ಪ್ಲಾಸ್ಟಿಕ್‌ಗೆ ಪರ್ಯಾಯಗಳಿವೆ : ಬಳಕೆಗೆ ಮನಸ್ಸು ಮಾಡಬೇಕಷ್ಟೇ

Plastic
Published on

ಇಂದು ವಿಶ್ವ ಪರಿಸರ ದಿನ

‘ಪ್ಲಾಸ್ಟಿಕ್ ಮಾಲಿನ್ಯವನ್ನು ಮಣಿಸಿ’ ಎಂಬ ಘೋಷವಾಕ್ಯದೊಂದಿಗೆ ಈ ವರ್ಷ ವಿಶ್ವ ಪರಿಸರ ದಿನ (ಜೂ.5) ಆಚರಿಸಲಾಗುತ್ತಿದೆ. ಈ ಅಭಿಯಾನವು ಪ್ಲಾಸ್ಟಿಕ್ ತ್ಯಾಜ್ಯವು ಪರಿಸರ ವ್ಯವಸ್ಥೆ, ವನ್ಯಜೀವಿಗಳು ಮತ್ತು ಮಾನವನ ಆರೋಗ್ಯದ ಮೇಲೆ ಬೀರುವ ಹಾನಿಕಾರಕ ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಗುರಿ ಹೊಂದಿದೆ.

ಪಂಕಜ ಕೆ.ಎಂ. ಬೆಂಗಳೂರು

ಪರಿಸರದ ಬಗ್ಗೆ ಎಲ್ಲರೂ ಮಾತನಾಡುವವರೇ. ಆದರೆ, ರಕ್ಷಣೆ ಮಾಡುವವರು ಯಾರು? ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆ (ಏಕ ಬಳಕೆಯ ಪ್ಲಾಸ್ಟಿಕ್)ಯನ್ನು ಸರ್ಕಾರ ನಿಷೇಧಿಸಿ ವರ್ಷಗಳು ಕಳೆದರೂ ಅದಿನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ. ಬದಲಿಗೆ ಒಂದಲ್ಲಾ ಒಂದು ರೀತಿ ಪರಿಸರವನ್ನು ಪ್ಲಾಸ್ಟಿಕ್ ಆವರಿಸುತ್ತಲೇ ಇದೆ. ಅದೇ ರೀತಿ ಜನರು ಪ್ಲಾಸ್ಟಿಕ್‌ನ ಅಪಾಯ ತಿಳಿದಿದ್ದರೂ ಬಳಸುತ್ತಿದ್ದಾರೆ. ನಮ್ಮ ಎದುರು ಪ್ಲಾಸ್ಟಿಕ್‌ಗೆ ಹಲವು ಪರ್ಯಾಯಗಳಿವೆ, ಅದರ ಬಳಕೆಗೆ ಮನಸ್ಸು ಮಾಡಬೇಕಿದೆ.

ಪ್ಲಾಸ್ಟಿಕ್ ಕೆಲ ಸಂದರ್ಭದಲ್ಲಿ (ವೈದ್ಯಕೀಯ ಕ್ಷೇತ್ರ ಹಾಗೂ ಕೆಲ ಸಂಸ್ಕರಿತ ಆಹಾರ ಪದಾರ್ಥಗಳ ಸಂಗ್ರಹಣೆ ಇತ್ಯಾದಿ) ಅವಶ್ಯಕತೆಯೇ ಹೊರತು ಅನಿವಾರ್ಯವಲ್ಲ. ಆದರೆ ಅನಿವಾರ್ಯವಲ್ಲದ ಕಡೆಗಳಲ್ಲೂ ಬಳಕೆ ಮಾಡಲಾಗುತ್ತಿದೆ. ಇದನ್ನು ನಿರ್ಬಂಧಿಸದ ಹೊರತು ಪರಿಸರ ರಕ್ಷಣೆ ಕಷ್ಟಸಾಧ್ಯ. ಹಾಗಾಗಿ ಕಾನೂನು ಒಂದರಿಂದ ಪ್ಲಾಸ್ಟಿಕ್ ನಿಷೇಧ ಸಾಧ್ಯವಿಲ್ಲ. ಸ್ವಯಂ ನಿಯಂತ್ರಣ ಅತ್ಯವಶ್ಯ ಎನ್ನುತ್ತಾರೆ ಪರಿಸರ ತಜ್ಞರು.

