

ಮೂಡುಬಿದಿರೆ: ವಿದ್ಯಾರ್ಥಿಗಳು ತಮ್ಮ ಪರಂಪರೆ ಮತ್ತು ಮೌಲ್ಯಗಳಿಂದ ಪ್ರೇರಣೆ ಪಡೆದು ಸಮೃದ್ಧ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಜಾಗತಿಕ ಶೈಕ್ಷಣಿಕ ಕೇಂದ್ರಗಳ ಸಹಕಾರದ ಮೂಲಕ ನಮ್ಮ ಪ್ಯಾರಾಮೆಡಿಕಲ್ ಕೋರ್ಸ್‌ಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬೆಳಸಬೇಕಿದೆ ಎಂದು ಮಂಗಳೂರಿನ ಎ.ಜೆ. ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್ ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ ಕೆ. ಹೇಳಿದರು.
ಆಳ್ವಾಸ್ ಫಿಜಿಯೋಥೆರಪಿ, ನರ್ಸಿಂಗ್, ನರ್ಸಿಂಗ್ ಸೈನ್ಸಸ್ ಮತ್ತು ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜುಗಳು ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ರಾಜೀವ್ ಗಾಂಧಿ ವಿಜ್ಞಾನ ವಿವಿಗಳ ಸೆನೆಟ್ ಸದಸ್ಯೆ ವೈಶಾಲಿ ಶ್ರೀಜಿತ್ ಮಾತನಾಡಿ, ಯುವ ಜನರು ಹೆಚ್ಚಾಗಿ ಆರೋಗ್ಯಕ್ಕೆ ಹಾನಿಕಾರಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ತಳಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ತುರ್ತು ಅವಶ್ಯಕತೆ ಇದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ ಡಾ.ವಿನಯ್ ಆಳ್ವ ಮಾತನಾಡಿದರು. ಕಾಲೇಜು ವಾರ್ಷಿಕ ಬಿತ್ತಿಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಆಳ್ವಾಸ್ ಹೆಲ್ತ್ ಸೆಂಟರ್ ಸ್ತ್ರೀರೋಗ, ಪ್ರಸೂತಿ ತಜ್ಞೆ ಡಾ.ಹನಾ ಶೆಟ್ಟಿ, ಪ್ರಾಂಶುಪಾಲ ಡಾ.ಶಂಕರ ಶೆಟ್ಟಿ, ಡಾ.ಕ್ಷಮಾ ಶೆಟ್ಟಿ, ಪ್ರೊ.ಶೈಲಾ, ಪ್ರೊ.ಆದರ್ಶ ಹೆಗ್ಡೆ, ಪ್ರೊ.ರೇಣುಕಾ, ಆಡಳಿತಾಧಿಕಾರಿ ಹೇಮಂತ್ ಕೆ. ಉಪಸ್ಥಿತರಿದ್ದರು. ಡಾ.ಶಂಕರ ಶೆಟ್ಟಿ ಸ್ವಾಗತಿಸಿದರು. ಡಾ.ಕ್ಷಮಾ ಶೆಟ್ಟಿ ವಂದಿಸಿದರು. ಡಾ ಸೌಧ ಕಾರ್ಯಕ್ರಮ ನಿರೂಪಿಸಿದರು.
ಜೀವನದಲ್ಲಿ ಮುನ್ನಡೆಯಲು ಮಹತ್ವಾಕಾಂಕ್ಷೆ, ಶಿಸ್ತು ಮತ್ತು ಸ್ಥೈರ್ಯ ಸಹಕಾರಿ. ಮಹತ್ವಾಕಾಂಕ್ಷೆ, ಗುರಿಯತ್ತ ಪ್ರೇರೇಪಿಸಿದರೆ, ಶಿಸ್ತು ಗಮನವನ್ನೂ ಕೇಂದ್ರೀಕರಿಸಲು ಸಹಕಾರಿ, ಮತ್ತು ಸ್ಥೈರ್ಯ ಸವಾಲು ಗೆಲ್ಲಲು ಶಕ್ತಿ ಒದಗಿಸುತ್ತದೆ. ಡಾ.ವಿನಯ್ ಆಳ್ವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