

ಗೋಣಿಕೊಪ್ಪ: ಮೈಸೂರು-ಕೊಡಗು ಲೋಕಸಭಾ ಚುನಾವಣೆಯ ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಚಾರ ಸಭೆ ಪೊನ್ನಂಪೇಟೆ ತಾಲೂಕಿನಿಂದ ಭಾನುವಾರ ಆರಂಭಗೊಂಡಿದೆ.
ಪೊನ್ನಂಪೇಟೆಯ ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮೈತ್ರಿ ಕೂಟದ ಅಭ್ಯರ್ಥಿ ಯದುವೀರ್ ಚಾಮರಾಜ ಒಡೆಯರ್ ಮಾತನಾಡಿ, ಜೀವನದಿ ಕಾವೇರಿ ಉಗಮ ಸ್ಥಳ ಹಾಗೂ ವೀರ ಪರಂಪರೆಯ ನಾಡಿನಲ್ಲಿ ಸೇವೆಗೆ ಅವಕಾಶ ದೊರಕಿದ್ದು ನನ್ನ ಸೌಭಾಗ್ಯ ಎಂದರು. ಪ್ರಧಾನ ಮಂತ್ರಿಗಳ ಆಶೀರ್ವಾದದಿಂದ, ಪಕ್ಷದ ಪ್ರಮುಖರಿಂದ ನನಗೆ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ದೊರಕಿದ್ದು, ನಿಮ್ಮೆಲ್ಲರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂಬ ಭರವಸೆಯನ್ನು ನೀಡುತ್ತಿದ್ದೇನೆ ಎಂದರು.
ಕಳೆದ ಹತ್ತು ವರ್ಷಗಳಲ್ಲಿ ಮೋದಿ ಅವರು ಹಲವು ಯೋಜನೆಗಳ ಮೂಲಕ ದೇಶದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಇವತ್ತು ವಿಶ್ವದಲ್ಲೇ ಭಾರತವನ್ನು ಗುರುತಿಸುವ ರೀತಿಯಲ್ಲಿ ಆಡಳಿತ ನಡೆಸಿದ್ದಾರೆ. ಇದುವರೆಗೂ ಆಗದ ಹಲವು ಜನಪರ ಕಾರ್ಯಕ್ರಮಗಳು ಮೋದಿಯವರ ಅವಧಿಯಲ್ಲಿ ಶೀಘ್ರಗತಿಯಲ್ಲಿ ಆಗಿವೆ ಎಂದರು.
ದೇಶದ ಉನ್ನತಿಗಾಗಿ, ಸಾಮಾಜಿಕ ನ್ಯಾಯಕ್ಕಾಗಿ ಮತ್ತೊಮ್ಮೆ ಪ್ರಧಾನಿಯಾಗಿ ಮೋದಿಯವರನ್ನು ಕಾಣಲು ಈ ಬಾರಿ ನನಗೆ ಮತವನ್ನು ನೀಡಿ ಹೆಚ್ಚಿನ ಬಹುಮತದಿಂದ ಆರಿಸಿ ಕಳಿಸುವಂತೆ ಮನವಿ ಮಾಡಿದರು.
ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಮಾತನಾಡಿ, 2019ರ ಲೋಕಸಭಾ ಚುನಾವಣೆಯ ಸಂದರ್ಭ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿದರೆ ಹಿಂದುಗಳ ಬಹು ದಿನಗಳ ಬೇಡಿಕೆ 2024ರ ಒಳಗೆ ಈಡೇರುತ್ತೆ ಎಂದು ಚುನಾವಣೆ ಸಂದರ್ಭ ಹೇಳಿದ್ದೇವೆ. ಅದರಂತೆ 500-600 ವರ್ಷಗಳ ಬೇಡಿಕೆಯ ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಾಣ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ್ದೇವೆ ಎಂದರು.
ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿದರೆ ಇಡೀ ದೇಶದಲ್ಲಿ ರಕ್ತಪಾತವಾಗುತ್ತೆ ಎಂದು ಕಾಂಗ್ರೆಸ್ ಹೇಳಿತ್ತು. ಆದರೆ, ಇಂದು 370 ವಿಧಿಯನ್ನು ರದ್ದು ಮಾಡಿ ಅಲ್ಲಿನವರ ಸ್ವಚ್ಛಂದ ಬದುಕಿಗೆ ಅಣಿಯಾದಾಗ ಯಾವ ರಕ್ತಪಾತವೂ ಆಗಲಿಲ್ಲ. ಇಂದು ಅಲ್ಲಿನ ಪ್ರವಾಸೋದ್ಯಮದಿಂದ ಕಾಶ್ಮೀರ ಮತ್ತೆ ವಿಶ್ವ ಪ್ರಸಿದ್ಧಿಯಾಗಿದೆ. ನಾಗರಿಕ ಹಕ್ಕು ಕಾಯ್ದೆ ಜಾರಿಗೆ ತರಲು ಹೊರಟಾಗ ಕಾಂಗ್ರೆಸ್ ಅನ್ಯ ಧರ್ಮಿಯರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾಧ್ಯಕ್ಷ ರವಿಕಾಳಪ್ಪ, ತಾಲೂಕು ಅಧ್ಯಕ್ಷ ಸುವಿನ್ ಗಣಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೆಲ್ಲಿರ ಚಲನ್, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಸುನೀಲ್ ಸುಬ್ರಮಣಿ, ರೀನಾ ಪ್ರಕಾಶ್, ಪದ್ಮಿನಿ ಪೊನ್ನಪ್ಪ, ಯಮುನಾ ಚೆಂಗಪ್ಪ, ಕವಿತಾ, ಮುದ್ದಿಯಡ ಮಂಜು, ಶಕ್ತಿ ಕೇಂದ್ರದ ಅಧ್ಯಕ್ಷ ಅಡ್ಡಂಡ ನೀಲನ್, ಮಧುಕುಮಾರ್, ಶ್ಯಾಮ್ ಪೂಣಚ್ಚ, ಮಾಚಿಮಾಡ ರವೀಂದ್ರ, ಅಡ್ಡಂಡ ಕಾರ್ಯಪ್ಪ, ಆಲೆಮಡ ಸುದಿ, ಕೋಟೆರ ಕಿಶನ್, ದಶಮಿ ಸದಾ, ಕಬೀರ್ ದಾಸ್ ಇತರರು ಇದ್ದರು.