ಸಂಭ್ರಮದ ಅಮೃತೇಶ್ವರಸ್ವಾಮಿ ರಥೋತ್ಸವ

9ark1
Published on

ಅರಕಲಗೂಡು: ಪಟ್ಟಣದ ಕೋಟೆ ಪುರಾಣ ಪ್ರಸಿದ್ಧ ಶ್ರೀ ಅಮೃತೇಶ್ವರಸ್ವಾಮಿ ಮಹಾ ರಥೋತ್ಸವ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಶನಿವಾರ ಸಡಗರ ಸಂಭ್ರಮದಿಂದ ನೆರವೇರಿತು.


ಬೆಳಗ್ಗೆ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿದವು. ಬಳಿಕ ಉತ್ಸವ ಮೂರ್ತಿಗಳನ್ನು ಅಲಂಕರಿಸಿ ಕೃಷ್ಣಗಂಧೋತ್ಸವ ನಡೆಸಲಾಯಿತು. ಉತ್ಸವದಲ್ಲಿ ಬಂದ ದೇವರ ಮೂರ್ತಿಗಳನ್ನು ಸಿಂಗರಿಸಿದ ರಥದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಶಾಸಕ ಎ. ಮಂಜು ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ಶಿವನಾಮ ಸ್ಮರಣೆ ಮಾಡುತ್ತಾ ರಥ ಬೀದಿಯಲ್ಲಿ ತೇರನ್ನು ಎಳೆದು ಸಂತಸ ಹಂಚಿಕೊಂಡರು.


ಮಂಗಳವಾದ್ಯ ಹಾಗೂ ತಮಟೆವಾದ್ಯಗಳು ರಥೋತ್ಸವಕ್ಕೆ ಮೆರುಗು ನೀಡಿದವು. ತಮಟೆ ವಾದ್ಯಕ್ಕೆ ಮಹಿಳೆಯರು, ಯುವಕರು, ಚಿಣ್ಣರು ನರ್ತಿಸಿದರು. ತೇರನ್ನು ಎಳೆಯುತ್ತಿದ್ದ ಭಕ್ತರಿಗೆ ಬಿಸಿಲಿನ ಬೇಗೆ ತಣಿಸಲು ಜನರು ಪಾನಕ, ಮಜ್ಜಿಗೆ, ನೀರು ನೀಡಿದರು.


ತೇರು ಸ್ವಸ್ಥಾನ ಸೇರಿದ ಬಳಿಕ ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆಯಿತು. ಪಪಂ ಸದಸ್ಯರಾದ ರಮೇಶ್ ವಾಟಾಳ್, ಸುಮಿತ್ರಾ, ಕಂದಾಯ ನಿರೀಕ್ಷಕ ಕೆ.ಎಸ್.ಲೋಕೇಶ್, ಪಿಎಸ್ ಐ ಕಾಳೇಗೌಡ, ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎ.ಎಸ್.ರಾಮಸ್ವಾಮಿ, ಕಾರ್ಯದರ್ಶಿ ಎ.ಎನ್. ಗಣೇಶಮೂರ್ತಿ, ಗುರುಭವನ ಸಮಿತಿ ಅಧ್ಯಕ್ಷ ಕೆ.ನಂಜುಂಡಸ್ವಾಮಿ, ಕಾರ್ಯದರ್ಶಿ ಎ.ಎಸ್.ಹಿರಣ್ಣಯ್ಯ, ಉದ್ಯಮಿ ಬೆಮ್ಮತ್ತಿ ಸುರೇಶ್, ಸೀತಾರಾಘವ ಸಹಕಾರ ಸಂಘದ ಅಧ್ಯಕ್ಷೆ ಜ್ಯೋತಿ ರಾಮಣ್ಣ, ಮಾಜಿ ಅಧ್ಯಕ್ಷ ಎ.ಎಸ್.ರಾಮಕೃಷ್ಣಯ್ಯ, ಉಪ್ಪಾರ ಸಮುದಾಯದ ಮುಖಂಡರಾದ ಮಲ್ಲೇಶ್, ಭೀಮರಾಜ್, ಗಣೇಶ್ ಪಾಲ್ಗೊಂಡಿದ್ದರು. ರಾತ್ರಿ ಶಾಂತೋತ್ಸವ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net