ಬಿತ್ತನೆ ಬೀಜ ವಿತರಣೆಗೆ ಸಕಲ ಸಿದ್ಧತೆ

15mnd1 photo
Published on

ಮುಂಡಗೋಡ: ಮುಂಗಾರು ಹಂಗಾಮಿಗಾಗಿ ರೈತರಿಗೆ ಸಹಾಯ ಧನದಲ್ಲಿ ಬಿತ್ತನೆ ಬೀಜ ವಿತರಿಸಲು ಪಾಳಾ ಹಾಗೂ ಮುಂಡಗೋಡ ಕೃಷಿ ಇಲಾಖೆಯಲ್ಲಿ ಬೀಜ ಸಂಗ್ರಹ ಜೋರಾಗಿದೆ.

ತಾಲೂಕಿನಲ್ಲಿ ಅತೀ ಹೆಚ್ಚಿನ ಪ್ರದೇಶದಲ್ಲಿ ಭತ್ತ ಬೆಳೆ ಬೆಳೆಯಲಾಗುತ್ತಿದೆ. ರೈತರಿಗೆ ಕೃಷಿ ಇಲಾಖೆಯಿಂದ ಸಹಾಯ ಧನದಲ್ಲಿ ಬಿತ್ತನೆ ಬೀಜ ವಿತರಣೆ ಮಾಡಲು ಬೀಜ ಸಂಗ್ರಹಿಸಲಾಗುತ್ತಿದೆ. ಕೆಲ ರೈತರು ಬಿತ್ತನೆ ಬೀಜ ತೆಗೆದುಕೊಂಡು ಹೋಗಲು ಕೃಷಿ ಇಲಾಖೆಗೆ ಆಗಮಿಸುತ್ತಿದ್ದು, ಈ ತಿಂಗಳ ಅಂತ್ಯದಲ್ಲಿ ಅಥವಾ ಮುಂದಿನ ತಿಂಗಳ ಮೊದಲ ವಾರದಲ್ಲಿ ಬೀತ್ತನೆ ಬೀಜ ವಿತರಿಸುವುದಾಗಿ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸಂಗ್ರಹವಿರುವ ಬೀಜಗಳು: ರೈತರಿಗೆ ಅವಶ್ಯವಿರುವ ಬಿತ್ತನೆ ಬೀಜಗಳನ್ನು ಮುಂಡಗೋಡ ಕೃಷಿ ಇಲಾಖೆಯಲ್ಲಿ ಸಂಗ್ರಹ ಮಾಡಿಕೊಳ್ಳುತ್ತಿದ್ದು ಸದ್ಯ ಅಭಿಲಾಷ್, ಜಯಾ, 1001, 1010, ಪಯೋನಿಯರ್, ಗಂಗಾಕಾವೇರಿ, ಧಾನ್ಯಾ, ಮಹರಾಜ, ಮಹಿಕೋ, ಪಿಎಸಿ, ಎನ್.ಕೆ. ಕಂಪನಿಯ ಗೋವಿನಜೋಳದ ಪಾಕೆಟ್​ಗಳನ್ನು ಸಂಗ್ರಹ ಮಾಡಲಾಗುತ್ತದೆ. ಅಲ್ಲದೆ, ತಾಲೂಕಿನಲ್ಲಿರುವ ವಿವಿಧ ಅಗ್ರೋ ಕೇಂದ್ರಗಳಲ್ಲಿ ಹತ್ತಿ ಬೀಜಗಳು ಹಾಗೂ ರಾಸಾಯನಿಕ ಗೊಬ್ಬರಗಳನ್ನು ಸಂಗ್ರಹಿಸಲಾಗುತ್ತಿದೆ.

 ಬೀಜಗಳ ಬೇಡಿಕೆ: ತಾಲೂಕಿಗೆ 1415 ಕ್ವಿಂಟಾಲ್ ಭತ್ತದ ಬೀಜ ಹಾಗೂ 450 ಕ್ವಿಂಟಾಲ್ ಗೋವಿನಜೋಳದ ಬೇಡಿಕೆ ಸಲ್ಲಿಸಿದ್ದು, ಸದ್ಯ 75 ಕ್ವಿಂಟಾಲ್ ಭತ್ತದ ಬೀಜ ಹಾಗೂ 138 ಕ್ವಿಂಟಾಲ್ ಗೋವಿನಜೋಳ ಸಂಗ್ರಹಿಸಲಾಗಿದೆ. ಬಿತ್ತನೆ ಬೀಜಗಳು ಪ್ರತಿ ದಿನ ಹಂತ ಹಂತವಾಗಿ ಕೃಷಿ ಇಲಾಖೆಗೆ ಆಗಮಿಸುತ್ತಿವೆ.

ಪಾಳಾ ಹಾಗೂ ಮುಂಡಗೋಡ ಕೃಷಿ ಇಲಾಖೆಗಳಲ್ಲಿ ಭತ್ತ ಹಾಗೂ ಗೋವಿನಜೋಳ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲು ಸಂಗ್ರಹ ಮಾಡಲಾಗುತ್ತಿದೆ. ರೈತರ ಬೇಡಿಕೆಯಂತೆ ಈ ತಿಂಗಳ ಕೊನೆಯಲ್ಲಿ ಅಥವಾ ಮುಂದಿನ ತಿಂಗಳ ಮೊದಲ ವಾರದಲ್ಲಿ ಬಿತ್ತನೆ ಬೀಜ ವಿತರಿಸುತ್ತೇವೆ.  | ಕೃಷ್ಣಪ್ಪ ಮಹಾರೆಡ್ಡಿ ಸಹಾಯಕ ಕೃಷಿ ನಿರ್ದೇಶಕ ಮುಂಡಗೋಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net