ಜಾಗತಿಕವಾಗಿಯೂ ಪ್ರತಿ ವರ್ಷ 380 ಮಿಲಿಯನ್ ಟನ್‌ಗಳಿಗೂ ಅಧಿಕ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದೆ. ಕೆಲವು ವರದಿಗಳ ಪ್ರಕಾರ ಅವುಗಳಲ್ಲಿ ಶೇ.50 ಏಕ-ಬಳಕೆ ಆಗಿವೆ. ಇಂದು ಎಲ್ಲೆಂದರಲ್ಲಿ ಎಸೆಯುವ ಪ್ಲಾಸ್ಟಿಕ್ ತ್ಯಾಜ್ಯದಿಂದಾಗಿ ಪರಿಸರ ಮಾತ್ರವಲ್ಲ, ಜನ-ಜಾನುವಾರುಗಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿವೆ.

ಮಾರಕ ಪ್ಲಾಸ್ಟಿಕ್‌ಗಳು:

ಪ್ಲಾಸ್ಟಿಕ್ ಕ್ಯಾಂಡಿ ಕಡ್ಡಿಗಳು, ಕಪ್, ಚಮಚ, ಪ್ಲೇಟ್‌ಗಳು, ಟ್ರೇಗಳು, ಸ್ಟ್ರಾಗಳು, ತಿಂಡಿ ಬಾಕ್ಸ್‌ಗಳು, ಕ್ಯಾರಿ ಬ್ಯಾಗ್ ಸೇರಿ ಹಲವು ಬಗೆಯ ಪ್ಲಾಸ್ಟಿಕ್ ವಸ್ತುಗಳು ನಿತ್ಯವೂ ಬಳಕೆಯಾಗುತ್ತಿವೆ. ಇವು ಪರಿಸರಕ್ಕೆ ಹಾಗೂ ಜೀವಿಗಳ ಆರೋಗ್ಯಕ್ಕೆ ಮಾರಕವಾಗಿವೆ. ಹಾಗಾಗಿ ಪ್ಲಾಸ್ಟಿಕ್ ಉತ್ಪನ್ನಗಳ ಉತ್ಪಾದನೆಗೆ ಕಡಿವಾಣ ಹಾಕುವುದರ ಜತೆಗೆ ಪರ್ಯಾಯವಾಗಿರುವ ವಸ್ತುಗಳ ಉತ್ಪಾದನೆ ಮತ್ತು ಬಳಕೆಗೆ ಉತ್ತೇಜನ ನೀಡುವುದರೊಂದಿಗೆ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ಪರಿಸರ ತಜ್ಞರು ಸಲಹೆ ನೀಡಿದ್ದಾರೆ.

ಪರ್ಯಾಯ ಬಳಕೆಗಳು

* ಕವರ್‌ಗಳ ಬದಲಿಗೆ ಬಟ್ಟೆ ಚೀಲ, ಸೆಣಬಿನ ಚೀಲ, ವೈಯರ್ ಬ್ಯಾಗ್

* ತಿಂಡಿ ಪೊಟ್ಟಣಗಳ ಬದಲಿಗೆ ಬಾಳೆ ಎಲೆ ಇಲ್ಲವೇ ಪೇಪರ್ ಪೊಟ್ಟಣ

* ಇಯರ್ ಬಡ್ಸ್‌ಗಳ ಬದಲಿಗೆ ಮರದ ಕಡ್ಡಿಗಳು

* ಪ್ಲಾಸ್ಟಿಕ್ ಧ್ವಜಗಳ ಬದಲಿಗೆ ಬಟ್ಟೆಯಿಂದ ತಯಾರಿಸಿದ ಧ್ವಜ, ಬಟ್ಟೆ ಬ್ಯಾನರ್

* ಪ್ಲಾಸ್ಟಿಕ್ ತಟ್ಟೆ, ಬಟ್ಟಲು, ಬೌಲ್, ಚಮಚ ಬದಲಾಗಿ ಬಾಳೆ ಎಲೆ, ಅಡಕೆ ಹಾಳೆಯ ಉತ್ಪನ್ನ, ಬಿದಿರಿನ ಉತ್ಪನ್ನ

* ಪ್ಲಾಸ್ಟಿಕ್ ಲೋಟಗಳ ಬದಲಿಗೆ ಮಣ್ಣಿನ ಲೋಟ, ತೆಂಗಿನ ಚಿಪ್ಪಿನ ಕಪ್‌ಗಳು, ಸ್ಟೀಲ್ ಹಾಗೂ ಗಾಜಿನ ಉತ್ಪನ್ನ

