾಕಿ ನೃತ್ಯ ಮಾಡಿ ರಂಜಿಸಿದರು. ಪುಟ್ಟ ಮಕ್ಕಳು ವೇದಿಕೆಯಲ್ಲಿ ಹೆಜ್ಜೆ ಹಾಕುತ್ತಿದ್ದರೆ, ಪಾಲಕರು ಹಾಗೂ ನೆರೆದಿದ್ದವರು ಶಿಳ್ಳೆ, ಚಪ್ಪಾಳೆ ಮೂಲಕ ಹುರಿದುಂಬಿಸಿದರು. ವಿಡಿಯೋ, ಫೋಟೋ ತೆಗೆದು ಸಂಭ್ರಮಿಸಿದರು.

ನಗರದ ದೇವರಾಜ ಶಾಲೆಯ ವಿದ್ಯಾರ್ಥಿಗಳು ಗುಂಪು ನೃತ್ಯದ ಮೂಲಕ ನೆರೆದಿದ್ದವರ ರಂಜಿಸಿದರು. ಹುಣಸೂರು ತಾಲೂಕಿನ ಹರವೇ ರಾಮೇನಹಳ್ಳಿ ಹಾಗೂ ಕೆಂಡಗಣ್ಣಪುರ ಶಾಲೆಯ ಮಕ್ಕಳು ವಿವಿಧ ವೇಷಭೂಷಣದ ಮೂಲಕ ಗಮನಸೆಳೆದರು. ತಿ.ನರಸೀಪುರ ತಾಲೂಕಿನ ಕಟ್ಟೇಪುರ ಶಾಲೆಯ ಪುಟ್ಟಮಕ್ಕಳು ಕಿತ್ತೂರುರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಭಗತ್ ಸಿಂಗ್ ಕುರಿತ ವೇಷಭೂಷಣ ಧರಿಸಿ ಗಮನ ಸೆಳೆದರು.

ಮೈಸೂರಿನ ಬೆಲವತ್ತ ಗ್ರಾಮದ ಹಿಪ್ಪೋ ಚಾಂಪಿಯನ್ಸ್ ಮಕ್ಕಳ ಬಂಗಾರ ತೆನೆಯಲ್ಲಿ ಸಿಂಗರಿ ಮನೆ-ಮನೆಯಲ್ಲಿ ನೃತ್ಯ ನೆರೆದಿದ್ದವರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿತು. ಮೈಸೂರು ನಗರದ ತಸ್ಮಯ, ಅಗ್ನಿ ಸೂರ್ಯ ಸೋಲೋ ಡಾನ್ಸ್ ಮೂಲಕ ಗಮನಸೆಳೆದರು.

ತಿಪ್ಪೂರು ವೃತ್ತದಿಂದ ಅಂಬಿಕಾ ಮತ್ತು ತಂಡ ನಡೆಸಿಕೊಟ್ಟ ನೃತ್ಯ ಹಾಗೂ ಹರದನಹಳ್ಳಿಯ ಪೂರ್ಣಿಮಾ ಮತ್ತು ತಂಡದ ನೃತ್ಯ, ಸಾಲಿಗ್ರಾಮದ ಶಾಲಿನಿ ಹಾಗೂ ನಡೆಸಿಕೊಟ್ಟ ನೃತ್ಯ ಪ್ರದರ್ಶನ ಆಕರ್ಷಕವಾಗಿತ್ತು.

ಕಲಾವಿದ ಶ್ರೀನಿವಾಸ ಅವರು ನಡೆಸಿಕೊಟ್ಟ ಮ್ಯಾಜಿಕ್ ಶೋ ನೆರೆದಿದ್ದವರು ಬೆರಗಿನಿಂದ ನೋಡುವಂತೆ ಮಾಡಿತು. ಬಲೂಲಿನಿಂದ ಪಾರಿವಾಳ ಸೇರಿದಂತೆ ವಿವಿಧ ಜಾದೂವನ್ನು ಜನರು ಬೆರಗುಗಣ್ಣಿನಿಂದ ನೋಡುವಂತೆ ಮಾಡಿತು.

ಜಿಲ್ಲಾ ಮಹಿಳಾ ಕಲ್ಯಾಣಾಧಿಕಾರಿ ಶಂಕರಗೌಡ, ಕೆ.ಆರ್.ನಗರ ಯೋಜನೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಣ್ಣಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net