ವಿದ್ಯಾರ್ಥಿಗಳಿಗೆ ಚೈತನ್ಯಶೀಲತೆ ಮುಖ್ಯ: ಅಮನ್​ ಗುಪ್ತಾ ಕಿವಿಮಾತು

Aman Gupta
Published on

ಬೆಂಗಳೂರು: ವಿದ್ಯಾರ್ಥಿಗಳು ಸದಾ ಚೈತನ್ಯಯುತವಾಗಿರಬೇಕು. ಆಗ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಬೋಟ್​ ಲೈಫ್​ಸ್ಟೈಲ್ ಸಹ ಸಂಸ್ಥಾಪಕ ಅಮನ್​ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.

ರೇವಾ ವಿಶ್ವವಿದ್ಯಾಲಯದ ಸೌಗಂಧಿಕಾ ಸಭಾಂಗಣದಲ್ಲಿ 2024-25ರ ಶೈಕ್ಷಣಿಕ ವರ್ಷದ ತಾಂತ್ರಿಕೇತರ ಪೋಗ್ರಾಮ್​ಗಳ ಹೊಸ ಬ್ಯಾಚ್​ ವಿದ್ಯಾರ್ಥಿಗಳಿಗೆ ಬುಧವಾರ ಆಯೋಜಿಸಿದ್ದ ಪರಿಚಯಾತ್ಮಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಪೂರ್ಣ ತೊಡಗಿಸುವಿಕೆಯೊಂದಿಗೆ ಪ್ರತಿ ಕೆಲಸವನ್ನು ನಿಭಾಯಿಸಬೇಕು. ನನ್ನ 35 ವರ್ಷ ವಯಸ್ಸಿನವರೆಗೂ ವೃತ್ತೀಜಿವನದಲ್ಲಿ ಅನಿಶ್ಚಿತತೆಯಿತ್ತು. ಪದವಿ ಪೂರ್ಣಗೊಂಡ ಬಳಿಕ ಸಿಎ ಮಾಡಿದೆ. ನಂತರ ಆರಂಭಿಸಿದ ಐದು ನವೋದ್ಯಮಗಳಲ್ಲಿ ಯಾವುದೂ ಯಶಸ್ವಿಯಾಗಲಿಲ್ಲ. ನಂತರ ಹುಟ್ಟಿದ ಬೋಟ್​ ಲೈಫ್​ಸ್ಟೆಲ್​ ಯಶಸ್ವಿಯಾಯಿತು. ವೈಫಲ್ಯಗಳನ್ನು ಕಲಿಕೆಯ ಅನುಭವಗಳಾಗಿ ಸ್ವೀಕರಿಸುವುದು ಅಗತ್ಯ ಎಂದರು.

ರೇವಾ ವಿವಿ ಕುಲಾಧಿಪತಿ ಡಾ.ಪಿ.ಶ್ಯಾಮರಾಜು ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಜ್ಜಾಗಬೇಕು. ಈ ನಿಟ್ಟಿನಲ್ಲಿ ಸಾಂಪ್ರದಾಯಿಕ ಶೈಕ್ಷಣಿಕ ಮಿತಿಗಳೊಂದಿಗೆ ಸಮಗ್ರ ಕಲಿಕೆಗೆ ಒತ್ತು ನೀಡುತ್ತೇವೆ ಎಂದು ಹೇಳಿದರು.

ವಿವಿ ಚಾನ್ಸಲರ್​ ಪ್ರೊ. ಉಮೇಶ್​ ಎಸ್​. ರಾಜು, ಡಾ.ಎನ್​. ರಮೇಶ್​, ಡಾ. ಆರ್​.ಸಿ. ಬಿರಾದಾರ್​, ಡಾ. ಎ.ಶುಭಾ, ಡಾ. ಸಂಜಯ್​ ಚಿಟ್ನಿಸ್​ ಮತ್ತಿತರರು ಕಾರ್ಯಕ್ರಮದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net