

ರಾಮನಗರ : ಜಿಲ್ಲೆಯ ಸರ್ಕಾರಿ ನೌಕರರ ಸಂಘವು ಸದಸ್ಯರ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವ ಜೊತೆಗೆ, ಅವರಿಗೆ ಅನುಕೂಲವಾಗುವ ಹಲವು ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಗುರುಭವನದ ಪಕ್ಕದಲ್ಲಿ ನಿರ್ಮಿಸಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಮನಗರ ಜಿಲ್ಲಾ ಶಾಖೆ ವತಿಯಿಂದ ಹೊಸದಾಗಿ ನಿರ್ಮಿಸಿರುವ ಅಮೃತ ಸೌಧ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
"ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಕ್ರೀಡೆ, ಸಾಂಸತಿಕ ಚಟುವಟಿಕೆ ಸೇರಿದಂತೆ ಒಂದಿಲ್ಲೊಂದು ಕಾರ್ಯಕ್ರಮಗಳನ್ನು ನೌಕರರಿಗಾಗಿ ಸಂಘವು ಹಮ್ಮಿಕೊಳ್ಳುತ್ತಾ ಬರುತ್ತಿದೆ. ಅವರ ಕಷ್ಟ & ಸುಖಗಳಿಗೆ ಸ್ಪಂದಿಸುತ್ತಾ ಬೆನ್ನೆಲುಬಾಗಿ ನಿಂತಿದೆ. ಸಂಘದ ಕಾರ್ಯ ಚಟುವಟಿಕೆಗಳು ಮುಂದೆಯೂ ಹೀಗೆಯೇ ಮುಂದುವರಿಯಲಿ' ಎಂದು ಶುಭ ಕೋರಿದರು.
ಸಂಘದ ಮಾಜಿ ಗೌರವಾಧ್ಯಕ್ಷ ಪುಟ್ಟಸ್ವಾಮಿ ಗೌಡ ಮಾತನಾಡಿ, "ನಮ್ಮಲ್ಲಿ ಹಿಂದೆ ಅಧ್ಯಕ್ಷರಾಗಿದ್ದ ಮರಿದೇವರು ಅವರ ಕಾಲದಲ್ಲಿ ಸ್ಫೂರ್ತಿ ಭವನ ನಿಮಾರ್ಣವಾಗಿತ್ತು. ಅದಾದ 17 ವರ್ಷಗಳ ಬಳಿಕ, ಸಂಘಕ್ಕೆ ಸಂಬಂಧಿಸಿದಂತೆ ಯಾವುದೇ ಕಟ್ಟಡ ನಿಮಾರ್ಣವಾಗಿರಲಿಲ್ಲ. ಇದೀಗ, ಸತೀಶ್ ಅವರ ನೇತೃತ್ವದಲ್ಲಿ ಅಮೃತ ಸೌಧ ಕಟ್ಟಡ ಉದ್ಘಾಟನೆಯಾಗಿದೆ. ಈ ಯೋಜನೆ ಕಾರ್ಯಗತವಾಗುವಲ್ಲಿ ಅವರ ಶ್ರಮ ಹೆಚ್ಚಾಗಿದೆ' ಎಂದು ಶ್ಲಾಘಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಸತೀಶ್, "ನೌಕರರ ಕ್ಷೇಮಾಭಿವೃದ್ಧಿಗಾಗಿ ಇರುವ ಸಂಘಕ್ಕೆ ಇಂತಹದ್ದೊಂದು ಕಟ್ಟಡ ಅವಶ್ಯಕತೆ ಇತ್ತು. ಸದ್ಯ ನಿಮಾರ್ಣವಾಗಿರುವ ಕಟ್ಟಡವು ಸಂಘಕ್ಕೆ ಆದಾಯದ ಮೂಲವು ಆಗಿದೆ. ಇದರೊಂದಿಗೆ, ಸಂಘವು ಆರ್ಥಿಕವಾಗಿಯೂ ಸಬಲವಾಗುವತ್ತಾ ಹೆಜ್ಜೆ ಇಟ್ಟಿದೆ' ಎಂದು ಹೇಳಿದರು.
"ಮುಂದಿನ ದಿನಗಳಲ್ಲಿ ಕಟ್ಟಡದ ಮೇಲ್ಭಾಗದಲ್ಲಿ ಮತ್ತೊಂದು ಅಂತಸ್ತು ನಿಮಾರ್ಣ ಮಾಡಿ, ನೌಕರರಿಗೆ ಕ್ಯಾಂಟೀನ್ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸುವ ಯೋಜನೆ ಇದೆ. ಇದಕ್ಕೆ ಜನಪ್ರತಿನಿಧಿಗಳಿಂದ ನೆರವು ಪಡೆದು ಯೋಜನೆಯನ್ನು ಸಾಕಾರಗೊಳಿಸಲು ಪ್ರಯತ್ನ ಮಾಡಲಾಗುವುದು' ಎಂದು ತಿಳಿಸಿದರು.
ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ. ಪದ್ಮ ಜಿ.ಎಲ್, ತಾಲ್ಲೂಕು ಪಂಚಾಯಿತಿ ಇಒಗಳಾದ ಪ್ರದಿಪ್, ಶಿವಕುಮಾರ್, ನಗರಸಭೆ ಪೌರಾಯುಕ್ತ ಎಲ್. ನಾಗೇಶ್, ತಹಶೀಲ್ದಾರ್ ತೇಜಸ್ವಿನಿ, ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿ ಮೋಹನ್, ರಾಮನಗರ ತಾಲ್ಲೂಕು ಬಿಸಿಎಂ ಕಲ್ಯಾಣಾಧಿಕಾರಿ ಮಧುಮಾಲಾ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಅಮೃತ ಸೌಧಕ್ಕೆ ಭೇಟಿ ನೀಡಿದರು. ಅಧಿಕಾರಿಗಳನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸಂಘದ ಗೌರವಾಧ್ಯಕ್ಷ ಕಾಂತರಾಜು, ಕಾರ್ಯದರ್ಶಿ ಶಿವಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷ ಸತೀಶ್, ಉಪಾಧ್ಯಕ್ಷ ಪ್ರದಿಪ್, ಚಂದ್ರಹಾಸ್, ಸಂಜೀವೇಗೌಡ, ರಾಜ್ಯ ಪರಿಷತ್ ಸದಸ್ಯ ಸುರೇಂದ್ರ, ಚನ್ನಪಟ್ಟಣ ತಾಲ್ಲೂಕು ಅಧ್ಯಕ್ಷ ಶಿವಲಿಂಗೇಗೌಡ, ಮಾಗಡಿ ಅಧ್ಯಕ್ಷ ಪ್ರಕಾಶ್, ಪದಾಧಿಕಾರಿಗಳಾದ ರಾಜಶೇಖರ್, ಸರಂಗಪ್ಪ, ಯೋಗೇಶ್ ಹಾಗೂ ಇತರರು ಇದ್ದರು.