ಅರಣ್ಯ ಸಂರಕ್ಷಣೆಗೆ ಜತೆಗೆ ಅಲ್ಲಿಯ ಸಂಪತ್ತನ್ನೂ ಕಾಪಾಡಿ

9hgr 2
Published on

ಹಲಗೂರು: ಅರಣ್ಯ ಸಂರಕ್ಷಣೆ ಮಾಡುವುದರ ಜತೆಗೆ ಅಲ್ಲಿಯ ಸಂಪತ್ತನ್ನು ಕಾಪಾಡುವ ಜವಾಬ್ದಾರಿ ಮುತ್ತತ್ತಿ ಅರಣ್ಯ ಪ್ರದೇಶದಲ್ಲಿ ವಾಸ ಮಾಡುವ ಪ್ರತಿಯೊಬ್ಬರ ಜವಾಬ್ದಾರಿ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸಲಹೆ ನೀಡಿದರು.


ತಾಳವಾಡಿ ದೇವಸ್ಥಾನದ ಬಳಿ ಇರುವ ಬಂಜರ ಭವನ ಆವರಣದಲ್ಲಿ ಜಿಲ್ಲಾಡಳಿತ ಮತ್ತು ಅರಣ್ಯ ಹಕ್ಕುಗಳ ಸಮಿತಿ ವತಿಯಿಂದ ಶನಿವಾರ ಲಂಬಾಣಿ ಹೊಸದೊಡ್ಡಿ ಮತ್ತು ಸೋಲಭ ಗ್ರಾಮಗಳ 78 ಅರಣ್ಯ ವಾಸಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು.


ಕಾಡಿನಲ್ಲಿ ಮರಗಳನ್ನು ಕಡಿಯುವುದರಿಂದ ವನ್ಯ ಸಂಪತ್ತು ನಾಶವಾಗುವುದರ ಜತೆಗೆ ನಿಮ್ಮ ಭವಿಷ್ಯವೂ ಹಾಳಾಗುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಂಡು ಕಾಡನ್ನು ಸಂರಕ್ಷಿಸಿ ಎಂದರು.


ನಿಮ್ಮ ಸಮುದಾಯಕ್ಕೆ ಹಕ್ಕುಪತ್ರ ನೀಡುವುದರ ಜತೆಗೆ ಸರ್ಕಾರದ ವತಿಯಿಂದ ಅನೇಕ ಯೋಜನೆಗಳನ್ನು ನೀಡುತ್ತಿದ್ದೇವೆ. 5 ಕೆಜಿ ಅಕ್ಕಿ ಜತೆಗೆ ಐದು ಕೆಜಿ ಅಕ್ಕಿ ಬೆಲೆಯ ಹಣ ನೀಡಲಾಗುತ್ತಿದೆ. ಪ್ರತಿ ಮನೆಗೂ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಅದಕ್ಕಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕೈ ಬಲಪಡಿಸಿ ಎಂದು ಮನವಿ ಮಾಡಿದರು.
ಸ್ಥಳೀಯ ಮುಖಂಡ ರಾಮಲಿಂಗ ನಾಯಕ್ ಮಾತನಾಡಿ, ನಾವು ಕಾಡಂಚಿನಲ್ಲಿ ವಾಸ ಮಾಡುವ ಜನಾಂಗದವರು, ನಮಗೆ ಕಾಡುಪ್ರಾಣಿಗಳ ಹಾವಳಿ ಜಾಸ್ತಿಯಾಗಿದ್ದು, ಬೆಳೆದ ಫಸಲುಗಳನ್ನು ಕಾಡಾನೆಗಳು ತುಳಿದು, ತಿಂದು ನಾಶಪಡಿಸುತ್ತಿವೆ. ಇದರಿಂದ ನಮಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಳ್ಳಲು ಆಗುತ್ತಿಲ್ಲ. ನಮಗೆ ವ್ಯವಸಾಯ ಮಾಡುವ ಜಮೀನಿಗೆ ಹಕ್ಕುಪತ್ರ ಕೊಡಿಸಿದರೆ ನಾವು ಪರಿಹಾರ ತೆಗೆದುಕೊಳ್ಳಲು ಸಹಕಾರಿಯಾಗುತ್ತದೆ. ರೈಲು ಕಂಬಿ ತಡೆಗೋಡೆ ಅಳವಡಿಸುವ ಮೂಲಕ ನಾವು ಬೆಳೆದ ಫಸಲನ್ನು ಉಳಿಸಿಕೊಳ್ಳಲು ಅನುಕೂಲ ಮಾಡಿಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದರು.


ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಜಿ ಆಪ್ತ ಕಾರ್ಯದರ್ಶಿ ವೀರನಾಯಕ್, ತಾಲೂಕು ದಂಡಾಧಿಕಾರಿ ಲೋಕೇಶ್, ಕಾರ್ಯನಿರ್ವಣಾಧಿಕಾರಿ ಮಮತಾ, ಅರಣ್ಯ ಇಲಾಖೆಯ ಅಧಿಕಾರಿ ರವಿ ಬುರ್ಜಿ, ಸಿಬ್ಬಂದಿ ಪ್ರವೀಣ್ ಕುಮಾರ್, ನಂದೀಶ್, ತಾಂಡಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಾಲರಾಜು, ಮುಖಂಡರಾದ ದೇವರಾಜು, ಚಂದ್ರಕುಮಾರ, ಬಸವರಾಜು, ಎಚ್.ಕೆ.ತೇಜ್‌ಕುಮಾರ್, ಶ್ಯಾಮ್, ಮರಿಸ್ವಾಮಿ, ಕೆಂಪಯ್ಯ, ಎಚ್.ವಿ.ರಾಜು, ಕೆಂಪಯ್ಯ ದೊಡ್ಡಿ ಮೋಹನ್‌ಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net