ಸಾರ್ವಕಾಲಿಕ ಗರಿಷ್ಠ ದರ ದಾಖಲು

ಸಾರ್ವಕಾಲಿಕ ಗರಿಷ್ಠ ದರ ದಾಖಲು
Published on

ಹಿರಿಕರ ರವಿ ಸೋಮವಾರಪೇಟೆ
ರೋಬಸ್ಟಾ ಹಾಗೂ ಅರೇಬಿಕಾ ಕಾಫಿ ಬೆಲೆ ಮೊದಲ ಬಾರಿಗೆ ಸಾರ್ವಕಾಲಿಕ ಗರಿಷ್ಠ ದರ ದಾಖಲಿಸಿದೆ.

ಶುಕ್ರವಾರ ರೋಬಸ್ಟಾ ಪಾರ್ಚ್‌ಮೆಂಟ್ 50 ಕೆ.ಜಿ.ಗೆ 17,200 ರೂ., ರೋಬಸ್ಟಾ ಚೆರಿಗೆ 10,200 ರೂ., ಅರೇಬಿಕಾ ಪಾರ್ಚ್‌ಮೆಂಟ್ 15,900ರೂ., ಅರೇಬಿಕಾ ಚೆರಿಗೆ 9500 ರೂ., ಬೆಲೆ ಇದ್ದು, ಕಾಫಿ ಬೆಳೆಗಾರರು ಸಂಭ್ರಮಪಡುವಂತಾಗಿದೆ.

ಕಳೆದ ಏಪ್ರಿಲ್ ಕೊನೆ ವಾರದಲ್ಲಿ ರೋಬಸ್ಟಾ ಪಾರ್ಚ್‌ಮೆಂಟ್ 50 ಕೆ.ಜಿ.ಗೆ 14,600 ರೂ., ರೋಬಸ್ಟಾ ಚೆರಿಗೆ 8950 ರೂ., ಅರೇಬಿಕಾ ಪಾರ್ಚ್‌ಮೆಂಟ್ 14,550ರೂ., ಅರೇಬಿಕಾ ಚೆರಿಗೆ 8,450 ರೂ., ಬೆಲೆ ಇತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅರೇಬಿಕಾ ಪಾರ್ಚ್‌ಮೆಂಟ್ ದರ 18 ಸಾವಿರ ರೂ. ಹಾಗೂ ರೋಬಸ್ಟಾ ಪಾರ್ಚ್‌ಮೆಂಟ್ ದರ ಚೀಲಕ್ಕೆ 19,200 ರೂ. ಇದೆ ಎಂಬುದನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಮುದ್ರಮನೆ ಕಾಫಿ ಖರೀದಿದಾರರು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದ ಖರೀದಿದಾರರು ತಮ್ಮಲ್ಲಿ ಕಾಫಿ ಸಂಗ್ರಹವಿಲ್ಲದೆ ರಫ್ತಿಗೆ ಅಡಚಣೆಯಾದ ಸಂದರ್ಭದಲ್ಲಿ ಅತಿ ಹೆಚ್ಚು ಬೆಲೆ ನೀಡಿ ಕಾಫಿ ಖರೀದಿ ಮಾಡುವ ಸಂಭವ ಇರುತ್ತದೆ. ಇದು ತಾತ್ಕಾಲಿಕವಷ್ಟೇ ಎಂದು ಕೊಡಗಿನ ಕಾಫಿ ಖರೀದಿದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾರುಕಟ್ಟೆ ತಜ್ಞರ ಪ್ರಕಾರ ಜಾಗತಿಕ ಬೇಡಿಕೆಯಲ್ಲಿ ಗಣನೀಯ ಏರಿಕೆ, ವಿಶ್ವದ ಅಗ್ರಗಣ್ಯ ಕಾಫಿ ರಪ್ತುದಾರ ದೇಶಗಳಾದ ಬ್ರೆಜಿಲ್, ಇಂಡೋನೇಷ್ಯಾ ಮತ್ತು ವಿಯಟ್ನಾಂನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ರೋಬಸ್ಟಾ ಕಾಫಿ ಬೆಳೆ ನಾಶವಾಗಿರುವುದೇ ದರ ಏರಿಕೆಗೆ ಕಾರಣವಾಗಿದೆ ಎನ್ನಲಾಗಿದೆ.

