ಹಳ್ಳಿತಳಿ ಹಸುಗಳ ಸಾಕಣೆಗೂ ಆದ್ಯತೆ ನೀಡಿ

6ark-4
ಅರಕಲಗೂಡಿನಲ್ಲಿ ಶುಕ್ರವಾರ ಆಯೋಜಿಸಿದ್ದ ಆಧುನಿಕ ಹೈನುಗಾರಿಕಾ ತರಬೇತಿ ಕಾರ್ಯಾಗಾರದಲ್ಲಿ ಶಾಸಕ ಎ. ಮಂಜು ರೈತರಿಗೆ ಕಿಟ್ ವಿತರಿಸಿದರು. ಸುಂದರೇಶ್, ಶ್ವೇತಾ ಇತರರಿದ್ದರು.
Published on

ಅರಕಲಗೂಡು: ರೈತರು ಗುಣಮಟ್ಟದ ಹಾಲು ನೀಡುವ ಉತ್ತಮ ತಳಿಯ ಹಸುಗಳ ಜತೆಗೆ ಹಳ್ಳಿತಳಿ ಹಸುಗಳ ಸಾಕಣೆಗೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಸಕ ಎ. ಮಂಜು ಸಲಹೆ ನೀಡಿದರು.

ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ರೈತರಿಗೆ ಒಂದು ದಿನದ ‘ಆಧುನಿಕ ಹೈನುಗಾರಿಕಾ ತರಬೇತಿ ಕಾರ್ಯಾಗಾರ’ವನ್ನು ಉದ್ಘಾಟಿಸಿ ಮಾತನಾಡಿದರು.

ರೈತಾಪಿವರ್ಗದಲ್ಲಿನ ನೆಮ್ಮದಿ, ಶಾಂತಿ ಯಾವುದರಲ್ಲೂ ಸಿಗುವುದಿಲ್ಲ. ಭತ್ತ, ಜೋಳ ಬೆಳೆಗಳಿಗಿಂತ ಹೈನುಗಾರಿಕೆಯಿಂದ ರೈತರು ಆರ್ಥಿಕವಾಗಿ ಸಬಲೀಕರಣವಾಗಬಹುದು. ರೈತರು ಹಾಲಿನ ತಳಿಯ ಹಸುಗಳನ್ನು ಹೆಚ್ಚು ಸಾಕುತ್ತಿದ್ದು, ಹಳ್ಳಿ ತಳಿಗಳ ಸಾಕಣೆಯನ್ನು ಮಾಡಬೇಕು ಎಂದು ಹೇಳಿದರು.

ಸರ್ಕಾರದ ಯೋಜನೆಗಳನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಮರ್ಪಕವಾಗಿ ಜನರಿಗೆ ತಲುಪಿಸಬೇಕು. ಈ ಅಧಿಕಾರಿಗಳು ರೈತರ ಆದಾಯ ದುಪ್ಪಟ್ಟು ಮಾಡಲು ಏನು ಮಾಡಬೇಕೆಂದು ಆಲೋಚಿಸುತ್ತಿರಬೇಕೇ ಹೊರತು ಯಾವುದೇ ವ್ಯಕ್ತಿ, ಪಕ್ಷದ ಪರವಾಗಿರಬಾರದು. ಆಗ ಮಾತ್ರ ಸರ್ಕಾರದ ಸೌಲಭ್ಯಗಳು ಜನರಿಗೆ ಸಿಗುತ್ತವೆ ಎಂದು ಹೇಳಿದರು.

ಕಾರ್ಯಾಗಾರ ಉಸ್ತುವಾರಿ ನಾಗೇಂದ್ರ ಮಾತನಾಡಿ, ದೇಶದಲ್ಲಿ ಪಶುಪಾಲನಾ ಚಟುವಟಿಕೆಯಿಂದ 15 ಲಕ್ಷ ಕೋಟಿ ರೂ. ಆದಾಯ ಬರುತ್ತಿದೆ ಎಂದು ಅಂದಾಜಿಸಲಾಗಿದ್ದು, ಅದರಲ್ಲಿ ಸಿಂಹಪಾಲು 12 ಲಕ್ಷ ಕೋಟಿ ರೂ. ಹೈನುಗಾರಿಕೆಯದ್ದಾಗಿದೆ. ಹಸು ಸಾಕಣೆಯಿಂದ ಆದಾಯದ ಜತೆಗೆ ಗೊಬ್ಬರದಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಬಹುದಾಗಿದೆ ಎಂದರು.

ಹೈನುಗಾರಿಕೆಗೆ ಹೆಚ್ಚಿನ ಉತ್ತೇಜನ ನೀಡಲು ಕೇಂದ್ರ ಸರ್ಕಾರವು ಕುರಿ, ಕೋಳಿ, ಹಂದಿ, ಮೇಕೆ ಸಾಕಣೆಯನ್ನು ಒಂದು ದೊಡ್ಡ ಉದ್ಯಮವಾಗಿ ಮಾಡಬೇಕೆಂದು ಯೋಜನೆಯನ್ನು ಜಾರಿಗೆ ತಂದಿದ್ದು, ಶೇ.50ರಷ್ಟು ಪ್ರೋತ್ಸಾಹ ಧನ ನೀಡುತ್ತಿದೆ. ಹಾಗಾಗಿ ನಾವು ಓದಿದರೂ ಕೆಲಸ ಸಿಗಲಿಲ್ಲ. ನಿರುದ್ಯೋಗಿಗಳು ಎಂದು ಪಶ್ಚಾತ್ತಾಪ ಪಡದೆ ಗಂಭೀರವಾಗಿ ಪರಿಗಣಿಸಿ ದೊಡ್ಡಮಟ್ಟದಲ್ಲಿ ಉದ್ಯಮವಾಗಿ ಬೆಳೆಸಬಹುದು ಎಂದು ಹೇಳಿದರು.

ಹಾಸನ ಪಶುಪಾಲನಾ ಇಲಾಖೆ ಅಧಿಕಾರಿ ಸುಂದರೇಶ್, ಕೆನರಾ ಬ್ಯಾಂಕ್ ಶಾಖೆ ವ್ಯವಸ್ಥಾಪಕಿ ಶ್ವೇತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net