* ಪ್ಲಾಸ್ಟಿಕ್ ನೀರಿನ ಬಾಟಲಿ ಬದಲಿಗೆ ಸ್ಟೀಲ್, ಮಣ್ಣಿನ ಬಾಟಲಿ

* ಪ್ಲಾಸ್ಟಿಕ್ ಸ್ಟ್ರಾಗಳ ಬದಲಿಗೆ ಪೇಪರ್ ಸ್ಟ್ರಾ

ಬಟ್ಟೆ ಬ್ಯಾಗ್ ಉತ್ತಮ

ಹಣ್ಣು, ತರಕಾರಿ, ದಿನಸಿ ಹೀಗೆ ಯಾವುದೇ ವಸ್ತುಗಳನ್ನು ಕೊಳ್ಳುವಾಗ ಮನೆಯಿಂದಲೇ ಬಟ್ಟೆ ಬ್ಯಾಗ್ ಕೊಂಡೊಯ್ಯುವುದು ಉತ್ತಮ. ಇದಲ್ಲದೆ ಸೆಣಬಿನ ಬ್ಯಾಗ್ ಸಹ ಬಳಕೆ ಮಾಡಬಹುದಾಗಿದೆ. ಇದನ್ನು ಫ್ಯಾಶನ್ ಆಗಿ ಮಾಡಿಕೊಳ್ಳುವ ಮೂಲಕ ಇತರರಲ್ಲೂ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಲು ಪ್ರೋತ್ಸಾಹಿಸಬಹುದಾಗಿದೆ.

ಚೀಲಗಳಲ್ಲಿ ಇಂದು ಬಟ್ಟೆ, ಹತ್ತಿ ಮತ್ತು ಸೆಣಬಿನ ಚೀಲಗಳು ಬೇಡಿಕೆ ಪಡೆದುಕೊಂಡಿವೆ. ಈ ರೀತಿಯ ಚೀಲಗಳನ್ನು ಕಸ್ಟಮ್ ಬ್ರ್ಯಾಂಡ್ ಮಾಡಿದರೆ ಪರಿಸರಸ್ನೇಹಿ ಉತ್ಪನ್ನಗಳನ್ನು ಒದಗಿಸುವುದರ ಜತೆಗೆ ಉತ್ತಮ ಮಾರುಕಟ್ಟೆ ಒದಗಿಸಬಹುದಾಗಿದೆ. ಇದು ಉದ್ಯೋಗ ಸೃಷ್ಟಿಗೂ ಕಾರಣವಾಗಲಿದೆ.

ಸ್ಟೇನ್‌ಲೆಸ್ ಸ್ಟೀಲ್ ಬಳಕೆ ಉತ್ತಮವಾ?

ಸ್ಟೇನ್‌ಲೆಸ್ ಸ್ಟೀಲ್ ಅನ್ನು ಮರುಬಳಕೆ ಮಾಡಬಹುದಾಗಿದೆ. ಇದರಿಂದ ನೀರಿನ ಬಾಟಲಿಗಳು, ಆಹಾರ ಸಂಗ್ರಹಿಸುವ ಡಬ್ಬಗಳನ್ನು ತಯಾರಿಸಲಾಗುತ್ತದೆ. ಇದು ತುಕ್ಕು ನಿರೋಧಕವಾಗಿದ್ದು, ಸುಲಭವಾಗಿ ಸ್ವಚ್ಛಗೊಳಿಸಬಹುದಾಗಿದೆ. ದೈನಂದಿನ ಬಳಕೆಯ ಉತ್ಪನ್ನಗಳಿಗೆ ಉತ್ತಮ ಆಯ್ಕೆಯಾಗಿದ್ದು, ದೀರ್ಘಕಾಲ ಮರುಬಳಕೆ ಮಾಡಬಹುದಾಗಿದೆ. ಇವುಗಳ ಬಳಕೆ ಆರೋಗ್ಯಕ್ಕೂ ಉತ್ತಮವಾಗಿದೆ. ಪ್ಲಾಸ್ಟಿಕ್ ಬಾಟಲಿಗಳು ಮತ್ತು ಡಬ್ಬಗಳ ಬಳಕೆಯಿಂದ ಅದರಲ್ಲಿನ ರಾಸಾಯನಿಕಗಳು ಕಾಲಾನಂತರದಲ್ಲಿ ನೀರು ಮತ್ತು ಆಹಾರಕ್ಕೆ ಸೋರಿಕೆಯಾಗಿ ಅವುಗಳನ್ನು ಬಳಕೆ ಮಾಡುವವರಲ್ಲಿ ಲವತ್ತತೆ ಸಮಸ್ಯೆ, ಹೃದ್ರೋಗ, ಕ್ಯಾನ್ಸರ್‌ನಂತಹ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಲಿವೆ. ಸ್ಟೇನ್‌ಲೆಸ್ ಸ್ಟೀಲ್ ಉತ್ಪನ್ನಗಳಲ್ಲಿ ರಾಸಾಯನಿಕಗಳು ಇರುವುದಿಲ್ಲ. ಬಿಸಿಯಾದ ಆಹಾರ ತುಂಬಿಸಿದರೂ ಹಾನಿಯಾಗುವುದಿಲ್ಲ. ಪರಿಸರ ಮತ್ತು ಆರೋಗ್ಯದ ದೃಷ್ಟಿಯಿಂದಲೂ ಉತ್ತಮ ಆಯ್ಕೆಯಾಗಿದೆ.

