ಅರ್ಚಕರಹಳ್ಳಿಯಲ್ಲಿ ಅಂಬೇಡ್ಕರ್ ಭವನ: ಯಶವಂತ್ ವಿ. ಗುರುಕರ್

24-09-rama-Dc meeting
Published on

ರಾಮನಗರ:  ಇಲ್ಲಿನ ಅರ್ಚಕರ ಹಳ್ಳಿ ಗ್ರಾಮದಲ್ಲಿ ಸಕಲ ಸೌಕರ್ಯವುಳ್ಳ ಸುಸಜ್ಜಿತ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ 30 ಗುಂಟೆ ಜಮೀನು ಕಾಯ್ದಿರಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಭವ್ಯವಾದ ಭವನ ನಿರ್ಮಿಸಲಾಗುವುದು ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ತಿಳಿಸಿದರು.

ಅವರು ಸೆ.24ರ ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ (ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ (ದೌರ್ಜನ್ಯ ಪ್ರತಿಬಂಧ) ತಿದ್ದುಪಡಿ ಕಾಯ್ದೆ 2015ರ ಅನುಷ್ಠಾನ ಸಂಬಂಧ) ಸಂಬಂಧ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಮನಗರ ತಾಲೂಕು ಕಸಬಾ ಹೋಬಳಿಯ ಅರ್ಚಕರ ಹಳ್ಳಿ ಗ್ರಾಮದ ಸರ್ವೆ ನಂಬರ್ 104 ರಲ್ಲಿ 30 ಗುಂಟೆ ಜಮೀನನ್ನು ಕಾಯ್ದಿರಿಸಲಾಗಿದೆ, ಈ ಜಮೀನಿಗೆ ಕೂಡಲೇ ಆರ್.ಟಿ.ಸಿ ಮಾಡಿಕೊಡುವಂತೆ ಉಪವಿಭಾಗಾಧಿಕಾರಿ ಬಿನೋಯ್ ಅವರಿಗೆ ಸೂಚಿಸಿದ ಜಿಲ್ಲಾಧಿಕಾರಿಯವರು ಭವನ ನಿರ್ಮಾಣಕ್ಕೆ ಅನುದಾನ ಲಭ್ಯವಿದ್ದು ಮುಂಬರುವ ದಿನಗಳಲ್ಲಿ ಅರ್ಚಕರಹಳ್ಳಿಯಲ್ಲಿ ಭವ್ಯವಾದ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣವಾಗಲಿದೆ ಎಂದರು.

ಅದೇ ರೀತಿ ರಾಮನಗರ ತಾಲೂಕು ಕಸಬಾ ಹೋಬಳಿಯ ಲಕ್ಕಸಂದ್ರ ಗ್ರಾಮದ ಸರ್ವೆ ನಂಬರ್ 35ರಲ್ಲಿ 0.25 ಗುಂಟೆ ಜಮೀನನ್ನು ಲಕ್ಕಸಂದ್ರ ಗ್ರಾಮದ ಸಾರ್ವಜನಿಕ ಸ್ಮಶಾನಕ್ಕಾಗಿ ಭೂಮಿಯನ್ನು ಸಹ ಕಾಯ್ದಿರಿಸಲಾಗಿದೆ ಎಂದವರು ತಿಳಿಸಿದರು.

ಬೆಂಗಳೂರು ದಕ್ಷಿಣ ಜಿಲ್ಲಾ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ (ದೌರ್ಜನ್ಯ ಪ್ರತಿಬಂಧ) ತಿದ್ದುಪಡಿ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳಲ್ಲಿನ ಸಂತ್ರಸ್ತರಿಗೆ ಅಗತ್ಯ ದಾಖಲೆಗಳನ್ನು ಪಡೆದು ಪರಿಶೀಲಿಸಿ, ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 7 ದಿನದೊಳಗೆ ಪರಿಹಾರ ಮೊತ್ತ ಮಂಜೂರು ಮಾಡಲಾಗುತ್ತಿದೆ, ಪರಿಹಾರ ನೀಡಿಕೆ ಹಂತದ ಯಾವುದೇ ಪ್ರಕರಣಗಳು ಬಾಕಿ ಇರುವುದಿಲ್ಲ,  ಅದೇ ರೀತಿ ಇತರೇ ಪುನರ್ವಸತಿ ಸವಲತ್ತುಗಳನ್ನು ಒದಗಿಸಲಾಗುತ್ತಿದೆ ಹಾಗೂ ದೌರ್ಜನ್ಯದಲ್ಲಿ ಕೊಲೆ ಪ್ರಕರಣಗಳಲ್ಲಿ ಅರ್ಹ ಪ್ರಕರಣಗಳಲ್ಲಿನ ಅವಲಂಬಿತರುಗಳಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಮತ್ತು ಮಾಸಿಕ ಪಿಂಚಣಿ ಸೌಲಭ್ಯ ಮಂಜೂರು ಮಾಡಲಾಗುತ್ತಿದೆ ಹಾಗೂ ಸರ್ಕಾರದ ಮಾರ್ಗಸೂಚಿಯಂತೆ, ಕೊಲೆ ಪ್ರಕರಣಗಳಲ್ಲಿ ಸಂತ್ರಸ್ತರುಗಳಿಗೆ ಜಮೀನು ಮಂಜೂರು ಮಾಡುವ ಪ್ರಸ್ತಾವನೆಯನ್ನು ಆದ್ಯತೆ ಮೇಲೆ ಪರಿಗಣಿಸಿ ಜಮೀನು ಮಂಜೂರು ಮಾಡಲಾಗುತ್ತಿದೆ ಎಂದರು.

ಕುಂಭಾಪುರ ಗ್ರಾಮದಲ್ಲಿ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸ್ಥಳ ಪರಿಶೀಲನೆ ನಡೆಸಿ ಕ್ರಮ ವಹಿಸುವಂತೆ ಸೂಚಿಸಿದ ಅವರು ವಿವಿಧ ಬ್ಯಾಂಕುಗಳು ನೀಡುವ ಸಾಲ ಸೌಲಭ್ಯ ಯೋಜನೆಯಡಿ ಬ್ಯಾಂಕುಗಳು ಅಗತ್ಯ ಸಹಕಾರ ನೀಡದೇ ಇದ್ದಲ್ಲೀ ಲಿಖಿತವಾಗಿ ದೂರು ಸಲ್ಲಿಸಿದರೆ ಲೀಡ್ ಬ್ಯಾಂಕ್ ಮ್ಯಾನೇಜರ್ ಜೊತೆ ಚರ್ಚಿಸಿ ಅವುಗಳಿಗೆ ಪರಿಹಾರ ಕಲ್ಪಿಸಲಾಗುವುದು, ಜಿಲ್ಲೆಯಲ್ಲಿ 456 ಉಪ ಗ್ರಾಮಗಳನ್ನು ರಚಿಸಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್‌ಗೌಡ ಅವರು ಮಾತನಾಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅನ್ಮೋಲ್ ಜೈನ್, ಉಪವಿಭಾಗಾಧಿಕಾರಿ ಬಿನೋಯ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಶಿವಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರುಗಳಾದ ಚೆಲುವರಾಜು, ಕುಂಭಾಪುರ ಬಾಬು, ಮಹೇಶ್, ರೋಹಿತ್, ಶಿವಣ್ಣ, ಶಿವಕುಮಾರ್, ಶಿವರಾಜು, ಗೋಪಾಲಕೃಷ್ಣ ಸಭೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net