

ತುಮಕೂರು: ಗ್ರಾಮೀಣ ಕ್ರಿಯಾತ್ಮಕ ರಂಗ ತಂಡವು ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ 5 ದಿನಗಳ ಯುಗಾದಿ ನಾಟಕೋತ್ಸವ-2025 ಸಂಪನ್ನಗೊಂಡಿತು. ಸಮಾರೋಪ ಭಾಷಣದಲ್ಲಿ ರಂಗಭೂಮಿ ಕಲಾಸಕ್ತರ ಕೊರತೆ ಅನುಭವಿಸುತ್ತಿದೆ. ಇನ್ನೂ 10 ವರ್ಷದಲ್ಲಿ ರಂಗಭೂಮಿ ಅಸ್ತಿತ್ವದಲ್ಲಿ ಇರುತ್ತದೋ, ಇಲ್ಲವೋ ಎಂಬ ಆತಂಕ ಹುಟ್ಟಿಸಿದೆ ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಕಳವಳ ವ್ಯಕ್ತಪಡಿಸಿದರು.
ನಗರದ ಡಾ.ಗುಬ್ಬೀವಿರಣ್ಣ ಕಲಾಕ್ಷೇತ್ರದಲ್ಲಿ ಬುಧವಾರ ಸಂಜೆ ಯುಗಾದಿ ನಾಟಕೋತ್ಸವದಲ್ಲಿ ಹಿರಿಯ ಕಲಾವಿದರುಗಳಿಗೆ ರಂಗಗೌರವ ಸಮರ್ಪಿಸಿ ಮಾತನಾಡಿದ ಅವರು, ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರು ತಮ್ಮ ಉಳಿವಿನ ಜತೆಗೆ, ರಂಗಭೂಮಿಯ ಇರುವಿಕೆಗಾಗಿ ಅಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಳ್ಳಬೇಕಿದೆ. ರಂಗಭೂಮಿಯ ಪ್ರಬಲ ಮಾಧ್ಯಮವಾಗಿದ್ದು, ಉಳಿಸಿಕೊಳ್ಳುವ ಅನಿವಾರ್ಯತೆ ಕಲಾವಿದರು ಮತ್ತು ಕಲಾಸಕ್ತರು ಇಬ್ಬರಿಗೂ ಸೇರಿದೆ ಎಂದರು.
ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ, ತುಮಕೂರು ಜಿಲ್ಲೆ ಕಲೆಯ ತವರೂರು. ಕಲೆಯಲ್ಲಿ ಮಹತ್ವದ ಸ್ಥಾನ ಹೊಂದಿದು ಹಲವಾರು ಕಲಾವಿದರನ್ನು ಹುಟ್ಟು ಹಾಕಿ, ಬೆಳೆಸಿದೆ. ಪ್ರತಿಭಾನ್ವಿತ ಕಲಾವಿದರು ಈ ನೆಲದಲ್ಲಿ ಜನ್ಮತಾಳುತ್ತಿದ್ದು ಇದಕ್ಕೆ ಹಲವು ರಂಗ ಸಂಘಟನೆಗಳ ಕೊಡುಗೆ ಇದೆ.
ಕಲಾವಿದರಿಗೆ ಅತಿದೊಡ್ಡ ಪ್ರಶಸ್ತಿ ಎಂದರೆ ಅದು ಕೇಂದ್ರ ಸಂಗೀತ, ನಾಟಕ ಅಕಾಡೆಮಿ ಪ್ರಶಸ್ತಿ, ಅಂತಹ ಪ್ರಶಸ್ತಿಯನ್ನು ಹೆಚ್ಚು ಪಡೆದುಕೊಂಡಿರುವುದು ತುಮಕೂರು ಜಿಲ್ಲೆಯ ಕಲಾವಿದರು, ನಾಟಕರತ್ನ ಗುಬ್ಬಿ ವೀರಣ್ಣ, ಅವರ ಪತ್ನಿ ಜಯಮ್ಮ, ಮೊಮ್ಮಗಳು ಜಯಶ್ರೀ, ಮಾಸ್ಟರ್ ಹಿರಣ್ಣಯ್ಯ, ಡಾ.ಲಕ್ಷ್ಮಣದಾಸ್, ಕಲ್ಮನೆ ನಂಜಪ್ಪ ಅವರಿಗೆ ಈ ಪ್ರಶಸ್ತಿ ಲಭಿಸಿದೆ ಎಂದು ತಿಳಿಸಿದರು.
