ವಿರಾಜಪೇಟೆ: ಆರ್ಜಿ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ತಮ್ಮ ರಾಜಕೀಯ ಸ್ವಾರ್ಥ ಸಾಧನೆಗಾಗಿ ಆರ್ಜಿ ಗೋಮಾಳ ಸಮಿತಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಆಪಾದನೆ ಮಾಡುತ್ತಿದ್ದು, ಅವರು ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಸಮಿತಿ ಅಧ್ಯಕ್ಷ ಜಿ.ಕೆ.ರಾಮಯ್ಯ ತಿಳಿಸಿದ್ದಾರೆ.
ಜ.27ರಂದು ವಿ.ಎಸ್.ವಿಠಲ ಎಂಬವರ ಹಸು ಕಾಣೆಯಾಗಿದೆ ಎಂದು ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅವರು ಹಸುವನ್ನು ಹುಡುಕುತ್ತಿದ್ದಾಗ ಗುಂಡಿಗೇರೆ ಉಮ್ಮರ್ ಎಂಬುವರ ಮನೆಯಲ್ಲಿ ಹಸು ಪತ್ತೆಯಾಗಿದೆ. ಅವರನ್ನು ಪೊಲೀಸರು ವಿಚಾರಣೆ ನಡೆಸಿದಾಗ ಆರ್ಜಿ ಗ್ರಾಮ ಪಂಚಾಯಿತಿ ಸದಸ್ಯ ಉಪೇಂದ್ರ ಎಂಬುವರ ಬಳಿ 7 ಸಾವಿರ ರೂ.ಗೆ ಖರೀದಿ ಮಾಡಲಾಗಿದೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಉಪೇಂದ್ರ ಅವರ ವಿರಾಜಪೇಟೆ ನಗರ ಠಾಣೆಯಲ್ಲಿ ಎಫ್‌ಐಆರ್ ಮಾಡಲಾಗಿದೆ. ಉಪೇಂದ್ರ ಅವರು ತನ್ನ ಮೇಲೆ ಬಂದಿರುವ ಆರೋಪವನ್ನು ಮರೆಮಾಚಲು ಇದಕ್ಕೆಲ್ಲಾ ಗೋಮಾಳ ಸಮಿತಿ ಅವರೇ ಕಾರಣ ಎಂದು ಸಾಮಾಜಿಕ ಜಾಲತಾಣದಲ್ಲಿ ಗೋಮಾಳ ಸಮಿತಿಯ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಗೋಮಾಳ ಸಮಿತಿ ಇಂತಹ ನೀಚ ಕೆಲಸಕ್ಕೆ ಇಳಿಯುವುದಿಲ್ಲ. ಅವರು ಮಾಡಿರುವ ಕೃತ್ಯಕ್ಕೂ ಗೋಮಾಳ ಸಮಿತಿಗೂ ಯಾವುದೇ ಸಂಬಂಧ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಖಜಾಂಚಿ ಹೇಮಂತ್ ನಾಯಕ್, ಬಿ.ಪಿ.ಜೀವನ್ ಹಾಜರಿದ್ದರು.