ಕಾವೇರಿಗಾಗಿ ಎಲ್ಲರೂ ಒಂದಾಗಿ

SRP_03-03jpj
Published on

ಶ್ರೀರಂಗಪಟ್ಟಣ: ಕಾವೇರಿ ನೀರಿನ ವಿಚಾರದಲ್ಲಿ ಧರ್ಮ, ಜಾತಿ, ಸಮುದಾಯ ಯಾವುದನ್ನು ನೋಡದೆ ಒಂದಾಗಿ ಸರ್ಕಾರದ ನಡೆ ವಿರುದ್ಧ ದನಿ ಎತ್ತಬೇಕು ಎಂದು ಮುಸ್ಲಿಂ ಸೌಹಾರ್ದ ಒಕ್ಕೂಟದ ಅಧ್ಯಕ್ಷ ಅಫ್ಸರ್ ಪಾಲಹಳ್ಳಿ ಕರೆ ನೀಡಿದರು.


ಪಟ್ಟಣದಲ್ಲಿ ಮಂಗಳವಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದರ ವಿರುದ್ಧ ಮೆರವಣಿಗೆ ನಡೆಸಿ ಬಳಿಕ ತಾಲೂಕು ಕಚೇರಿಯ ಮುಂಭಾಗ ಭೂಮಿ ತಾಯಿ ಹೋರಾಟ ಸಂಘಟನೆ ಕಾರ್ಯಕರ್ತರೊಂದಿಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿ ಮಾತನಾಡಿದರು.


ಕೆಆರ್‌ಎಸ್‌ನಿಂದ ಕುಡಿಯುವ ನೀರು ಉಳಿಸದಂತೆ ತಮಿಳುನಾಡು ಸರ್ಕಾರಕ್ಕೆ ಮಣಿದು ಹರಿಸುತ್ತಿರುವುದು ಸರಿಯಲ್ಲ. ಈ ಬಗ್ಗೆ ಕೆಲವು ಪ್ರಗತಿಪರ, ಕನ್ನಡ ಹೋರಾಟ ಸಂಘಟನೆ ಹಾಗೂ ರೈತಾಪಿ ಜನರು ಮಾತ್ರ ವಿರೋಧಿಸದೆ ಕನ್ನಡಿಗರೆಲ್ಲ ಪ್ರತಿಭಟಿಸಬೇಕು ಎಂದರು.


ಇದಕ್ಕೂ ಮುನ್ನ ರೈತ ನಾಯಕ ಕೆ.ಎಸ್.ನಂಜುಂಡೇಗೌಡ ನೇತೃತ್ವದಲ್ಲಿ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಪಟ್ಟಣದ ಕುವೆಂಪು ವೃತ್ತದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಿಂದ ತಾಲೂಕು ಕಚೇರಿವರೆಗೂ ಕಪ್ಪುಪಟ್ಟಿ ಧರಿಸಿ ಬೈಕ್ ರ‌್ಯಾಲಿ ನಡೆಸಿದರು.


ಮುಜೀಬ್ ಶಾಲಿಮಾರ್, ಗಂಜಾಂ ಖಾಸೀಂ, ಬಾಬು, ಶುಕೂರ್‌ಭೈಯ್ಯ, ಅಯೂಬ್, ರೇಷ್ಮಾ, ಸಾಮಾಜಿಕ ಹೋರಾಟಗಾರ್ತಿ ಅಮ್ರೀನ್ ತಾಜ್, ಭೂಮಿ ತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಉಪಾಧ್ಯಕ್ಷರುಗಳಾದ ಹನಿಯಂಬಾಡಿ ನಾಗರಾಜು, ಜಯರಾಮೇಗೌಡ, ಕಾರ್ಯದರ್ಶಿ ಎಂ.ವಿ.ಕೃಷ್ಣ, ಖಜಾಂಚಿ ಪುಟ್ಟಮಾದು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net