ಆಲೂರು ಪ.ಪಂ. ಅಧ್ಯಕ್ಷರು ಯಾರು?

24_HSN_09
Published on

ಆಲೂರು: ಆಲೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಆ.26ರಂದು ನಡೆಯಲಿದ್ದು, ಮುಂದಿನ ಅಧ್ಯಕ್ಷ, ಉಪಾಧ್ಯಕ್ಷರು ಯಾರಾಗಲಿದ್ದಾರೆ? ಎಂಬ ಕುತೂಹಲ ಪಟ್ಟಣದಲ್ಲಿ ಗರಿಗೆದರಿದೆ.


ಕಳೆದ 15 ತಿಂಗಳಿನಿಂದ ಅಧ್ಯಕ್ಷ, ಉಪಾಧ್ಯಕ್ಷರಿಲ್ಲದೆ ಕಳೆಗುಂದಿದ್ದ ಪುರಸಭೆಗೆ ಹೊಸ ಅಧ್ಯಕ್ಷರ ಆಯ್ಕೆಗೆ ಕ್ಷಣಗಣನೆ ಆರಂಭವಾಗಿದೆ. ಸರ್ಕಾರದ ಮೀಸಲಾತಿ ನಿಗದಿಯಂತೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ನಾಲ್ವರು ಮಹಿಳಾ ಸದಸ್ಯರು ಅಧ್ಯಕ್ಷ ಗಾದಿಗೇರಲು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ.


ಆಲೂರು ಪಟ್ಟಣ ಪಂಚಾಯಿತಿ 11 ಸದಸ್ಯ ಬಲ ಹೊಂದಿದೆ. ಅನಾರೋಗ್ಯದಿಂದ ಅರುಣ ನಾಯಕ್ ನಿಧನ ಹೊಂದಿದ ಹಿನ್ನೆಲೆಯಲ್ಲಿ ಸದ್ಯ ಸದಸ್ಯರ ಸಂಖ್ಯೆ 10ಕ್ಕೆ ಇಳಿಕೆಯಾಗಿದೆ. ಜೆಡಿಎಸ್ 4, ಬಿಜೆಪಿ 2, ಕಾಂಗ್ರೆಸ್ 1 ಹಾಗೂ ಮೂವರು ಪಕ್ಷೇತರ ಸದಸ್ಯರಿದ್ದಾರೆ.


ಪಕ್ಷೇತರ ಮೂವರು ಸದಸ್ಯರು, ಜೆಡಿಎಸ್‌ನ ಒಬ್ಬರು, ಬಿಜೆಪಿಯ ಇಬ್ಬರು ಸದಸ್ಯರು ಕಾಂಗ್ರೆಸ್ ಜತೆಗೆ ಗುರುತಿಸಿಕೊಂಡಿರುವುದರಿಂದ ಕಾಂಗ್ರೆಸ್ ಶಕ್ತಿ ವೃದ್ಧಿಯಾಗಿದೆ ಎನ್ನಲಾಗಿದೆ. ಕೆಲವು ಸದಸ್ಯರು ಆಲೂರಿನಲ್ಲಿ ಇದ್ದರೆ, ಇನ್ನು ಕೆಲ ಸದಸ್ಯರು ಹೋಟೆಲ್, ರೆಸಾರ್ಟ್‌ನಲ್ಲಿ ಬೀಡು ಬಿಟ್ಟಿದ್ದಾರೆಂದು ತಿಳಿದುಬಂದಿದೆ.