ರಂಗಗೌರವ ಸ್ವೀಕರಿಸಿ ಮಾತನಾಡಿದ ನಗರ ಉಪವಿಭಾಗದ ಡಿವೈಎಸ್ಪಿ ಚಂದ್ರಶೇಖರ್, ನಾನು ಕಾಲೇಜು ದಿನಗಳಲ್ಲಿ ಬೀದಿ ನಾಟಕಗಳಿಗೆ ಬಣ್ಣ ಹಚ್ಚಿದ್ದೆ. ಅಕರ್ಷಣೆಯಂತು ಇತ್ತು. ಈಗ ನನ್ನ ಹಿರಿಯ, ಕಿರಿಯ ಸಹೋದ್ಯೋಗಿಗಳು ಸೇರಿ ಮತ್ತೊಮ್ಮೆ ಬಣ್ಣ ಹಚ್ಚುವಂತೆ ಮಾಡಿದರು. ಹಿರಿಯರಾದ ಲಕ್ಷ್ಮಣದಾಸ್ ಆಗಾಗ್ಗೆ ಬಂದು ಕೆಲ ಸಲಹೆ, ಸೂಚನೆಗಳನ್ನು ನೀಡಿದ್ದು, ಪಾತ್ರ ಮಾಡುವಾಗ ಸಹಕಾರಿಯಾಯಿತು. ರಂಗಭೂಮಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಲು ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ರಂಗಭೂಮಿಗೆ ಇಂದಿಗೂ ಜನರ ಮಧ್ಯ ಪ್ರಬಲ ಮಾಧ್ಯಮವಾಗಿಯೇ ಉಳಿದುಕೊಂಡಿದೆ. ನಾಟಕ, ಬೀದಿ ನಾಟಕ, ಸಂಗೀತ, ನೃತ್ಯ, ಯಕ್ಷಗಾನದಂತಹ ಕಲೆಗಳ ಮೂಲಕ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬಹುದು. ಪೊಲೀಸ್ ಆಗಿ ಕಾನೂನು ಸುವ್ಯವಸ್ಥೆ ಕಾಪಾಡುವುದರ ಜತೆಗೆ, ಕಲೆಯ ಮೂಲಕವೂ ಜನಸೇವೆ ಮಾಡಬಹುದು. ಮಾದಕ ವಸ್ತುಗಳ ಸೇವೆ, ಸಾಗಾಣಿಕೆ ಇಂತಹ ಸಮಾಜ ವಿದ್ರೋಹಿ ಕೃತ್ಯಗಳ ವಿರುದ್ಧ ರಂಗಭೂಮಿಯನ್ನು ಪ್ರಬಲ ವೇದಿಕೆಯಾಗಿ ಬಳಕೆ ಮಾಡಿಕೊಳ್ಳಬೇಕಾಗಿದೆ ಎಂದು ಸಿಪಿಐ ದಿನೇಶ್ಕುಮಾರ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಕಲಾಶ್ರೀ ಡಾ.ಲಕ್ಷ್ಮಣದಾಸ್, ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್, ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದ ಶಿವಕುಮಾರ್ ತಿಮ್ಮಲಾಪುರ, ಕಾಂತರಾಜು ಕೌತುಮಾರನಹಳ್ಳಿ, ರಂಗ ಸೊಗಡು ಕಲಾಟ್ರಸ್ಟ್ನ ಸಿದ್ದರಾಜು ಸ್ವಾಂದೇನಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.