

ಕನಕಪುರ: ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಯ ರೈತರ ಮಹತ್ವಾಕಾಂಕ್ಷಿ ಯೋಜನೆ ವಿವಾದ ವಿಳಂಬ, ರಾಜಕೀಯ ತಿಕ್ಕಾಟದ ಸುತ್ತ ಮೇಕೆದಾಟು ಯೋಜನೆ ಗಿರಕಿ ಹೊಡೆಯುತ್ತಿದ್ದರೆ, ಇತ್ತ ಯೋಜನೆ ಜಾರಿ ಸಂಬಂಧ ಸೌಹಾರ್ದ ಪ್ರಯತ್ನವೊಂದು ಆರಂಭವಾಗಿದೆ.
ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕರ್ನಾಟಕ, ತಮಿಳುನಾಡು, ಪುದುಚೇರಿ, ಕೇರಳ ರಾಜ್ಯಗಳ ರೈತ ನಿಯೋಗವು ಒಟ್ಟಾಗಿ ಕಾವೇರಿ ಕುಟುಂಬ ಸೌಹಾರ್ದ ಸಭೆಯೊಂದು ಬುಧವಾರ ಆಯೋಜನೆಗೊಂಡಿತ್ತು. ಕನಕಪುರದ ಉದ್ದೇಶಿತ ಮೇಕೆದಾಟು ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಆಗು ಹೋಗುಗಳ ಬಗ್ಗೆ ಚರ್ಚಿಸಲು ತಂಡವು ಸಂಗಮಕ್ಕೆ ಬಂದಿತ್ತು. ದೊಡ್ಡಆಲಹಳ್ಳಿಯ ಮುಂದೆ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಪೋಲಿಸರು ತಂಡವನ್ನು ತಡೆದು ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಇರುವುದರಿಂದ ಪ್ರತಿಭಟನೆ ಮತ್ತು ಗುಂಪುಗಾರಿಕೆಗೆ ಅವಕಾಶವಿಲ್ಲವೆಂದು ಅವರ ಮನವೊಲಿಸಿ ಸಮೀಪದಲ್ಲಿಯೇ ಸಭೆ ನಡೆಸಿ ತೆರಳುವಂತೆ ಸೂಚಿಸಿತು.
ನಂತರ ನಡೆದ ಸಭೆಯಲ್ಲಿ ಕುರುಬೂರು ಶಾಂತಕುಮಾರ್ ನೇತೃತ್ವದಲಿ ್ಲತಮಿಳುನಾಡಿನ ಪ್ರತಿನಿಧಿ ಪಿ.ಆರ್.ಪಾಂಡಿಯನ್, ಪುದುಚೇರಿ ರಾಜ್ಯದ ಸೋಮು, ಕೇರಳದ ಬಿಜು ನೇತೃತ್ವದ ನಿಯೋಗದ ಸೌಹಾರ್ದ ಸಭೆಯಲ್ಲಿ 4 ರಾಜ್ಯಗಳ ಪ್ರಸ್ತಾವನೆಯನ್ನು ಹಂಚಿಕೊಂಡು ಯೋಜನೆಯ ಬಗ್ಗೆ ಚರ್ಚಿಸಲಾಯಿತು.
ಬಹುತೇಕ ಮುಂಖಡರು ಕನಕಪುರ ಸಂಗಮ ಬಳಿಯಲ್ಲಿಯೇ ಮೇಕೆದಾಟು ಯೋಜನೆ ನಿರ್ಮಾಣವಾಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ, ತಮಿಳುನಾಡಿನ ನಿಯೋಗವು ರಾಶಿಮನ್ನಾರ್ ಎನ್ನುವ ಸ್ಥಳದಲ್ಲಿ ನಮ್ಮ ಸ್ಥಳಲ್ಲಿಯೇ ಅಣೆಕಟ್ಟು ನಿರ್ಮಾಣ ಆಗಬೇಕು, ಇದು ಉಭಯ ರಾಜ್ಯಗಳಿಗೂ ಅನುಕೂಲವಾಗುತ್ತದೆ ಎನ್ನುವ ಅಭಿಪ್ರಾಯವನ್ನು ತೆರೆದಿಟ್ಟಿತು. ಈ ವೇಳೆ ಕೆಲವರು ತಾಂತ್ರಿಕ ಅಂಶಗಳ ಪರಿಣಾಮವನ್ನು ಒಟ್ಟಾಗಿ ಅಧ್ಯಯನ ಮಾಡಿ ನಿರ್ಣಯಕ್ಕೆ ಬರೋಣ, ಈಗ ಸ್ಥಳಕ್ಕೆ ಧಾವಿಸಲು ಆಗದ ಹಿನ್ನೆಲೆಯಲ್ಲಿ ಮತ್ತೊಂದು ದಿನ ಎರಡೂ ಸ್ಥಳಗಳಿಗೆ ಭೇಟಿ ನೀಡಿ ನಿರ್ಣಯ ಮಾಡೋಣ ಎಂಬ ನಿರ್ಧಾರಕ್ಕೆ ಬಂದರು.