ಈ ಹಿಂದೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿತ್ತು. ಈ ಬಾರಿ ಎರಡೂ ಸ್ಥಾನ ಮಹಿಳೆಗೆ ಮೀಸಲಾಗಿರುವುದರಿಂದ ಐವರು ಮಹಿಳೆಯರಲ್ಲಿ ಇಬ್ಬರು ಅಧಿಕಾರ ಹಿಡಿಯಲಿದ್ದಾರೆ. ಮೊದಲ ಅವಧಿಯಲ್ಲಿ ಅಧ್ಯಕ್ಷ ಸ್ಥಾನವನ್ನು 10ನೇ ವಾರ್ಡಿನ ಸದಸ್ಯೆ ರಾಣಿ ಹಾಗೂ 9ನೇ ವಾರ್ಡಿನ ವೇದಾ ಸುರೇಶ್ ಅವರಿಗೆ ಹಂಚಿಕೆ ಮಾಡಲಾಗಿತ್ತು. ವೇದಾ ಸುರೇಶ್ ಅಧ್ಯಕ್ಷರಾಗಿ 30 ತಿಂಗಳ ಅಧಿಕಾರ ಅನುಭವಿಸಿದ್ದಾರೆ. ಒಪ್ಪಂದದಂತೆ ರಾಣಿ ಅವರಿಗೆ ಅಧಿಕಾರ ಬಿಟ್ಟುಕೊಡಬೇಕಿತ್ತಾದರೂ ಅವರು ಒಪ್ಪಂದಕ್ಕೆ ಸೊಪ್ಪು ಹಾಕಲಿಲ್ಲ. ಜತೆಗೆ ವರಿಷ್ಠರ ನಡೆಗೆ ಇತರ ಸದಸ್ಯರೂ ಅಸಮಾಧಾನ ಹೊಂದಿದ್ದಾರೆ. ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನವನ್ನು ನಿಂಗರಾಜು ಹಾಗೂ ತೌಫಿಕ್ ಅಹಮದ್ ಪಕ್ಷದ ಆಂತರಿಕ ಒಪ್ಪಂದಂತೆ ಹಂಚಿಕೆ ಮೂಲಕ ಅವಧಿ ಪೂರ್ಣಗೊಳಿಸಿದ್ದರು.


ಸದ್ಯ ಅಧ್ಯಕ್ಷ ಸ್ಥಾನ ರೇಸ್‌ನಲ್ಲಿ ಜೆಡಿಎಸ್ ರಾಣಿ, ವೇದಾ ಸುರೇಶ್, ಕಾಂಗ್ರೆಸ್‌ನಿಂದ ತಾಹಿರಾ ಬೇಗಂ ಇದ್ದಾರೆ. ಕಳೆದ ಅವಧಿಯಲ್ಲಿ ಅಧಿಕಾರ ಅನುಭವಿಸಿದ 9ನೇ ವಾರ್ಡ್ ವೇದಾ ಸುರೇಶ್ ಹಾಗೂ 10ನೇ ವಾರ್ಡಿನ ರಾಣಿ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಪೈಪೋಟಿ ನಡೆಸಿದ್ದಾರೆ. ವೇದಾ ಅವರಿಗೆ ಅವಕಾಶ ನೀಡಿರುವುದರಿಂದ ಅವರ ಹೊರತುಪಡಿಸಿ ಬೇರೆಯವರಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಆಗ್ರಹವು ಜೆಡಿಎಸ್ ವಲಯದಲ್ಲಿ ಕೇಳಿಬಂದಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಮೂರನೇ ವಾರ್ಡಿನಿಂದ ಆಯ್ಕೆಯಾಗಿರುವ ಪರಿಶಿಷ್ಟ ಜಾತಿಗೆ ಸೇರಿದ ಜಯಮ್ಮ ಅವರು ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಪ್ರಯತ್ನ: ಶತಾಯಗತಾಯ ಪಟ್ಟಣ ಪಂಚಾಯಿತಿ ಅಧಿಕಾರ ಹಿಡಿಯಲೇಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್ ಮುಖಂಡರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ವಿಧಾನಸಭೆ ಪರಾಜಿತ ಅಭ್ಯರ್ಥಿ ಮುರಳಿ ಮೋಹನ್ ಅವರು ಚುನಾವಣೆಯ ಮೇಲುಸ್ತುವಾರಿ ವಹಿಸಿದ್ದು, ಬಿಜೆಪಿ, ಪಕ್ಷೇತರ ಸದಸ್ಯರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ. ಬಹುಮತ ಹೊಂದಿದ್ದರೂ ಜೆಡಿಎಸ್‌ನ ನಾಯಕರು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net