ಕೊಡಗಿನ ಮಡಿಕೇರಿ ತಾಲೂಕಿನಲ್ಲಿ 1250 ಹೆಕ್ಟೇರ್‌ನಲ್ಲಿ ಅರೇಬಿಕಾ ಕಾಫಿ ಮತ್ತು 22,956 ಹೆ.ನಲ್ಲಿ ರೋಬಸ್ಟಾ ಕಾಫಿ ಬೆಳೆಯಲಾಗುತ್ತಿದೆ. ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿನಲ್ಲಿ 25050 ಹೆ.ನಲ್ಲಿ ಅರೇಬಿಕಾ ಮತ್ತು 6870 ಹೆ. ರೋಬಸ್ಟಾ, ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನಲ್ಲಿ 1740 ಹೆ.ನಲ್ಲಿ ಅರೇಬಿಕಾ ಮತ್ತು 50453 ಹೆ.ರೋಬಸ್ಟಾ ಬೆಳೆಯಲಾಗುತ್ತಿದೆ.

ಕೊಡಗು ಜಿಲ್ಲೆ 4106 ಚದರ ಕಿ.ಮೀ. ವ್ಯಾಪ್ತಿ ಹೊಂದಿದ್ದು, 1197 ಚ.ಕಿ. ಪ್ರದೇಶದ ಕಾಫಿ ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ಉತ್ಪಾದನೆಯಾಗುವ ಕಾಫಿಯಲ್ಲಿ ಶೇ.44ರಷ್ಟು ಕೊಡಗಿನಲ್ಲಿ ಉತ್ಪಾದನೆಯಾಗುತ್ತಿದೆ. ಭಾರತದ ಮಟ್ಟಿಗೆ ಶೇ.35ರಷ್ಟು ಕಾಫಿ ಕೊಡಗಿನಲ್ಲಿ ಉತ್ಪಾದನೆಯಾಗುತ್ತಿದೆ. ವಾರ್ಷಿಕ 1,10,730 ಮೆಟ್ರಿಕ್ ಟನ್ ಕಾಫಿ ಕೊಡಗಿನಲ್ಲಿ ಉತ್ಪಾದನೆಯಾಗುತ್ತಿದೆ.

ಅಕಾಲಿಕ ಮಳೆ, ಮುಂಗಾರು ವಿಳಂಬ, ರೋಗಬಾಧೆ, ಕಾರ್ಮಿಕರ ಕೊರತೆ, ದುಪ್ಪಟ್ಟು ಕೂಲಿ, ಗಗನಕ್ಕೇರಿದ ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬೆಲೆಯಿಂದ ಉತ್ಪಾದನಾ ವೆಚ್ಚ ಹೆಚ್ಚಾಗಿ ಕಾಫಿ ಬೆಳೆಗಾರರು ಸಾಲಗಾರರಾಗಿದ್ದರು. ಅನೇಕರು ಕಾಫಿ ತೋಟ ನಿರ್ವಹಣೆ ಮಾಡಲಾಗದೇ ಪಾಳುಬಿಟ್ಟಿದ್ದರು. ಹೊರ ರಾಜ್ಯದಿಂದ ಬಂದು ಕೊಡಗಿನಲ್ಲಿ ಕಾಫಿ ತೋಟವನ್ನು ಖರೀದಿ ಮಾಡುತ್ತಿದ್ದಾರೆ. ಸಾಲಗಾರರಾದ ಅನೇಕ ಬೆಳೆಗಾರರರು ಕಾಫಿ ತೋಟಗಳನ್ನು ಮಾರಾಟ ಮಾಡುತ್ತಿದ್ದಾರೆ.

ಕಾಫಿ ಉದ್ದಿಮೆ ಲಾಭದಾಯಕವಲ್ಲ ಎಂಬುದು ಬಿಂಬಿತವಾಗಿರುವಾಗಲೇ ಅರೇಬಿಕಾ ಮತ್ತು ರೋಬಸ್ಟಾ ಕಾಫಿ ಬೆಲೆ ಹೆಚ್ಚಾಗುತ್ತಿರುವುದು ಕಾಫಿ ಬೆಳೆಗಾರರಿಗೆ ಆಶಾಭಾವನೆ ಮೂಡುತ್ತಿದೆ.