ಕಗ್ಗಲಿಪುರ ರೈತ ಸಂಘದ ಮುಖಂಡರಾದ ನದೀಮ್, ರಾಮಣ್ಣ, ವೆಂಕಟೇಶ್, ಕೆಂಚಪ್ಪ, ಕಾಣಿಕ್, ಜೀವನ್ ಟ್ರಸ್ಟ್ ಅಧ್ಯಕ್ಷ ಹೊಸದುರ್ಗ ಪ್ರಶಾಂತ್, ಹಾರೋಹಳ್ಳಿ ತಾಲೂಕು ಅಧ್ಯಕ್ಷ ಬಿ.ಎಂ.ಪ್ರಕಾಶ್, ಜಿಲ್ಲಾ ಮುಖಂಡರಾದ ಗಜೇಂದ್ರಸಿಂಗ್, ಮರಳವಾಡಿ ರಾಜಣ್ಣ ಸೇರಿ ಅನೇಕರು ಭಾಗವಹಿಸಿದ್ದರು.
ರೈತ ಸಂಘದಲ್ಲಿ ವಿಭಿನ್ನ ಪ್ರತಿಕ್ರಿಯೆ
ಹಾಸನದ ರೈತ ಸಂಘದ ಅಧ್ಯಕ್ಷ ಮಂಜೇಗೌಡ, ರಾಮನಗರ ಜಿಲ್ಲಾ ಕಾರ್ಯಾಧ್ಯಕ್ಷ ಸಂಪತ್‌ಕುಮಾರ್ ನೇತೃತ್ವದ ತಂಡ ಪ್ರತ್ಯೇಕವಾಗಿ ಮೇಕೆದಾಟಿಗೆ ತೆರಳಿತು. ಇದರಿಂದ ರೈತ ಹೋರಾಟಗಾರರಲ್ಲಿಯೇ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿರುವುದು ಕಂಡು ಬಂತು. ಕುರುಬೂರು ಶಾಂತಕುಮಾರ್ ನೇತೃತ್ವದ ಮತ್ತೊಂದು ತಂಡದಲ್ಲಿ ತಮ್ಮನ್ನು ಪರಿಗಣಿಸಿಲ್ಲ ಎನ್ನುವ ಅಸಮಾಧಾನ ಇದಕ್ಕೆ ಕಾರಣ ಎನ್ನಲಾಗಿದೆ.
ಮುಖಂಡ ಮಂಜೇಗೌಡ ಮಾತನಾಡಿ, ಮೇಕೆದಾಟು ಯೋಜನೆ ಆಗುವುದು ಶತಃಸಿದ್ದ. ಆದರೆ, ರಾಜಕೀಯ ಗೊಂದಲಗಳಿಂದ ಯೋಜನೆ ನನೆಗುದಿಗೆ ಬಿದ್ದಿದೆ, ಈ ಹಿಂದೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ತಾವು ಅಧಿಕಾರ ಇಲ್ಲದ ವೇಳೆ ಮೇಕೆದಾಟು ಯೋಜನೆಯನ್ನು ಅಸ್ತ್ರವಾಗಿ ಬಳಸಿಕೊಂಡು ಪಾದಯಾತ್ರೆ ಮೂಲಕ ರಾಜಕೀಯದಲ್ಲಿ ಹವಾ ಸೃಷ್ಟಿಸಿದ್ದರು, ಅಧಿಕಾರಕ್ಕೆ ಬಂದ ನಂತರ ಮೇಕೆದಾಟು ಯೋಜನೆಯ ನಿರ್ಮಾಣಕ್ಕೆ ತುಟಿಬಿಚ್ಚದೆ ಇರುವುದು ನಮ್ಮದೌರ್ಭಾಗ್ಯವಾಗಿದೆ ಎಂದರು. ಯಾವುದೇ ಕಾರಣಕ್ಕೂ ತಮಿಳುನಾಡು ರಾಶಿಮನ್ನಾರ್ ಸ್ಥಳದಲ್ಲಿ ಯೋಜನೆಯಾಗಬಾರದು, ನಮ್ಮ ಕನಕಪುರ ತಾಲೂಕಿನಲ್ಲಿಯೇ ಯೋಜನೆಯಾಗಬೇಕೆಂದು ಒತ್ತಾಯಿಸಿದರು. ರಾಜಕೀಯ ಮೇಲಾಟದಲ್ಲಿ ರೈತರ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆಗೆ ಹಿನ್ನಡೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ರೈತರು ಎಚ್ಚೆತ್ತುಕೊಂಡು ನಿರಂತರ ಹೋರಾಟಕ್ಕೆ ಸಜ್ಜಾಗಬೇಕು ಎಂದು ಕರೆನೀಡಿದರು.
ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಾ, ಯುವ ಘಟಕದ ವಿನೋದ್‌ಕುಮಾರ್, ಹಿರಿಯ ಮುಖಂಡ ಮಂಚೇನಹಳ್ಳಿ ಶಿವಕುಮಾರ್, ಮಾಜಿ ರಾಮನಗರ ಜಿಲ್ಲಾಧ್ಯಕ್ಷ ಎಂ.ಡಿ.ಶಿವಕುಮಾರ್, ರಾಜ್ಯ ಸಮಿತಿ ಪದಾಧಿಕಾರಿಗಳಾದ ನಾಗೇಶ್ ಪಾಟೀಲ್, ರವಿಕುಮಾರ್, ಶಿವಣ್ಣ, ನಾಗರಾಜು, ಚಿಕ್ಕಬಳ್ಳಾಪುರ ಪ್ರಕಾಶ್, ನಾರಾಯಣರೆಡ್ಡಿ, ರಾಮನಗರ ಲೋಕೇಶ್, ರಾಜು ಉಪಸ್ಥಿತರಿದ್ದರು.