ಗಾಜಿನ ಉತ್ಪನ್ನ

ಹೋಟೆಲ್, ಕೆಫೆಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಮರುಬಳಕೆ ಮಾಡಬಹುದಾದ ಗಾಜಿನ ಬಾಟಲಿಗಳು, ಆಹಾರ ಸಂಗ್ರಹ ಪಾತ್ರೆಗಳು ಮತ್ತು ಜಾಡಿಗಳು ಪ್ಲಾಸ್ಟಿಕ್‌ಗೆ ಪರ್ಯಾಯವಾಗಿವೆ. ಸ್ಟೇನ್‌ಲೆಸ್ ಸ್ಟೀಲ್‌ನಂತೆಯೇ, ಗಾಜಿನ ಉತ್ಪನ್ನಗಳು ಆಹಾರ ಅಥವಾ ಪಾನೀಯಗಳಿಗೆ ರಾಸಾಯನಿಕಗಳನ್ನು ಸೋರಿಕೆ ಮಾಡುವುದಿಲ್ಲ. ಇದು ಏಕ-ಬಳಕೆಯ ಪ್ಲಾಸ್ಟಿಕ್‌ಗಳಿಗಿಂತ ಆರೋಗ್ಯಕರ ಬಳಕೆಯನ್ನು ಖಾತ್ರಿಪಡಿಸುತ್ತದೆ.

ಆರೋಗ್ಯಕ್ಕೆ ಬಿದಿರು ಪೂರಕ

ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಬಿದಿರು ವಿಶೇಷವಾದದ್ದು. ಕೆಲ ರೆಸ್ಟೋರೆಂಟ್‌ಗಳಲ್ಲಿ ಬಿದಿರನ್ನು ಪಾತ್ರೆಗಳಿಗೆ ಪರ್ಯಾಯವಾಗಿ ಬಳಕೆ ಮಾಡಲಾಗುತ್ತಿದೆ. ಇದಲ್ಲದೆ ಹಲ್ಲುಜ್ಜುವ ಬ್ರಷ್‌ಗಳ ಹಿಡಿಕೆ, ಟ್ರೂತ್ ಪಿಕ್ ಇತ್ಯಾದಿಗಳಲ್ಲಿ ಬಿದಿರು ಉತ್ಪನ್ನಗಳನ್ನು ಬಳಕೆ ಮಾಡಬಹುದು.

ಕೋಟ್

ಪ್ಲಾಸ್ಟಿಕ್ ವಸ್ತುಗಳ ಆಗಮನಕ್ಕೂ ಮುನ್ನ ಬಹಳಷ್ಟು ನೈಸರ್ಗಿಕ ವಸ್ತುಗಳು ಬಳಕೆಯಲ್ಲಿದ್ದವು. ಆದರೆ ಪ್ಲಾಸ್ಟಿಕ್ ಉದ್ಯಮಿಗಳು ಕಡಿಮೆ ದರದಲ್ಲಿ ಲಭ್ಯ ಹಾಗೂ ಸುಲಭ ಬಳಕೆ ಎಂದಷ್ಟೇ ಹೇಳಿ ಅದರಿಂದಾಗುವ ಅಪಾಯಗಳನ್ನು ಮುಚ್ಚಿಟ್ಟು, ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿದರು. ಸರ್ಕಾರವೂ ಪ್ರೋತ್ಸಾಹ ನೀಡಿತು. ಆದರೆ ಪ್ಲಾಸ್ಟಿಕ್ ಬಳಕೆಯಿಂದ ಒಂದು ರೂ. ಖರ್ಚಾದರೆ, ಪರಿಸರ ಹಾಗೂ ಜೀವಿಗಳ ಮೇಲೆ 1000 ಪಟ್ಟು ದುಷ್ಪರಿಣಾಮ ಬೀರಿದವು. ಇದರ ನಿಯಂತ್ರಣ ಮಾಡದಿದ್ದರೆ ಭವಿಷ್ಯದಲ್ಲಿ ಅಪಾಯ ತಪ್ಪಿದ್ದಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಎಚ್ಚರಿಕೆ ವಹಿಸಬೇಕಿದೆ.

ಪರಿಸರ ತಜ್ಞ ಡಾ. ಎ.ಎನ್. ಯಲ್ಲಪ್ಪರೆಡ್ಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net