ಗುಂಡ್ಲುಪೇಟೆ: ತಾಲೂಕಿನ ಬೇಗೂರು ಸಮೀಪದ ನಿಟ್ರೆ ಗ್ರಾಮದಲ್ಲಿ ಸೋಮವಾರ (ಸೆ.23) ದಿಂದ ಅಲ್ಲಹಳ್ಳಿ ಮಾರಮ್ಮ ಪಾರ್ವತಾಂಬೆ ಜಾತ್ರಾ ಮಹೋತ್ಸವ ಆರಂಭವಾಗಿದ್ದು, 25ರವರೆಗೆ ನಡೆಯಲಿದೆ.
ಸೋಮವಾರದಂದು ಗ್ರಾಮದ ಭಕ್ತರು ದೇಶೀಪುರ ಸಮೀಪದ ಬಂಡೀಪುರ ಅರಣ್ಯ ಪ್ರದೇಶದಲ್ಲಿರುವ ಮೂಲ ದೇವತೆ ಶ್ರೀ ಪಾರ್ವತಾಂಬೆಗೆ ಪೂಜೆ ಸಲ್ಲಿಸಿದರು. ಸೆ. 24ರಂದು ಮಂಗಳವಾರ ಮಧ್ಯಾಹ್ನ ಗ್ರಾಮಕ್ಕೆ ಆಗಮಿಸುವರು. ನಂತರ ಗ್ರಾಮದ ಅರಳಿ ಮರದ ಆವರಣಕ್ಕೆ ತೇರನ್ನು ಎಳೆದು ತರುವ ಭಕ್ತರು ಉತ್ಸವ ಮೂರ್ತಿಯನ್ನು ರಥದಲ್ಲಿ ಇರಿಸಿ ಮಂಗಳವಾದ್ಯಗಳು, ಜಾನಪದ ಕಲಾತಂಡಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು. ಹರಕೆ ಹೊತ್ತ ಭಕ್ತರು ಬಾಯಿ ಬೀಗ ಸೇರಿದಂತೆ ನಾನಾ ಸೇವೆಗಳನ್ನು ನೆರವೇರಿಸುವರು.
ಸೆ.25ರಂದು ಬೆಳಗಿನ ಜಾವ ಲಕ್ಷ್ಮೀದೇವಿ ದೇವಾಲಯದ ಬಳಿ ಇರುವ ಅಮಟೆ ಮರದ ಬಳಿ ನಿಲ್ಲಿಸಲಾಗುತ್ತದೆ. ತೇರು ಸಾಗಿದ ದಾರಿಯಲ್ಲಿ ಮತ್ತೆ ಹಿಂದುರುಗಿದ ನಂತರ ಜಾತ್ರೆಗೆ ತೆರೆ ಬೀಳಲಿದೆ. ಆದ್ದರಿಂದ ಸುತ್ತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.