ತಾಲೂಕಿನ ಶಾಂತಳ್ಳಿ ಹೋಬಳಿ ಸೇರಿದಂತೆ ಮಲೆನಾಡ ಭಾಗದಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಏಲಕ್ಕಿ ಬೆಳೆಯುತ್ತಿದ್ದರು. 1994ರಲ್ಲಿ ಕಾಫಿ ಮುಕ್ತ ಮಾರುಕಟ್ಟೆ ಸಿಕ್ಕಿದ ನಂತರ ಅರೇಬಿಕಾ ಕಾಫಿ ಬೆಲೆ ಗಗನಕ್ಕೇರಿತ್ತು. ವಾರ್ಷಿಕ ಮಳೆಯೂ ಕಡಿಮೆಯಾದಂತೆ ಶಾಂತಳ್ಳಿ ಹೋಬಳಿ ಮತ್ತು ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಏಲಕ್ಕಿ ತೋಟ ತೆಗೆದು ಕಾಫಿ ತೋಟ ಮಾಡಲು ಪ್ರಾರಂಭಿಸಿದರು. ಇವತ್ತು ಎಕರೆಗೆ ಒಂದರಿಂದ ಎರಡು ಟನ್ ರೋಬಸ್ಟಾ ಕಾಫಿ ಉತ್ಪಾದನೆ ಮಾಡುತ್ತಿದ್ದಾರೆ. ಕಾಫಿ ಬೆಲೆ ಹೆಚ್ಚಾದ ಹಿನ್ನೆಲೆಯಲ್ಲಿ ತೋಟ ನಿರ್ವಹಣೆಗೆ ಹೆಚ್ಚಿನ ಹಣ ವ್ಯಯಿಸಿ, ಉತ್ಪಾದನೆಯೂ ಹೆಚ್ಚಳವಾಗಲಿದೆ ಎಂದು ಬೆಳೆಗಾರ ಲೋಕೇಶ್ ಹೇಳಿದರು.

ಅರೇಬಿಕಾ ಕಾಫಿಗೆ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಇದಕ್ಕೆ ರೋಗಬಾಧೆ ಹೆಚ್ಚು, ವಾರ್ಷಿಕವಾಗಿ 4 ಬಾರಿ ರಾಸಾಯನಿಕ ಗೊಬ್ಬರ ಹಾಕಬೇಕು. ಮೂರು ಬಾರಿ ಸಿಲೀಂಧ್ರನಾಶಕ ಸಿಂಪಡಿಸಬೇಕು. ಬಿಳಿಕಾಂಡಕೊರಕ ನಿಯಂತ್ರಣಕ್ಕೆ ಮಾರ್ಚ್ ಮತ್ತು ಅಕ್ಟೋಬರ್‌ನಲ್ಲಿ ಕಾಂಡಗಳಿಗೆ ಕೀಟನಾಶಕ ಸಿಂಪಡಿಸಬೇಕು. ಮರಗಪಾತು, ಗಿಡಕಪಾತು, ಕಳೆ ತೆಗೆಯಬೇಕು. ಇವಿಷ್ಟು ನಿರ್ವಹಣಾ ಕೆಲಸ ಮಾಡಿದರೆ ಮಾತ್ರ ಕಾಫಿ ಗಿಡಗಳು ಅರೋಗ್ಯವಾಗಿರುತ್ತವೆ. ಒಂದು ವರ್ಷ ನಿರ್ವಹಣಾ ಕೆಲಸ ಕೈಬಿಟ್ಟರೆ, ಕಾಫಿ ತೋಟ ರೋಗಪೀಡಿತವಾಗುತ್ತವೆ. ಅರೇಬಿಕಾ, ರೋಬಸ್ಟಾ ಪಾರ್ಚ್‌ಮೆಂಟ್ ಚೀಲಕ್ಕೆ ಸರಾಸರಿ 18 ರಿಂದ 20 ಸಾವಿರ ರೂ. ಬೆಲೆ ಸಿಕ್ಕರೆ ಮಾತ್ರ ಕಾಫಿ ಉದ್ಯಮ ಲಾಭದಾಯಕವಾಗುತ್ತದೆ ಎಂದು ಬೆಳೆಗಾರ ಎಚ್.ಪಿ.ಗಗನ್ ಪತ್ರಿಕೆಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net