

ಹುಣಸೂರು: ಮೈಸೂರಿಗೆ ಸೆ.1ರಂದು ಭೇಟಿ ನೀಡಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆದಿವಾಸಿಗಳ ಬೇಡಿಕೆಯನ್ನುಳ್ಳ ಮನವಿ ಪತ್ರ ಸಲ್ಲಿಸಲು ಅವಕಾಶ ನೀಡಬೇಕು ಎಂದು ಆದಿವಾಸಿ ಮುಖಂಡರು ಅಪರ ಜಿಲ್ಲಾಧಿಕಾರಿ ಡಾ.ಶಿವರಾಜ್ ಅವರಿಗೆ ಮನವಿ ಸಲ್ಲಿಸಿದರು.
ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಆದಿವಾಸಿ ಮುಖಂಡರು ಅಪರ ಜಿಲ್ಲಾಧಿಕಾರಿ ಡಾ.ಶಿವರಾಜ್‌ಗೆ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್, ಸೆ.1ರಂದು ದೇಶದ ರಾಷ್ಟ್ರಪತಿಗಳು ಮೈಸೂರಿಗೆ ಭೇಟಿ ನೀಡುತ್ತಿದ್ದು, ಈ ವೇಳೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿರುವ ಆದಿವಾಸಿ ಸಮುದಾಯಗಳು ತಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರಾಷ್ಟ್ರಪತಿಗಳಲ್ಲಿ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. 4 ದಶಕಗಳಿಂದ ಆದಿವಾಸಿಗಳನ್ನು ಕಾಡುತ್ತಿರುವ ಹಲವು ಜ್ವಲಂತ ಸಮಸ್ಯೆಗಳು ಪರಿಹಾರವಾಗಬೇಕಿದೆ. ಈ ಕುರಿತು ಈಗಾಗಲೇ ಆದಿವಾಸಿ ಜನತಾ ಪಾರ್ಲಿಮೆಂಟ್ ಸಮಿತಿಯಲ್ಲಿ 18 ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಈ ಕುರಿತು ರಾಷ್ಟ್ರಪತಿಗಳಿಗೆ ಮನವರಿಕೆ ಮಾಡಿಕೊಡಬೇಕಿದೆ ಎಂದರು.
ಬೇಡಿಕೆಗಳು : ಅರಣ್ಯಹಕ್ಕು ಕಾಯ್ದೆ ಸಮಗ್ರ ಜಾರಿ, ರಾಜ್ಯ ಉಚ್ಚ ನ್ಯಾಯಾಲಯದ ಆದೇಶ (ಪ್ರೊ.ಅಸಾದಿ ವರದಿ ಶಿಫಾರಸಿನ ಅನ್ವಯ) ಜಾರಿಗೊಳಿಸುವುದು, ಆದಿವಾಸಿ ಪ್ರದೇಶಗಳನ್ನು 5ನೇ ಅನುಸೂಚಿತ ಪ್ರದೇಶವೆಂದು ಘೋಷಣೆ, ಪೇಸಾ ಕಾಯ್ದೆ ಜಾರಿ ಮಾಡಿ ಆದಿವಾಸಿಗಳಿಗೆ ಸ್ವಯಂ ನಿರ್ಣಯದ ಹಕ್ಕು ಜಾರಿ ಮಾಡಲು ಅವಕಾಶ ಮುಂತಾದವುಗಳು ಇವೆ. ಈ ಎಲ್ಲ ವಿಷಯಗಳ ಕುರಿತು ರಾಷ್ಟ್ರಪತಿಗಳ ಗಮನ ಸೆಳೆಯಬೇಕಿದ್ದು ಅವಕಾಶ ಕೋರಲಾಗಿದೆ ಎಂದು ತಿಳಿಸಿದರು.
ಮನವಿ ಪತ್ರ ಸಲ್ಲಿಕೆ ವೇಳೆ ಮುಖಂಡರಾದ ಆದಿವಾಸಿ ಮಹಿಳಾ ಸಂಘದ ಅಧ್ಯಕ್ಷೆ ಲಕ್ಷ್ಮೀ, ಆದಿವಾಸಿ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕೊಳವಿಗೆ ಜಯಪ್ಪ, ಕೆಂಪಮ್ಮ, ಸೀತೆ ಇದ್ದರು.