

ಎನ್.ಆರ್.ಪುರ: ವಾಲ್ಮೀಕಿ ಬರೆದ ರಾಮಾಯಣವು ಒಂದು ಸಾವಿರ ಭಾಷೆಗೆ ತರ್ಜುಮೆಯಾಗಿದೆ ಎಂದು ಮುತ್ತಿನಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕಿ ಬಿ.ಆರ್.ಆಶಾ ತಿಳಿಸಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ದೇಶದಲ್ಲಿ 300 ಬಗೆಯ ರಾಮಾಯಣ ಇದೆ. ಆದರೆ ರಾಮನ ಸಮಕಾಲೀನವರಾದ ವಾಲ್ಮೀಕಿ ಬರೆದ ರಾಮಾಯಣವೇ ಸತ್ಯವಾಗಿದೆ. ರಾಮಾಯಣ ಎಂಬುದು ಕೇವಲ ಕಥೆ, ಕಾವ್ಯ ಅಲ್ಲ. ಆ ಕಾಲಘಟ್ಟದ ಇತಿಹಾಸವಾಗಿದೆ. ವಾಲ್ಮೀಕಿ ವಿಚಾರಶೀಲರು, ಶಿಕ್ಷಣ ತಜ್ಞರು ಹಾಗೂ ಚಿಂತಕರಾಗಿದ್ದರು ಎಂದರು.
ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಮಾತನಾಡಿ, ವಾಲ್ಮೀಕಿ ರಾಮಾಯಣ ಬರೆದು ರಾಮನನ್ನು ಪ್ರಪಂಚಕ್ಕೆ ಪರಿಚಯಿಸಿದರು. ಸಮಾಜ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಎಲ್ಲ ಸಮಾಜದವರು ಪಾಲ್ಗೊಳ್ಳಬೇಕು. ಎಲ್ಲರೂ ಒಟ್ಟಾಗಿ ಆಚರಿಸಿದರೆ ಹೆಚ್ಚು ಅರ್ಥಪೂರ್ಣವಾಗಲಿದೆ ಎಂದು ಹೇಳಿದರು.
ಪಿಎಸ್‌ಐ ಬಿ.ಎಸ್.ನಿರಂಜನಗೌಡ ಮಾತನಾಡಿ, ರಾಮಾಯಣ ಬರೆದ ವಾಲ್ಮೀಕಿ ಯಾವುದೇ ಜನಾಂಗಕ್ಕೆ ಸೀಮಿತವಾಗಿಲ್ಲ. ಮಹಾತ್ಮರ ಆದರ್ಶ, ತತ್ವಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ದೃಷ್ಟಿಯಿಂದ ಸರ್ಕಾರವು ಜಯಂತಿಗಳನ್ನು ಆಚರಿಸುತ್ತಿದೆ. ಯಾವುದೇ ವ್ಯಕ್ತಿ ಪರಿವರ್ತನೆ ಹೊಂದಲು ಸಾಧ್ಯವಿದೆ ಎಂಬುದಕ್ಕೆ ವಾಲ್ಮೀಕಿಯೆ ದೊಡ್ಡ ಉದಾಹರಣೆಯಾಗಿದ್ದಾರೆ ಎಂದರು. ಪಪಂ ಅಧ್ಯಕ್ಷೆ ಸುರೈಯಾಭಾನು, ತಹಸೀಲ್ದಾರ್ ತನುಜಾ ಟಿ.ಸವದತ್ತಿ, ನಿರಂಜನಮೂರ್ತಿ, ಸೈಯದ್‌ವಸೀಂ, ಎಂ.ಪಿ.ಮನು, ಎ.ಸಿ.ಶ್ರೀನಿವಾಸ್, ಎಚ್.ಎಂ.ಶಿವಣ್ಣ, ಡಿ.ರಾಮು, ಭವಾನಿ, ಶೆಟ್ಟಿಕೊಪ್ಪ ಮಹೇಶ್, ಮಂಜುನಾಥ್ ಇದ್ದರು.