ಶಿಕ್ಷಣದಿಂದಲೇ ದೇಶದ ಸರ್ವಾಂಗೀಣ ಅಭಿವೃದ್ಧಿ

06-06-rama-Madhu Bangarappa
Published on

| ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ

| ಜಾಲಮಂಗಲ ಸರ್ಕಾರಿ ಶಾಲೆಯ ನೂತನ ಕಟ್ಟಡ ಉದ್ಘಾಟನೆ

ರಾಮನಗರ

ದೇಶದ ಸರ್ವಾಂಗೀಣ ಪ್ರಗತಿ ಶಿಕ್ಷಣದಿಂದ ಮಾತ್ರ ಸಾಧ್ಯ . ಈ ದಿಸೆಯಲ್ಲಿ ರಾಜ್ಯ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದು, ಶಾಲೆ-ಕಾಲೇಜುಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.

ಮಾಗಡಿ ವಿಧಾನ ಸಭಾ ಕ್ಷೇತ್ರದ ಕೂಟಗಲ್ ಹೋಬಳಿಯ ಜಾಲಮಂಗಲದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು,

ರಾಜ್ಯದಲ್ಲಿ 46 ಸಾವಿರ ಸರ್ಕಾರಿ ಶಾಲೆಗಳು ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರುತ್ತವೆ. ಎಲ್.ಕೆ.ಜಿಯಿಂದ ದ್ವಿತೀಯ ದ್ವಿತೀಯ ಪಿಯುಸಿ, ಅನುದಾನಿತ ಶಾಲೆಗಳು ಸೇರಿ ಸುಮಾರು 57 ಲಕ್ಷ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳು ಓದುವ ಶಾಲೆ-ಕಾಲೇಜುಗಳ ಕಟ್ಟಡಗಳನ್ನು ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸುವ ಮೂಲಕ ಶಿಕ್ಷಣ ರಂಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಾಗುತ್ತಿದೆ ಎಂದರು.

ಕ್ಯಾಟ್ಲರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಿಎಸ್‌ಆರ್ ನಿಧಿಯಡಿ 2 ಕೋಟಿ ರೂ. ವೆಚ್ಚದಲ್ಲಿ ನೂತನ ಶಾಲಾ ಕಟ್ಟಡದ ನಿರ್ಮಾಣವಾಗಿದೆ. ಇಲ್ಲಿನ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಿಕೊಡಲು ಈ ಪ್ರಯತ್ನ ಮಾಡಲಾಗಿದೆ. ಇದಕ್ಕೆ ಅರ್ಥ ಬರಬೇಕಾದರೆ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಬಹಳ ಉನ್ನತ ಸ್ಥಾನಕ್ಕೆ ಏರುವ ಮೂಲಕ ಏಳಿಗೆಯಾಗಬೇಕು. ಆಗ ಪಾಲಕರು, ಶಾಲೆ, ಗ್ರಾಮಕ್ಕೆ ಹಾಗೂ ಶಾಲೆ ನಿರ್ಮಿಸಿಕೊಟ್ಟ ಕಂಪನಿಗೆ ಗೌರವ ತಂದುಕೊಟ್ಟAತಾಗುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಕ್ಯಾಟಲರ್ ಇಂಡಿಯಾ ಆಟೋಪಾರ್ಟ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಶಿಗೇಜಿ ಮತ್ಸುಮೋಟೋ ಮಾತನಾಡಿ, ವಿದ್ಯಾರ್ಥಿಗಳು ಕನಸುಗಳನ್ನು ನನಸು ಮಾಡಿಕೊಳ್ಳಬೇಕೆಂದರೆ ಉತ್ತಮ ಶಿಕ್ಷಣವನ್ನು ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದುಕೊಂಡರೆ ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ಹೊರಹೊಮ್ಮಬಹುದು ಎಂದು ಹೇಳಿದರು.

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಎಚ್.ಸಿ.ಬಾಲಕೃಷ್ಣ ಹಾಗೂ ಮಾಜಿ ಸಂಸದ, ಬಮುಲ್ ನಿರ್ದೇಶಕ ಡಿ.ಕೆ.ಸುರೇಶ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎಂಎಲ್ ಸಿ ಪುಟ್ಟಣ್ಣ, ಎಸ್.ರವಿ, ರಾಮೋಜಿಗೌಡ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ರಾಜು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಟರಾಜು ಗಾಣಕಲ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕೆ.ರಮೇಶ್, ತಾ ಪಂ ಮಾಜಿ ಅಧ್ಯಕ್ಷ ಮಹಾದೇವಯ್ಯ, ಜಾಲಮಂಗಲ ಗ್ರಾಪಂ ಅಧ್ಯಕ್ಷೆ ಪದ್ಮಮ್ಮ, ತಾಪಂ ಇಓ ಪೂರ್ಣಿಮಾ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸವರಾಜೇಗೌಡ, ಬಿಇಒ ಸೋಮಲಿಂಗಯ್ಯ, ಮುಖ್ಯಶಿಕ್ಷಕ ತಮ್ಮಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net