ಎನ್ನೆಸ್ಸೆಸ್‌ನಿಂದ ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನ

blm (2)
Published on

ಕಾರ್ಕಳ: ಎನ್‌ಎಸ್‌ಎಸ್ ನಮ್ಮನ್ನು ನಾವು ಅರಿತುಕೊಳ್ಳಲು ಸಹಕಾರಿಯಾಗಿದ್ದು ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ ಎಂದು ಕಾರ್ಕಳ ಮಂಜುನಾಥ ಪೈ ಮೆಮೊರಿಯಲ್ ಕಾಲೇಜು ಪ್ರಾಂಶುಪಾಲ ಡಾ.ಸುರೇಶ್ ರೈ ಹೇಳಿದರು. ಕಾರ್ಕಳ ಕ್ರೈಸ್ಟ್‌ಕಿಂಗ್ ಪಪೂ ಕಾಲೇಜಿನಲ್ಲಿ ಇತ್ತೀಚೆಗೆ ಎನ್ನೆಸ್ಸೆಸ್ ಘಟಕ ಉದ್ಘಾಟನೆ ಮತ್ತು ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಎನ್ನೆಸ್ಸೆಸ್ ನಿವೃತ್ತ ರಾಜ್ಯ ಅಧಿಕಾರಿ ಡಾ.ಗಣನಾಥ ಶೆಟ್ಟಿ, ಕಾರ್ಕಳ ತಾಲೂಕು ಪೊಲೀಸ್ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್. ಮಾತನಾಡಿದರು. ಕ್ರೈಸ್ಟ್‌ಕಿಂಗ್ ಎಜುಕೇಷನ್ ಟ್ರಸ್ಟ್ ಸದಸ್ಯ ಡಾ.ಪೀಟರ್ ಫರ್ನಾಂಡಿಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವಜನತೆ ದೇಶಕಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡಾಗ ಭಾರತ ವಿಶ್ವನಾಯಕನಾಗಲು ಸಾಧ್ಯ. ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಂಡಾಗ ಮಕ್ಕಳಲ್ಲಿ ಪ್ರಬುದ್ಧತೆ ಹೆಚ್ಚುತ್ತದೆ. ಮಕ್ಕಳಲ್ಲಿ ಜೀವನ ಕೌಶಲ ವೃದ್ಧಿಸಲು ಎನ್ನೆಸ್ಸೆಸ್ ಸಹಕಾರಿ ಎಂದರು. ಸಂಸ್ಥೆ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್ನೆಸ್ಸೆಸ್ ವಿದ್ಯಾರ್ಥಿಗಳಿಂದ ಕಿರುಪ್ರಹಸನ ನಡೆಯಿತು. ಉಪ ಪ್ರಾಂಶುಪಾಲ ಡಾ.ಪ್ರಕಾಶ್ ಭಟ್, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ, ಪ್ರೌಢಶಾಲಾ ಮುಖ್ಯಶಿಕ್ಷಕಿ ಜೋಸ್ನಾಸ್ನೇಹಲತಾ ಉಪಸ್ಥಿತರಿದ್ದರು. ಎನ್ನೆಸ್ಸೆಸ್ ಸಹಯೋಜನಾಧಿಕಾರಿ ದೀಪಕ್ ಸ್ವಾಗತಿಸಿದರು. ಎನ್ನೆಸ್ಸೆಸ್ ಯೋಜನಾಧಿಕಾರಿ ಸುಕನ್ಯಾ ಜೈನ್ ವಂದಿಸಿದರು. ಕನ್ನಡ ಉಪನ್ಯಾಸಕ ಉಮೇಶ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net