

ನಂಜನಗೂಡು: ತಾಲೂಕಿನ ಹುಸ್ಕೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮಂಗಳವಾರ ಗ್ರಾಮಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು ಅಮೃತ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಿದರು.
ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಅಮೃತ ಮಹೋತ್ಸವ, ಗುರುವಂದನಾ ಕಾರ್ಯಕ್ರಮ, ಸರ್ಕಾರಿ ಶಾಲೆಯ ಮುಖ್ಯ ದ್ವಾರವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಹೇಶ್ ಉಧ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರನ್ನು ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿ ಗುರುವಂದನೆ ಸಲ್ಲಿಸಲಾಯಿತು.
ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಹೇಶ್ ಮಾತನಾಡಿ, ಸರ್ಕಾರಿ ಶಾಲೆಗೆ 75 ವರ್ಷ ತುಂಬಿದ ಹಿನ್ನೆಲೆ, ಇಂದು ಅಮೃತ ಮಹೋತ್ಸವ ಆಚರಣೆ ಮಾಡುತ್ತಿರುವುದು ಸಂತೋಷ ತಂದಿದೆ. ಗ್ರಾಮಸ್ಥರು ಅಭಿವೃದ್ಧಿ ಪಡಿಸಲು ಮನಸ್ಸು ಮಾಡಿದರೆ ಏನೆಲ್ಲ ಮಾಡಬಹುದು ಎಂಬುದಕ್ಕೆ ಹುಸ್ಕೂರು ಸರ್ಕಾರಿ ಶಾಲೆ ಮಾದರಿಯಾಗಿದೆ. ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು. ಪಾಲಕರು ಮಕ್ಕಳನ್ನು ಟಿವಿ ಮತ್ತು ಮೊಬೈಲ್ಗಳಿಂದ ದೂರವಿಡಬೇಕು. ಓದುವ ಸಮಯದಲ್ಲಿ ಮತ್ತು ಪರೀಕ್ಷಾ ವೇಳೆಯಲ್ಲಿ ಎಚ್ಚರಿಕೆ ವಹಿಸಿ ಮಕ್ಕಳನ್ನು ಮನೆಗಳಲ್ಲಿ ಓದಿಸಬೇಕು. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಯಾವುದಕ್ಕೂ ಕಡಿಮೆ ಇಲ್ಲ. ಸರ್ಕಾರಿ ಶಾಲೆಗಳನ್ನು ಉಳಿಸಬೇಕಾದರೆ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು. ಮಕ್ಕಳು ಮಾನಸಿಕವಾಗಿ, ದೈಹಿಕವಾಗಿ ಸದೃಢರಾಗಬೇಕು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ನಟ ದಿವಂಗತ ಡಾ.ಪುನೀತ್ ರಾಜ್‌ಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬವನ್ನು ಇದೇ ವೇಳೆ ಆಚರಿಸಲಾಯಿತು. ಗ್ರಾಪಂ ಅಧ್ಯಕ್ಷೆ ಭಾಗ್ಯಾ ಸ್ವಾಮಿ, ಪಿಡಿಒ ಶರೀಫ್, ಗ್ರಾಪಂ ಸದಸ್ಯರಾದ ನಾಗಮ್ಮ, ಸಣ್ಣಮ್ಮ, ಕಾಳಮ್ಮ, ರತ್ನಮ್ಮ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಂದ್ರ, ಡಯಟ್ ಹಿರಿಯ ಉಪನ್ಯಾಸಕಿ ನಳಿನಿ, ಮುಖಂಡರಾದ ಲಿಂಗರಾಜು, ಶಿವಣ್ಣಶೆಟ್ಟಿ, ಮುಖ್ಯ ಶಿಕ್ಷಕಿ ಚಿಕ್ಕತಾಯಮ್ಮ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮರತ್ನಾಕರ, ಉಪಾಧ್ಯಾಯರ ಸಹಕಾರ ಸಂಘದ ಉಪಾಧ್ಯಕ್ಷ ಸತೀಶ್ ದಳವಾಯಿ, ನಿಕಟಪೂರ್ವ ಕಾರ್ಯದರ್ಶಿ ರಂಗನಾಥ್, ಶಿಕ್ಷಕರಾದ ಶಾರದಾ, ಸುಧಾ ಭಾಗವಹಿಸಿದ್ದರು.