

ಹಾಸನ: ವಿಶೇಷ ವೈದ್ಯಕೀಯ ಅವಶ್ಯಕತೆ ಹೊಂದಿದ್ದ ಪುಟ್ಟ ಹೆಣ್ಣು ಮಗುವೊಂದನ್ನು ಅಮೆರಿಕದ ಮಿಸ್ಸೋರಿ ರಾಜ್ಯದ ವಿಲಿಯಮ್ ಮತ್ತು ಆಶ್ಲೀ ದಂಪತಿ ದತ್ತು ಪಡೆದಿದ್ದಾರೆ.
ನಗರದ ತವರು ಟ್ರಸ್ಟ್ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಈ ಹೃದಯಸ್ಪರ್ಶಿ ಕಾರ್ಯಕ್ರಮದಲ್ಲಿ ಮಗು ತನ್ನ ಎರಡನೇ ವರ್ಷದ ಹುಟ್ಟುಹಬ್ಬವನ್ನು ಹೊಸ ಪಾಲಕರೊಂದಿಗೆ ಆಚರಿಸಿತು.
ನಗು, ಕಣ್ಣೀರು ಮತ್ತು ಸಂತೋಷದ ಮಿಶ್ರಣವಾಗಿದ್ದ ಈ ಕ್ಷಣ ಎಲ್ಲರ ಮನಸ್ಸನ್ನು ಸ್ಪರ್ಶಿಸಿತು. ಕಳೆದ ಎರಡು ವರ್ಷಗಳಿಂದ ಟ್ರಸ್ಟ್‌ನ ಆಶ್ರಯದಲ್ಲಿ ಬೆಳೆದ ಈ ಹೆಣ್ಣು ಮಗು, ಜನ್ಮದಿಂದಲೇ ಕೆಲವು ವೈದ್ಯಕೀಯ ಸವಾಲುಗಳನ್ನು ಎದುರಿಸುತ್ತಿದ್ದಳು. ಆಕೆಯ ಆರೈಕೆ, ಶಿಕ್ಷಣ ಮತ್ತು ವೈದ್ಯಕೀಯ ಚಿಕಿತ್ಸೆಗೆ ತವರು ಸಂಸ್ಥೆಯವರು ಶ್ರಮಿಸಿದ್ದಾರೆ.
ಅಮೆರಿಕದ ದಂಪತಿ ವಿಲಿಯಮ್ ಮತ್ತು ಆಶ್ಲೀ ಮಗುವಿನ ಬಗ್ಗೆ ತಿಳಿದ ಬಳಿಕ, ಕಾನೂನಿನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಭಾರತದ ಸಂಬಂಧಿತ ಇಲಾಖೆಗಳ ಅನುಮೋದನೆ ಪಡೆದು ಆಕೆಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡರು.
ದತ್ತು ಪ್ರಕ್ರಿಯೆ ಪೂರ್ಣಗೊಂಡ ನಂತರ, ಮಗಳ ಹುಟ್ಟುಹಬ್ಬವನ್ನು ಹಾಸನದ ಟ್ರಸ್ಟ್ ಆವರಣದಲ್ಲೇ ಹೃದಯಸ್ಪರ್ಶಿಯಾಗಿ ಆಚರಿಸಲಾಯಿತು. ಕೇಕ್ ಕತ್ತರಿಸಿದ ಪುಟ್ಟ ಮಗಳು ನಗುಮೊಗದಿಂದ ಎಲ್ಲರಿಗೂ ಸಂತೋಷ ಹಂಚಿದಳು. ವಿಲಿಯಮ್ ಮತ್ತು ಆಶ್ಲೀ ದಂಪತಿ ಈ ಮಗಳು ನಮ್ಮ ಜೀವನದ ಅತಿ ಅಮೂಲ್ಯ ವರ ಎಂದು ಭಾವುಕರಾದರು.
ಸಂಸ್ಥೆ ಮುಖ್ಯಸ್ಥರಾದ ಡಾ.ಪಾಲಾಕ್ಷ, ಟ್ರಸ್ಟಿ ಮಧುಪ್ರಿಯ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಶ್ರೀ ರಂಗ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ರವಿ, ರಂಗಸ್ವಾಮಿ ಇತರರು ಇದ್ದರು.