ಮೌಲ್ಯಯುತ ಶಿಕ್ಷಣದ ಜತೆ ಸಂಸ್ಕಾರ ಅಗತ್ಯ

ಮೌಲ್ಯಯುತ ಶಿಕ್ಷಣದ ಜತೆ ಸಂಸ್ಕಾರ ಅಗತ್ಯ
Published on

ಹಿರೀಸಾವೆ: ಮೌಲ್ಯಯುತ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಕಲಿಸುವುದು ಅಗತ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಅಧ್ಯಕ್ಷ ಎಚ್.ಎ.ಪ್ರಮೋದ್ ಹೇಳಿದರು.

ಇಲ್ಲಿನ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಕ್ಷರ ಅಭ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಉತ್ತಮ ಸಂಸ್ಕಾರವು ವಿದ್ಯಾರ್ಥಿಗಳ ಭವಿಷ್ಯದ ಬದುಕಿನ ದಾರಿದೀಪವಾಗಲಿದೆ ಎಂದರು.

ಬೇರೆಯವರ ಮಕ್ಕಳನ್ನು ತೋರಿಸಿ ತಮ್ಮ ಮಕ್ಕಳಿಗೆ ಶಿಕ್ಷಣ ಹಾಗೂ ಹೆಚ್ಚು ಅಂಕ ಗಳಿಕೆಯ ಬಗ್ಗೆ ಹೆಚ್ಚು ಒತ್ತಡ ನೀಡಬಾರದು. ಬದಲಿಗೆ ಮಕ್ಕಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಿಕ್ಷಣ, ಸುತ್ತಲಿನ ಸಮಾಜ ಹಾಗೂ ಮುಂದಿನ ಭವಿಷ್ಯದ ಬಗ್ಗೆ ಅರಿವು ಮೂಡಿಸುವ ಮೂಲಕ ಅವರನ್ನು ಉತ್ತಮ ದಾರಿಯಲ್ಲಿ ಕರೆದೊಯ್ಯಬೇಕು ಎಂದು ಪಾಲಕರಿಗೆ ಸಲಹೆ ನೀಡಿದರು.

ಇನ್ನು ಹಳೆ ವಿದ್ಯಾರ್ಥಿಗಳು, ತಾವು ಓದಿ ವಿದ್ಯಾವಂತರಾಗಿ ಉತ್ತಮ ಭವಿಷ್ಯ ರೂಪಿಸಿಕೊಂಡಿರುವ ತಮ್ಮ ಶಾಲೆಯತ್ತ ಗಮನ ಹರಿಸಬೇಕು. ಶಾಲೆ ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯ ಪರಿಕರಗಳನ್ನು ದಾನ ಅಥವಾ ಕೊಡುಗೆಯಾಗಿ ನೀಡುವ ಮೂಲಕ ಶಾಲೆಯ ಅಭಿವೃದ್ಧಿಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್ ಮೌರ್ಯ ಮಾತನಾಡಿ, ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತಾರೆಯೇ ಹೊರತು ಒಂದು ದಿನವೂ ಸಹ ಇತ್ತ ತಿರುಗಿ ನೋಡುವುದಿಲ್ಲ. ಪೋಷಕರ ಸಭೆ ಕರೆದರೂ ಸಹ ಆಗಮಿಸುದಿಲ್ಲ. ಪ್ರತಿಯೊಬ್ಬರು ಸೇರಿ ಶಾಲೆಯ ಆಗು-ಹೋಗುಗಳ ಬಗ್ಗೆ ಚರ್ಚಿಸಿ, ಚಿಂತನೆ ನಡೆಸಿ ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದರು.

ಶಿವಕುಮಾರ ಸ್ವಾಮೀಜಿಯವರು ಶಾರದ ಪೂಜೆ ನಡೆಸಿ ಮಕ್ಕಳಿಗೆ ಅಕ್ಷರಾಭ್ಯಾಸ ನೆರವೇರಿಸಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ರಾಧಾ ರಾಮೇಗೌಡ ಅವರು ಮಕ್ಕಳ ಮನೆಯ ವಿದ್ಯಾರ್ಥಿಗಳ ಶಿಕ್ಷಣದ ಸಲುವಾಗಿ ಟಿವಿಯನ್ನು ಕೊಡುಗೆಯಾಗಿ ನೀಡಿದರು.

ಗ್ರಾಪಂ ಅಧ್ಯಕ್ಷೆ ಜಯಮ್ಮ ಬೋರಯ್ಯ, ಸದಸ್ಯ ಮಾರುತಿ ಮಂಜು, ಎಸ್‌ಡಿಎಂಸಿ ಉಪಾಧ್ಯಕ್ಷೆ ಕವಿತಾ, ಇಸಿಒ ಶ್ರೀನಿವಾಸ್, ಪ್ರಮುಖರಾದ ಮನು, ಮುಖ್ಯಶಿಕ್ಷಕಿ ಎಚ್.ಬಿ.ಉಮಾ, ಸಹ ಶಿಕ್ಷಕರಾದ ದೇವರಾಜ್, ಎಲ್.ಎಸ್.ಧರ್ಮೇಶ್, ವಿನಯ ಎಂ.ಗಗನಾ, ಗೌರಮ್ಮ, ಶೋಭಾ, ದೇವಕಿ, ಎಸ್‌ಡಿಎಂಸಿ ಸದಸ್ಯರು, ಪಾಲಕರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net