

ಕಲಬುರಗಿ: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚಿಸುವ ಮೂಲಕ ಸದ್ರಢ ದೇಶ ನಿರ್ಮಿಸಿದರು ಎಂದು ಉಪನ್ಯಾಸಕ ನಿಜಲಿಂಗ ದೊಡ್ಮನಿ ಅಭಿಪ್ರಾಯಪಟ್ಟರು.
ನಗರದ ಗುಬ್ಬಿ ಕಾಲೋನಿಯಲ್ಲಿ ಏರ್ಪಡಿಸಿದ್ದ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ೧೩೪ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಧ್ಯಮ ವರ್ಗದ ಜನರು ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸಲು ಶ್ರಮಿಸಬೇಕು. ಪ್ರಸ್ತುತ ಸಂದರ್ಭದಲ್ಲಿ ಬಡವರು ಬದಲಾಗಬೇಕಾದರೆ ಶಿಕ್ಷಣ ಮುಖ್ಯವಾಗಿದೆ.
ದೇಶದ ಸಂಪತ್ತು ಹೇಗೆ ಸಂರಕ್ಷಣೆ ಮಾಡಿಕೊಳ್ಳಬೇಕು ಹಾಗೂ ನದಿಗಳ ನೀರನ್ನು ಹೇಗೆ ಬಳಕೆ ಮಾಡಿಕೊಳ್ಳಬೇಕು ಎನ್ನುವ ಜ್ಞಾನವು ಅವರಲ್ಲಿತ್ತು. ಆ ಕಾರಣಕ್ಕಾಗಿಯೇ ಅವರು ನದಿ ಜೋಡಣೆ ಮತ್ತು ಡ್ಯಾಂಗಳಿಗೆ ಆಧ್ಯತೆ ನೀಡಿದ್ದರು. ಅಂತಹ ಜ್ಞಾನಿಯ ಮಕ್ಕಳಾದ ನಾವುಗಳು ಒಳ್ಳೆಯ ಓದಿಗೆ ಹೆಚ್ಚಿನ ಗಮನ ಹರಿಸಬೇಕು. ಡಾ.ಬಾಬಾ ಸಾಹೇಬರ ವಿಚಾರಗಳು ಮರೆಮಾಚಲಾಗುತ್ತಿದೆ. ದೇಶ ಯಾವ ಕಡೆಗೆ ಸಾಗುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಂಡು ಯುವ ಪೀಳಿಗೆ ಹೆಜ್ಜೆ ಇಡಬೇಕಾಗಿದೆ. ದೇಶದ ಸಂವಿಧಾನ ರಚಿಸುವುದರ ಮೂಲಕ ದೇಶದ ಎಲ್ಲ ಜಾತಿ ಧರ್ಮ ವರ್ಗದ ಜನರಿಗೆ ನ್ಯಾಯ ಒದಗಿಸಿದ್ದಾರೆ. ಬಾಬಾ ಸಾಹೇಬರ ಹಾದಿಯಲ್ಲಿ ನಡೆಯುತ್ತಿರುವ ನಾವುಗಳು ಮೌಢ್ಯತೆಯಿಂದ ಹೊರಬರಬೇಕು ಎಂದರು.
ವಿಶೇಷವಾಗಿ ಮಹಿಳೆಯರು ದೇವರ ಹೆಸರಿನ ಮೇಲೆ ಹಣ ಖರ್ಚು ಮಾಡದೆ ಮಕ್ಕಳ ಶಿಕ್ಷಣಕ್ಕಾಗಿ ಹಣ ಖರ್ಚು ಮಾಡಬೇಕು. ವಿಶ್ವದ ಬಹುತೇಕ ದೇಶಗಳು ಡಾ.ಅಂಬೇಡ್ಕರ್ ಅವರನ್ನು ಗುರುತಿಸುತ್ತಿರುವುದು ಅವರ ಪಾಂಡಿತ್ಯಕ್ಕೆ ಎನ್ನುವುದು ಮರೆಯಬಾರದು ಎಂದರು.
ಜಯ0ತ್ಯುತ್ಸವ ಸಮಿತಿ ಅಧ್ಯಕ್ಷ ವಿಕಾಸ ಕರಣಿಕˌ ಡಾ. ಬಸವರಾಜ ಅಷ್ಟಗಿˌ ಡಾ.ಶಿವಾನಂದ ಕಡಗಂಚಿˌ ಡಾ. ಅಶೋಕ ದೊಡ್ಮನಿˌ ರಾಜಕುಮಾರ ಹೊಡಲ್ˌ ಸಂಪತಕುಮಾರ ವಳಕೇರಿˌ ಶಿವು ನಾಟಿಕಾರˌ ಅವಿನಾಶ ಒಂಟಿˌ ಚಂದಪ್ಪ ಒಂಟಿˌ ಶಿವೊಗೆಪ್ಪ ದೇವರˌ ಸಂಜೀವ ಕುಮಾರ ಗಣಜಲಕೇಡˌ ಮರಲಿಂಗˌ ಶಿವರಾಯ ಗೊಟ್ಟೂರˌ ಮಲ್ಲಿಕಾರ್ಜುನ ಸೇರಿದಂತೆ ಇತರರು ಇದ್ದರು.